Bengaluru Metro City: ಬೆಂಗಳೂರಿಗೆ ಮೆಟ್ರೋ ನಗರದ ಸ್ಥಾನಮಾನವಿಲ್ಲ
ಬೆಂಗಳೂರು, ಆಗಸ್ಟ್ 08: ಉದ್ಯಾನ ನಗರಿ ಬೆಂಗಳೂರಿಗೆ ಮೆಟ್ರೋ ಸಿಟಿ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಇದರಿಂದಾಗಿ ಮನೆ ಬಾಡಿಗೆ ಭತ್ಯೆ ತೆರಿಗೆ ವಿನಾಯಿತಿ ಸೇರಿ ಕೆಲವು ಅನುಕೂಲಗಳನ್ನು ಪಡೆಯಬಹುದು ಎಂಬ ಲೆಕ್ಕಾಚಾರ ತಪ್ಪಿದೆ. 2024-25ರ ಕೇಂದ್ರ ಬಜೆಟ್‌ನಲ್ಲಿಯೇ ಈ ಕುರಿತು ಘೋಷಣೆ ಮಾಡಲಾಗುತ್ತದೆ ಎಂದು ನಿರೀಕ್ಷೆಯನ್ನು ಮಾಡಲಾಗಿತ್ತು. ದೇಶದಲ್ಲಿ ಪ್ರಸ್ತುತ 4 ನಗರಗಳನ್ನು ಮಾತ್ರ ಮೆಟ್ರೋ ಸಿಟಿ ಎಂದು ಗುರುತಿಸಲಾಗಿದೆ.
ಸಂಸತ್ ಬಜೆಟ್ ಅಧಿವೇಶನದಲ್ಲಿ ಈ ಕುರಿತು ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್ ಚೌಧರಿ ಮಾಹಿತಿ ನೀಡಿದ್ದಾರೆ. "ಆದಾಯ ತೆರಿಗೆ ನಿಯಮಗಳು 1962 ನಿಯಮ 2-ಎ ಅಡಿಯಲ್ಲಿ ಮೆಟ್ರೋ ನಗರಗಳು ಮತ್ತು ಇತರ ನಗರಗಳ ನಡುವೆ ಹಲವು ವ್ಯತ್ಯಾಸವಿದೆ. ಬೆಂಗಳೂರು ನಗರಕ್ಕೆ ಮೆಟ್ರೋ ನಗರದ ಸ್ಥಾನಮಾನ ನೀಡುವ ಆಲೋಚನೆ ಇಲ್ಲ" ಎಂದು ಸ್ಪಷ್ಟಪಡಿಸಿದರು.

ತಮ್ಮ ಉತ್ತರದಲ್ಲಿ ಪಂಕಜ್ ಚೌಧರಿ, "ದೇಶದ ಪ್ರಮುಖ ನಗರಗಳಾದ ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಚೆನ್ನೈ ಅನ್ನು ಮೆಟ್ರೋ ಸಿಟಿ ಎಂದು ಗುರುತಿಸಲಾಗುತ್ತದೆ. ಸದ್ಯ ಅಸ್ತಿತ್ವದಲ್ಲಿರುವ ನೀತಿಯನ್ನು ಬದಲಾಯಿಸುವ ಉದ್ದೇಶ ಸರ್ಕಾರದ ಮುಂದಿಲ್ಲ. ಆದ್ದರಿಂದ ಬೆಂಗಳೂರು ನಗರವನ್ನು ಮೆಟ್ರೋ ಸಿಟಿ ಎಂದು ಘೋಷಣೆ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದರು.
ಮೆಟ್ರೋ ಸಿಟಿ ಸ್ಥಾನಮಾನ: ಬೆಂಗಳೂರು ನಗರಕ್ಕೆ ಮೆಟ್ರೋ ಸಿಟಿ ಎಂಬ ಸ್ಥಾನಮಾನ ಸಿಕ್ಕಿದರೆ ಆ ನಗರಕ್ಕೆ ಮನೆ ಬಾಡಿಗೆ ಭತ್ಯೆ ತೆರಿಗೆ ವಿನಾಯಿತಿ ಸೇರಿ ಕೆಲವು ಅನುಕೂಲಗಳು ಸಿಗುತ್ತವೆ. ಇದರಿಂದಾಗಿ ಉದ್ಯೋಗಿಗಳು, ಕಂಪನಿಗಳಿಗೆ ಸಹ ಸಹಾಯಕವಾಗಲಿದೆ. ಬೆಂಗಳೂರನ್ನು ಮೆಟ್ರೋ ನಗರ ಎಂದು ಬಜೆಟ್‌ನಲ್ಲಿಯೇ ಘೋಷಣೆ ಮಾಡಲಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಈಗ ಮೆಟ್ರೋ ಸಿಟಿ ಸ್ಥಾನಮಾನ ನೀಡುವುದಿಲ್ಲ ಎಂದು ಕೇಂದ್ರ ತಿಳಿಸಿದೆ.
ಸದ್ಯ ಇರುವ ನಿಯಮಗಳ ಪ್ರಕಾರ ಮೆಟ್ರೋ ನಗರಗಳಲ್ಲಿ ಸೆಕ್ಷನ್ 10 (13ಎ) ಅಡಿಯಲ್ಲಿ ವಿನಾಯಿತಿ ಮಿತಿ ಲೆಕ್ಕ ಹಾಕಲು ವೇತನದ ಶೇ50ರಷ್ಟನ್ನು ಪರಿಗಣನೆ ಮಾಡಲಾಗುತ್ತದೆ. ಉದ್ಯೋಗಿಗಳು ಮೂಲ ವೇತನದ ಶೇ50ರಷ್ಟನ್ನು ಮನೆ ಬಾಡಿಗೆ ಭತ್ಯೆ ತೆರಿಗೆ ವಿನಾಯಿತಿ ಪಡೆಯಬಹುದು.
ಆದರೆ ಮೆಟ್ರೋ ನಗರವಲ್ಲದ ಕಡೆ ಮೂಲ ವೇತನದ ಶೇ 40ರಷ್ಟನ್ನು ಮಾತ್ರ ಹೆಚ್‌ಆರ್‌ಎ ತೆರಿಗೆ ವಿನಾಯಿತಿ ಎಂದು ಪಡೆಯಬಹುದು. ಆದ್ದರಿಂದ ಬೆಂಗಳೂರನ್ನು ಮೆಟ್ರೋ ನಗರ ಎಂದು ಘೋಷಣೆ ಮಾಡಬೇಕು ಎಂದು ಹಿಂದಿನಿಂದಲೂ ಒತ್ತಾಯ ಮಾಡಲಾಗುತ್ತಿತ್ತು. ಈ ಕುರಿತು ಕೇಂದ್ರ ಸರ್ಕಾರವೇ ಅಂತಿಮ ತೀರ್ಮಾನವನ್ನು ಕೈಗೊಳ್ಳಬೇಕಿದೆ. ಆದರೆ ಈಗ ಕೇಂದ್ರದ ತೀರ್ಮಾನದಿಂದ ಬೆಂಗಳೂರು ನಗರದ ಜನರಿಗೆ ನಿರಾಸೆಯಾಗಿದೆ.
ಬೆಂಗಳೂರು ನಗರ ದೇಶದ ಐಟಿ ಹಬ್. ಸ್ಟಾರ್ಟ್ ಅಪ್ ಕೇಂದ್ರವಾಗಿ ಬೆಳೆಯುತ್ತಿದೆ. ಆರ್ಥಿಕವಾಗಿ ಅತಿ ಹೆಚ್ಚು ತೆರಿಗೆಯನ್ನು ಸಹ ಪಾವತಿ ಮಾಡುತ್ತಿದೆ. ಮೆಟ್ರೋ ನಗರದ ಎಲ್ಲಾ ಲಕ್ಷಣಗಳನ್ನು ಹೊಂದಿರುವ, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರವನ್ನು ಮೆಟ್ರೋ ನಗರ ಎಂದು ಘೋಷಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಆದರೆ ಇನ್ನೂ ಬೆಂಗಳೂರು ನಗರವನ್ನು ಮೆಟ್ರೋ ಸಿಟಿ ಎಂದು ಪರಿಗಣನೆ ಮಾಡಿಲ್ಲ.
ಪಂಕಜ್ ಚೌಧರಿ, "ಆದಾಯ ತೆರಿಗೆ ವಿಚಾರದಲ್ಲಿ ಸದ್ಯದ ನೀತಿಯನ್ನು ಬದಲಾಯಿಸುವ ಉದ್ದೇಶವಿಲ್ಲ. ಹೆಚ್ಚಿನ ನಗರಗಳನ್ನು ಮೆಟ್ರೋ ನಗರಗಳೆಂದು ಘೋಷಣೆ ಮಾಡುವುದಿಲ್ಲ. ಅಲ್ಲದೇ ಮನೆ ಬಾಡಿಗೆ ಭತ್ಯೆಯ ಮೇಲಿನ ಹೆಚ್ಚಿನ ವಿನಾಯಿತಿಯನ್ನು ಅಂತಹ ನಗರಗಳಿಗೆ ವಿಸ್ತರಣೆ ಮಾಡುವುದಿಲ್ಲ" ಎಂದು ತಮ್ಮ ಉತ್ತರದಲ್ಲಿ ಹೇಳಿದ್ದಾರೆ.












Click it and Unblock the Notifications