HD Kumaraswamy Health: ನಿರ್ಮಲಾನಂದ ಶ್ರೀಗಳಿಂದ ಹೆಚ್‌ಡಿಕೆ ಆರೋಗ್ಯ ವಿಚಾರಣೆ
ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿಯವರನ್ನು ಆದಿಚುಂಚನಗಿರಿ ಮಠಾಧ್ಯಕ್ಷರಾದ ನಿರ್ಮಲಾನಂದನಾಥ ಶ್ರೀಗಳು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಜ್ವರದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ಹೆಚ್‌ಡಿ ಕುಮಾರಸ್ವಾಮಿ ರಾಜಕೀಯ ಅಖಾಡಕ್ಕೆ ಧುಮುಕಿದ್ದರು. ರಾಜ್ಯಾದ್ಯಂತ ಪ್ರವಾಸ ಮಾಡಿದ್ದ ಅವರು, ಪಕ್ಷವನ್ನು ಸಂಘಟಿಸಲು ಹಗಲಿರುಳು ದಣಿವರಿಯದೆ ದುಡಿದಿದ್ದರು. ಶನಿವಾರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಆದಿಚುಂಚನಗಿರಿ ಮಠಾಧ್ಯಕ್ಷರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದ್ದಾರೆ.

ಸದ್ಯ ಹೆಚ್‌ಡಿ ಕುಮಾರಸ್ವಾಮಿ ಸ್ಥಿರವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸುಸ್ತು ಮತ್ತು ಜ್ವರದ ಲಕ್ಷಣ ಕಾಣಿಸಿಕೊಂಡಿತ್ತು. ಡಾ. ಸತ್ಯನಾರಾಯಣ ಮೈಸೂರು ಸದ್ಯ ಹೆಚ್‌ಡಿಕೆ ಅವರ ಆರೋಗ್ಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಗಲವು ಪರೀಕ್ಷೆಗಳನ್ನು ನಡೆಸಲಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಆಸ್ಪತ್ರೆಯಲ್ಲಿದ್ದರೂ ಹೆಚ್.ಡಿ ಕುಮಾರಸ್ವಾಮಿ ರಾಜಕೀಯ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ. ಆಸ್ಪತ್ರೆಯಲ್ಲೇ ಚುನಾವಣೆ ತಯಾರಿ, ಪ್ರಚಾರದ ಮುಂದಿನ ರೂಪುರೇಷೆಗಳನ್ನು ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ. ಈ ಬಾರಿ ಶತಾಯ ಗತಾಯ ಅಧಿಕಾರಕ್ಕೆ ಬರಲೇಬೇಕೆಂದು ಪಟ್ಟು ಹಿಡಿದಿರುವ ಹೆಚ್‌ಡಿ ಕುಮಾರಸ್ವಾಮಿ ಅದಕ್ಕಾಗಿ ಭಾರಿ ಶ್ರಮ ಹಾಕುತ್ತಿದ್ದಾರೆ. ಸದ್ಯ ಸುಧಾರಿಸಿಕೊಳ್ಳುತ್ತಿದ್ದಂತೆ ಅವರು ಮತ್ತೆ ಚುನಾವಣಾ ಅಖಾಡಕ್ಕೆ ಇಳಿಯುತ್ತಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಬಲ ಹೆಚ್ಚಿಸಿಕೊಳ್ಳುತ್ತಾ ಜೆಡಿಎಸ್?
ಜೆಡಿಎಸ್ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಬಂಡಾಯದ ಲಾಭವನ್ನು ಪಡೆಯಲಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಹಲವು ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಟಿಕೆಟ್ ಸಿಗದೆ ಜೆಡಿಎಸ್ ಕಡೆ ಮುಖ ಮಾಡಿದ್ದಾರೆ.
ಆನಂದ್ ಸಿಂಗ್, ಮೊಯಿದ್ದಿನ್ ಬಾವಾ, ಆಯನೂರು ಮಂಜುನಾಥ್, ವೈಎಸ್‌ವಿ ದತ್ತಾ, ರಘು ಆಚಾರ್ ಸೇರಿದಂತೆ ಹಲವು ಪ್ರಮುಖರು ಜೆಡಿಎಸ್ ಸೇರಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕುಮಾರಸ್ವಾಮಿ ಪರವಾಗಿ ಜನರಿಗೆ ಒಲವು ಇದ್ದರೂ ಸ್ಥಳೀಯ ನಾಯಕತ್ವದ ಕೊರತೆಯಿಂದ ಅವು ಮತಗಳಾಗಿ ಬದಲಾಗುತ್ತಿಲ್ಲ, ಈಗ ಹಲವು ಮುಖಂಡರ ಆಗಮನ ಪಕ್ಷಕ್ಕೆ ಹೆಚ್ಚಿನ ಬಲ ತಂದಿದೆ ಎನ್ನಲಾಗಿದೆ.












Click it and Unblock the Notifications