ನಿಖಿಲ್-ಪ್ರಜ್ವಲ್ ಮಿಂಚಿದ್ದು ಸಾಕು: ಜೆಡಿಎಸ್ ಟಾಪ್ ಲೀಡರ್ ಅಸಮಾಧಾನ
Recommended Video
ಬೆಂಗಳೂರು, ಜೂನ್ 19: ಇತ್ತೀಚೆಗಷ್ಟೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಪಕ್ಷದ ಮೇಲೆ ಅಸಮಾಧಾನಗೊಂಡು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೆ ಮತ್ತೊಬ್ಬ ಜೆಡಿಎಸ್‌ನ ಟಾಪ್ ಲೀಡರ್ ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಬಹಿರಂಗವಾಗಿ ಮಾತನಾಡಿದ್ದಾರೆ.
ಜೆಡಿಎಸ್‌ನ ನಿಷ್ಠಾವಂತ ವೈ.ಎಸ್.ವಿ.ದತ್ತ ಅವರು ದೇವೇಗೌಡ ಅವರ ಕುಟುಂಬ ರಾಜಕಾರಣದ ವಿರುದ್ಧ ಸೂಕ್ಷ್ಮವಾಗಿ ಚಾಟಿ ಬೀಸಿದ್ದು, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಸಾಕಷ್ಟು ಮಿಂಚಿದ್ದಾರೆ ಈಗ ಅವರು ತೆರೆ ಮರೆಗೆ ಸರಿವ ಹೊತ್ತು ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಯುವಮೋರ್ಚಾ ಅಧ್ಯಕ್ಷ ಪಟ್ಟವನ್ನು ದೇವೇಗೌಡ ಅವರ ಕುಟುಂಬದ ಹೊರಗಿನವರಿಗೆ ಕೊಡಬೇಕು ಎಂದು ಅವರು ಬಹಿರಂಗವಾಗಿ ಒತ್ತಾಯಿಸಿದ್ದಾರೆ.
ದೇವೇಗೌಡ ಅವರ ಮೊಮ್ಮಕ್ಕಳಾದ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಅವರು ಈಗಾಗಲೇ ಸಾಕಷ್ಟು ಪ್ರಜ್ವಲಿಸಿದ್ದಾರೆ, ಅವರು ಇನ್ನು ಮುಂದೆ ತೆರೆ ಮರೆಯಲ್ಲಿ ನಿಂತು ಪಕ್ಷವನ್ನು ಕಟ್ಟಲಿ ಎಂದು ದತ್ತ ಅಸಮಾಧಾನದಿಂದಲೇ ಹೇಳಿದ್ದಾರೆ.

ಜೆಡಿಎಸ್ ಯುವಮೋರ್ಚಾ ಸ್ಥಾನ ಕುಟುಂಬದವರಿಗೆ?
ಜೆಡಿಎಸ್‌ನ ಯುವಮೋರ್ಚಾ ಅಧ್ಯಕ್ಷ ಸ್ಥಾನವನ್ನು ನಿಖಿಲ್ ಕುಮಾರಸ್ವಾಮಿ ಅಥವಾ ಪ್ರಜ್ವಲ್ ರೇವಣ್ಣ ಅವರಿಗೆ ಕೊಡಬಹುದು ಎಂಬ ಚರ್ಚೆ ಜೋರಾಗಿ ನಡೆಯುತ್ತಿದ್ದು, ದತ್ತ ಅವರ ಈ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ.

ಸೋಲನುಭವಿಸಿದ್ದ ವೈ.ಎಸ್.ವಿ.ದತ್ತ
ವೈ.ಎಸ್.ವಿ.ದತ್ತ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ. ಅವರ ಸೋಲಿಗೆ ಜೆಡಿಎಸ್‌ನ ಮುಖಂಡರೇ ಕಾರಣ ಎಂದು ಆರೋಪವೂ ಇದೆ. ಈ ಬಗ್ಗೆ ದತ್ತ ಅವರು ದೇವೇಗೌಡ ಅವರನ್ನು ಪ್ರಶ್ನೆ ಮಾಡಿದ್ದರು, ಸಹ. ಆದರೆ ಆ ನಂತರ ದತ್ತ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಿ ಸುಮ್ಮನಾಗಿಸಲಾಗಿತ್ತು.

ಕುಟುಂಬ ರಾಜಕಾರಣದ ವಿರುದ್ಧ ಟೀಕೆ
ದೇವೇಗೌಡ ಅವರ ಕುಟುಂಬ ರಾಜಕಾರಣದ ವಿರುದ್ಧ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬಹಿರಂಗ ವಿರೋಧವೇ ವ್ಯಕ್ತವಾಗುತ್ತಿದೆ. ಇತ್ತೀಚಿಗಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಜೆಡಿಎಸ್ ವಿರುದ್ಧ ಕುಟುಂಬ ರಾಜಕೀಯದ ವಿರುದ್ಧ ಟೀಕೆಯನ್ನೇ ಅಸ್ತ್ರವಾಗಿ ಉಪಯೋಗಿಸಿತ್ತು, ಹಾಗಾಗಿ ದೇವೇಗೌಡ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರೂ ಸೋತರು.

ಪಕ್ಷದ ವಿರುದ್ಧ ದನಿ ಎತ್ತಿದ ಪ್ರಮುಖ ನಾಯಕರು
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಸಹ ಜೆಡಿಎಸ್ ಪಕ್ಷದ ಮುಖಂಡರ ವಿರುದ್ಧ ತೀವ್ರ ಅಸಮಾಧಾನವನ್ನು ಹೊರಹಾಕಿದ್ದರು. ತಮ್ಮ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು. ಈಗ ಜೆಡಿಎಸ್‌ನ ಮತ್ತೊಬ್ಬ ಟಾಪ್ ಮುಖಂಡ ವೈಎಸ್‌ವಿ ದತ್ತ ಅವರು ಪಕ್ಷದ ವಿರುದ್ಧ ದನಿ ಎತ್ತಿದ್ದಾರೆ.












Click it and Unblock the Notifications