ಬಿಬಿಎಂಪಿ ಪ್ರತಿ ವಾರ್ಡಗೆ ನೋಡೆಲ್ ಅಧಿಕಾರಿ ನೇಮಕ
ಬೆಂಗಳೂರು, ಸೆಪ್ಟೆಂಬರ್ 15 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೌನ್ಸಿಲ್ ಅವಧಿ ಪೂರ್ಣಗೊಂಡಿದೆ. ಬಿಬಿಎಂಪಿ ಚುನಾವಣೆ ಡಿಸೆಂಬರ್ ವೇಳೆಗೆ ನಡೆಯುವ ನಿರೀಕ್ಷೆ ಇದೆ. ಪ್ರಸ್ತುತ ಸರ್ಕಾರ ಬಿಬಿಎಂಪಿಗೆ ಆಡಳಿತಾಧಿಕಾರಿ ನೇಮಕ ಮಾಡಿದೆ.
ಸೆಪ್ಟೆಂಬರ್ 10ರಂದು ಕೌನ್ಸಿಲ್ ಅವಧಿ ಪೂರ್ಣಗೊಂಡಿದೆ. ಪಾಲಿಕೆ ಆಡಳಿತಾಧಿಕಾರಿಯಾಗಿ 1990ನೇ ಬ್ಯಾಚ್ ಐಎಎಸ್ ಅಧಿಕಾರಿ ಗೌರವ್ ಗುಪ್ತ ಅಧಿಕಾರ ಸ್ವೀಕರಿಸಿದ್ದಾರೆ. ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿ ಪ್ರಕಟವಾಗಿದೆ.
ಈಗ ವಾರ್ಡ್ ಮಟ್ಟದಲ್ಲಿ ಕಾರ್ಪೊರೇಟರ್‌ಗಳು ಇಲ್ಲ. ಆದ್ದರಿಂದ, ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ವಾರ್ಡ್‌ಗೊಬ್ಬರು ನೋಡೆಲ್ ಅಧಿಕಾರಿ ನೇಮಕ ಮಾಡಲಾಗುತ್ತದೆ. ವಾರ್ಡ್ ಸಮಿತಿ ಜೊತೆ ಸಭೆ ನಡೆಸಲಿದ್ದಾರೆ.

ಚುನಾವಣೆ ನಡೆದು ಹೊಸ ಕೌನ್ಸಿಲ್ ಅಸ್ತಿತ್ವಕ್ಕೆ ಬರುವ ತನಕ ಬಿಬಿಎಂಪಿಯಲ್ಲಿ ಅಧಿಕಾರಿಗಳ ಆಡಳಿತ ನಡೆಯಲಿದೆ. ವಾರ್ಡ್ ಮಟ್ಟದಲ್ಲಿ ಕಾರ್ಪೊರೇಟರ್ ಇಲ್ಲದ ಕಾರಣಕ್ಕೆ ಅಧಿಕಾರಿಗಳು ನೋಡೆಲ್ ಅಧಿಕಾರಿಗಳನ್ನು ನೇಮಿಸುವ ತೀರ್ಮಾನವನ್ನು ಕೈಗೊಂಡಿದ್ದಾರೆ.
ಬಿಬಿಎಂಪಿ ವಾರ್ಡ್ ಸಮಿತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ. ಈಗ ಸಮಿತಿಗಳ ಸಲಹೆ ಸ್ವೀಕರಿಸಲು ನೋಡೆಲ್ ಅಧಿಕಾರಿ ನೇಮಿಸಲಾಗುತ್ತಿದೆ. ಇಂತಹ ಆದೇಶಗಳ ಮೂಲಕ ಜನರಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ಜನರು ಹೇಳಿದ್ದಾರೆ.
ಹೊಸ ಕೌನ್ಸಿಲ್ ಅಸ್ತಿತ್ವಕ್ಕೆ ಬರುವ ತನಕ ಬಿಬಿಎಂಪಿ ಆಡಳಿತವನ್ನು ಗೌರವ್ ಗುಪ್ತ ನೋಡಿಕೊಳ್ಳಲಿದ್ದಾರೆ. ಆದರೆ, ನೋಡೆಲ್ ಅಧಿಕಾರಿ ನೇಮಿಸುವ ಕುರಿತು ಇನ್ನೂ ಅಂತಿಮ ತೀರ್ಮಾನವನ್ನು ಕೈಗೊಂಡಿಲ್ಲ.












Click it and Unblock the Notifications