ವಿದ್ಯುತ್ ಬಿಲ್ ಪಾವತಿ; ವೈರಲ್ ಸುದ್ದಿಗೆ ಸ್ಪಷ್ಟನೆ ಕೊಟ್ಟ ಬೆಸ್ಕಾಂ
ಬೆಂಗಳೂರು ಜು.8: ವಿದ್ಯುತ್ ಬಿಲ್ ನೀಡಿದ ಬಳಿಕ ಶುಲ್ಕ ಪಾವತಿಗೆ 15 ದಿನಗಳ ಕಾಲಾವಕಾಶ ಇರುತ್ತದೆ ಹೊರತು ಆರು ತಿಂಗಳು ಅಲ್ಲ. ವೈರಲ್ ಆಗಿರುವ ಸುದ್ದಿಗಳ ಕುರಿತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಸ್ಪಷ್ಟನೆ ನೀಡಿದೆ.
ಈ ಕುರಿತು ಮಾಹಿತಿ ನೀಡಿರುವ ಬೆಸ್ಕಾಂ, ವಿದ್ಯುತ್ ಶುಲ್ಕ ಪಾವತಿಗೆ ಬಿಲ್ ನೀಡಿದ ನಂತರ ಆರು ತಿಂಗಳು ಕಾಲಾವಕಾಶ ಇರುತ್ತದೆ ಎಂಬುದು ಸುಳ್ಳು ಮಾಹಿತಿ. ಅಂತಹ ವದಂತಿಗಳಿಗೆ ಯಾರು ಕಿವಿಕೊಡಬಾರದು. ಅಂತಹ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ಹೇಳಿದೆ.
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ತಪ್ಪು ಮಾಹಿತಿಯ ವಿಡಿಯೋ ಹರಿಬಿಟ್ಟಿದ್ದಾನೆ. ಈ ಬಗ್ಗೆ ಬೆಸ್ಕಾಂ ಜಾಗೃತ ದಳಕ್ಕೆ ಮಾಹಿತಿ ನೀಡಲಾಗಿದೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮುಂದೆ ಈ ರೀತಿ ಆಗದಂತೆ ಜಾಗೃತ ದಳ ಎಚ್ಚರಿಕೆ ವಹಿಸಲಿದೆ ಎಂದು ವಿವರಣೆ ನೀಡಲಾಗಿದೆ.

ಗ್ರಾಹಕರಿಗೆ ಮನವಿ ಮಾಡಿದ ಬೆಸ್ಕಾಂ
ಕೆಲವರು ಆನ್‌ಲೈನ್ ಮೂಲಕ ಬೆಸ್ಕಾಂ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿ ವಂಚಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಆದ್ದರಿಂದ ಬೆಸ್ಕಾಂ ಗ್ರಾಹಕರು ಇಲ್ಲ ಸಲ್ಲದ ವದಂತಿ, ತಪ್ಪು ಮಾಹಿತಿಗಳಿಗೆ ಕಿವಿಕೊಡಬೇಡಿ. ಸುಳ್ಳು ಮಾಹಿತಿ ನೀಡುವುದು ಕಂಡು ಬಂದಲ್ಲಿ ಕೂಡಲೇ ಗ್ರಾಹಕರು ಬೆಸ್ಕಾಂ ಜಾಗೃತ ದಳದ ಸೂಪರಿಟೆಂಡೆಂಟ್ ಮೊಬೈಲ್ ಸಂಖ್ಯೆ 9448042375 ಇಲ್ಲವೇ 9448094802 ಸಂಖ್ಯೆ ಸಂಪರ್ಕಿಸುವ ಮೂಲಕ ದೂರು ನೀಡಬಹುದು ಎಂದು ಗ್ರಾಹಕರಲ್ಲಿ ಬೆಸ್ಕಾಂ ಮನವಿ ಮಾಡಿದೆ.

ಮೊಬೈಲ್ ಸಂದೇಶ ನಂಬಬೇಡಿ
ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಮೊಬೈಲ್ ಸಂದೇಶ ಕಳುಹಿಸುತ್ತಿದ್ದಾರೆ. ಇಲ್ಲವೇ ಗ್ರಾಹಕರಿಗೆ ನೇರವಾಗಿ ಕರೆ ಮಾಡಿ ತಾವು ಸೂಚಿಸುವ ಮೊಬೈಲ್ ಸಂಖ್ಯೆಗೆ ಫೋನ್ ಪೇ ಇಲ್ಲವೇ ಗೂಗಲ್ ಪೇ ಮಾಡುವಂತೆ ಸೂಚಿಸುತ್ತಿದ್ದಾರೆ. ಇದರಿಂದ ಕೆಲವರು ಮೋಸ ಹೋಗಿದ್ದು ಇದೆ.
ಆದರೆ ಬೆಸ್ಕಾಂನಲ್ಲಿ ಈ ರೀತಿಯ ಬಿಲ್ ಪಾವತಿ ವ್ಯವಸ್ಥೆ ಇಲ್ಲ. ಮುಖ್ಯವಾಗಿ ನಮ್ಮ ಗ್ರಾಹಕರಿಗೆ ಬೆಸ್ಕಾಂನಿಂದ ಯಾವುದೇ ಮೊಬೈಲ್ ಸಂದೇಶ ಅಥವಾ ಕರೆ ಮಾಡಿ ಎಚ್ಚರಿಕೆ, ಬಿಲ್ ತುಂಬುವಂತೆ ಆಗ್ರಹಿಸುವುದಿಲ್ಲ. ಹೀಗಾಗಿ ಇಂತಹ ಕರೆ ಅಥವಾ ಮೊಬೈಲ್ ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಗ್ರಾಹಕರನ್ನು ಕೋರಿದೆ.

ಬಿಲ್ ಪಾವತಿಗೆ 15 ದಿನ ಮಾತ್ರ ಗಡುವು
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಕಾಲಕಾಲಕ್ಕೆ ಅನುಮೋದಿಸುವ ದರದಲ್ಲಿ ಗ್ರಾಹಕರು ಬಳಸುವ ವಿದ್ಯುತ್‌ಗೆ ಬೆಸ್ಕಾಂ ಶುಲ್ಕ ಸಂಗ್ರಹಿಸುತ್ತದೆ. ಗ್ರಾಹಕರಿಗೆ ಬಿಲ್ ನೀಡಿದ ದಿನದಿಂದ ಪಾವತಿಗೆ ಎರಡು ವಾರ (15 ದಿನ) ಕಾಲಾವಕಾಶ ಇರುತ್ತದೆ. ಈ ಕುರಿತು ಒಮ್ಮೆ ವಿದ್ಯುತ್ ಬಿಲ್ ಪರಿಶೀಲಿಸಬಹುದಾಗಿದೆ ಎಂದು ಬೆಸ್ಕಾಂ ಹೇಳಿದೆ.

ಸಂಪರ್ಕ ಕಡಿತದ ಅಧಿಕಾರ ಬೆಸ್ಕಾಂಗೆ ಇದೆ
ಮಾಸಿಕ ವಿದ್ಯುತ್ ಬಳಕೆ ಎಷ್ಟಾಗಿದೆ? ಎಂದು ನೀಡುವ ಬಿಲ್ ಹಿಂಬದಿ ಸೂಚನೆಯಲ್ಲಿ ಅಂತಿಮ ಗಡುವು ಯಾವಾಗ ಎಂದು, ಬಿಲ್ ನೀಡಿದ ದಿನಾಂಕದಿಂದ 15 ದಿನಗಳು ಎಂದು ನಮೂದಾಗಿರುತ್ತದೆ. ಈ ಅವಧಿಯೊಳಗೆ ವಿದ್ಯುತ್ ಶುಲ್ಕ ಪಾವತಿಸದಿದ್ದರೆ ಗಡುವು ಮೀರಿದರೆ ಮೊದಲು ಬೆಸ್ಕಾಂನಿಂದ ಗ್ರಾಹಕರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ಅದಾದ ಮೇಲೆ ಬಿಲ್ ಪಾವತಿಸುವ ಮನಸ್ಸು ಮಾಡದಿದ್ದರೆ ಅಂತವರ ವಿದ್ಯುತ್ ಸಂಪರ್ಕ ಕಡಿತ ಮಾಡುವ ಅಧಿಕಾರ ಬೆಸ್ಕಾಂಗೆ ಇದೆ.

ಇಲ್ಲಿ ಮಾತ್ರವೇ ಬಿಲ್ ಪಾವತಿಸಿ
ವಿದ್ಯುತ್ ಬಿಲ್ ಕೈಗೆ ಬಂದ ಬಳಿಕ ಗ್ರಾಹಕರು ತಮ್ಮ ನಿವಾಸದ ಹತ್ತಿರದ ಬೆಸ್ಕಾಂ ಸೂಚಿಸಿದ ಪಾವತಿ ಕೇಂದ್ರಗಳಾದ ಬೆಂಗಳೂರು ಒನ್, ಬೆಸ್ಕಾಂ ಮಿತ್ರ, ಬೆಸ್ಕಾಂ ಕಚೇರಿ ಇಲ್ಲವೇ ಬೆಸ್ಕಾಂ ಅಧಿಕೃತ ವೆಬ್‌ಸೈಟ್ ಹಾಗೂ ಗೂಗಲ್ ಆಪ್ ಮೂಲಕ ವಿದ್ಯುತ್ ಶುಲ್ಕ ಪಾವತಿಸಬಹುದಾಗಿದೆ. ಹೊರತು ಮೊಬೈಲ್ ಸಂದೇಶ ಸ್ವೀಕರಿಸಿ, ಲಿಂಕ್ ಮೇಲೆ ಒತ್ತಿ ಇಲ್ಲವೇ ಯಾರೋ ಸೂಚಿಸುವ ಮೊಬೈಲ್ ನಂಬರ್ ಗೆ ಹಣ ಕಳುಹಿಸುವ ವ್ಯವಸ್ಥೆ ಬೆಸ್ಕಾಂನಲ್ಲಿ ಇಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications