ಸಿಸಿಬಿಯನ್ನು ಸುಸ್ತಾಗಿಸುತ್ತಿರುವ ಆಂಬಿಡೆಂಟ್ ವಂಚನೆ ಪ್ರಕರಣ
ಬೆಂಗಳೂರು, ನವೆಂಬರ್ 13: ಆಂಬಿಡೆಂಟ್ ವಂಚನೆ ಪ್ರಕರಣದ ಬೆನ್ನು ಬಿದ್ದಿರುವ ಸಿಸಿಬಿ ಜನಾರ್ದನ ರೆಡ್ಡಿ ಅಂತಹಾ ಭಾರಿ ಕುಳವನ್ನು ಖೆಡ್ಡಾಕ್ಕೆ ಕೆಡವಿದೆ. ಆದರೆ ಇದರ ತನಿಖೆ ಮಾತ್ರ ಸಿಸಿಬಿಯನ್ನೇ ಸುಸ್ತು ಮಾಡುತ್ತಿದೆ.
ಆಂಬಿಡೆಂಟ್ ವಂಚನೆ ಪ್ರಕರಣ ಬಹಳ ಆಳವಾಗಿ ಬೇರು ಬಿಟ್ಟಿರುವುದು ಮತ್ತು ಅದರ ಬಂಡವಾಳ ಹೂಡಿಕೆದಾರರನ್ನು ಹುಡುಕುವುದು, ಅದರಲ್ಲಿ ನ್ಯಾಯಯುತ ಹೂಡಿಕೆದಾರರು, ನಕಲಿ ಹೂಡಿಕೆದಾರರನ್ನು ಪತ್ತೆ ಹಚ್ಚುವುದು ಇದೆಲ್ಲಾ ಸಿಸಿಬಿಗೆ ಭಾರಿ ತಲೆನೋವಾಗಿ ಪರಿಣಮಿಸುತ್ತಿದೆ.
ಮೊನ್ನೆಯಷ್ಟೆ ಜನಾರ್ದನ ರೆಡ್ಡಿ ಅವರನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಸಿಸಿಬಿ ಇಂದು ಕುಖ್ಯಾತ ಮಾಜಿ ರೌಡಿ ಒಬ್ಬನ ಮನೆಗಳ ಮೇಲೆ ದಾಳಿ ಮಾಡಿದೆ.
ಶಿವಾಜಿ ನಗರದ ಮಾಜಿ ಕಾರ್ಪೊರೇಟರ್ ಒಬ್ಬರ ಪತಿ ಇಸ್ತಿಯಾಕ್ ಎಂಬುವರ ಮನೆಯ ಮೇಲೆ ಸಿಸಿಬಿ ಇಂದು ದಾಳಿ ನಡೆಸಿದ್ದು ಬಹುಕಾಲ ತಲಾಶ್ ನಡೆಸಿದೆ. ಆಂಬಿಡೆಂಟ್ ಪ್ರಕರಣದಲ್ಲಿ ಈತನೂ ಸಹ ಆರೋಪಿ ಎನ್ನಲಾಗಿದೆ. ಸಿಸಿಬಿ ದಾಳಿ ನಡೆಸಿದ ಸಂದರ್ಭದಲ್ಲಿ ಇಸ್ತಿಯಾಕ್ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.

ಸಾವಿರಾರು ಖಾತೆಗಳಿಂದ ಆಂಬಿಡೆಂಟ್‌ಗೆ ಹಣ
ಸಾವಿರಾರು ಖಾತೆಗಳಿಂದ ಆಂಬಿಡೆಂಟ್ ಮಾಲೀಕ ಫರೀದ್ ಖಾತೆಗೆ ಹಣ ಬಂದಿದ್ದು, ಆತನ ಖಾತೆಯಿಂದಲೂ ಹಲವು ಖಾತೆಗಳಿಗೆ ಹಲವು ಸಮಯದಲ್ಲಿ ಭಿನ್ನ-ಭಿನ್ನ ಮೊತ್ತದ ಹಣ ವರ್ಗಾವಣೆ ಆಗಿದೆ. ಇದೆಲ್ಲದುರ ತನಿಖೆ ಮಾಡಲು ಸಿಸಿಬಿಗೆ ಬಹು ಸಮಯ ಬೇಕಾಗುತ್ತಿದೆ.

ಹೆಸರುಗಳಿಂದಲೂ ಗೊಂದಲ
ಹೆಸರುಗಳು ಒಂದೇ ರೀತಿ ಇರುವುದು ಸಹ ಸಿಸಿಬಿ ತನಿಖೆಯನ್ನು ನಿಧಾನ ಮಾಡುತ್ತಿದೆ. ಬಹುತೇಕ ಮುಸ್ಲಿಮರನ್ನೇ ಗುರಿ ಮಾಡಿ ಫರೀದ್ ವಂಚಿಸಿದ್ದು, ಬಹುತೇಕರು ಒಂದೇ ಮಾದರಿ ಹೆಸರಿನವರಾಗಿದ್ದಾರೆ. ಮೊಹಮ್ಮದ್, ಫರೀದ್, ಈ ರೀತಿ ಒಂದೇ ರೀತಿಯ ಹೆಸರಿನವರು ಸಾಕಷ್ಟು ಮಂದಿ ಇದ್ದಾರೆ. ಇವರೆಲ್ಲಾ ನಿಜವಾದ ಹೂಡಿಕೆದಾರರೆ ಅಥವಾ ನಕಲಿಯೇ ಅದನ್ನೂ ಸಿಸಿಬಿ ಪತ್ತೆ ಹಚ್ಚಬೇಕಿದೆ.

ಕೆಲವು ಹೂಡಿಕೆದಾರರು ಮುಂದೆ ಬರುತ್ತಿಲ್ಲ
ಹಲವು ಜನ ಹೂಡಿಕೆದಾರರು ತಾವು ಹೂಡಿಕೆ ಮಾಡಿದ್ದೇವೆಂದು ಮುಂದೆ ಸಹ ಬರುತ್ತಿಲ್ಲ ಎನ್ನಲಾಗಿದೆ. ಹೆಚ್ಚು ಹಣ ಹೂಡಿಕೆ ಮಾಡಿದವರು, ತಮಗೆ ಐಟಿಯಿಂದ ತೊಂದರೆ ಆಗಬಹುದೇನೋ ಎಂದು ಅಳುಕಿ ಮುಂದೆ ಬರುತ್ತಿಲ್ಲ ಎನ್ನುವುದು ಸಹ ಸಿಸಿಬಿಗೆ ತಲೆನೋವಾಗಿದೆ.

ಜನಾರ್ದನ ರೆಡ್ಡಿಗೆ ಜಾಮೀನು ಮುಂದಕ್ಕೆ
ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಆರನೇ ಆರೋಪಿ ಆಗಿರುವ ಜನಾರ್ದನ ರೆಡ್ಡಿ ಅವರು ಜಾಮೀನಿಗಾಗಿ ಹಾಕಿದ್ದ ಅರ್ಜಿ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಲಯವು ಮುಂದಕ್ಕೆ ಹಾಕಿದೆ. ನವೆಂಬರ್ 14 ರಂದು ಅರ್ಜಿ ಕುರಿತು ಆದೇಶ ಹೊರಡಿಸಲಿದೆ.












Click it and Unblock the Notifications