ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಬಿಜೆಪಿ ಕಾರ್ಯಕರ್ತನ ಬಂಧನ ಸುದ್ದಿ ಬಗ್ಗೆ ಎನ್‌ಐಎ ಸ್ಪಷ್ಟನೆ
ಬೆಂಗಳೂರು ನಗರದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಈ ಬಗ್ಗೆ ಎನ್‌ಐಎ ಸ್ಪಷ್ಟನೆ ನೀಡಿದೆ.
ಶುಕ್ರವಾರ ಇಡೀ ದಿನ ಮಾಧ್ಯಮಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತನನ್ನು ಎನ್‌ಐಎ ವಶಕ್ಕೆ ಪಡೆದಿದೆ ಎಂದು ವರದಿಗಳು ಪ್ರಕಟವಾದವು. ಸಂಜೆ ಇದಕ್ಕೆ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡಿದ ಎನ್‌ಐಎ ಪರಿಶೀಲನೆ ಮಾಡದ ಸುದ್ದಿಗಳು ಪ್ರಕರಣದ ಪರಿಣಾಮಕಾರಿ ತನಿಖೆಗೆ ಅಡ್ಡಿಯುಂಟು ಮಾಡುತ್ತದೆ ಎಂದು ಹೇಳಿದೆ.

ಸಾಕ್ಷಿ ಮತ್ತು ಮಾಹಿತಿಗಾಗಿ ವಿಚಾರಣೆ
"ಪ್ರಕರಣದಲ್ಲಿ ಸಾಕ್ಷ್ಯ ಮತ್ತು ಮಾಹಿತಿಯನ್ನು ಸಂಗ್ರಹಿಸಲು ಎನ್‌ಐಎ ತಲೆಮರೆಸಿಕೊಂಡಿರುವ ಮತ್ತು ಬಂಧಿತ ಆರೋಪಿಗಳ ಕಾಲೇಜು ಮತ್ತು ಶಾಲಾ ಸಮಯದ ಸ್ನೇಹಿತರು ಸೇರಿದಂತೆ ಎಲ್ಲ ಪರಿಚಯಸ್ಥರನ್ನು ಕರೆಸಿ ವಿಚಾರಣೆ ನಡೆಸುತ್ತಿದೆ" ಎಂದು ಎನ್‌ಐಎ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದೆ.
— NIA India (@NIA_India) April 5, 2024
"ಪ್ರಕರಣವು ಭಯೋತ್ಪಾದಕ ಕೃತ್ಯವಾಗಿರುವುದರಿಂದ, ಸಾಕ್ಷಿಗಳ ಗುರುತಿನ ಯಾವುದೇ ಮಾಹಿತಿಯ ಬಹಿರಂಗವಾದರೆ ತನಿಖೆಗೆ ಅಡ್ಡಿಯಾಗುವುದರ ಜೊತೆಗೆ ವ್ಯಕ್ತಿಗಳನ್ನು ಕರೆಸಲು ಕೂಡ ಕಷ್ಟವಾಗುತ್ತದೆ. ಪರಿಶೀಲನೆ ಮಾಡದೆ ಪ್ರಸಾರ/ಪ್ರಕಟವಾಗುವ ಸುದ್ದಿಗಳು ಪ್ರಕರಣದ ಪರಿಣಾಮಕಾರಿ ತನಿಖೆಗೆ ಅಡ್ಡಿಯಾಗುತ್ತವೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಎಲ್ಲರ ಸಹಕಾರವನ್ನು ಎನ್‌ಐಎ ಕೋರುತ್ತದೆ." ಎಂದು ಹೇಳಿದೆ.
ಮಾರ್ಚ್ 1 ರಂದು ನಗರದ ಬ್ರೂಕ್‌ಫೀಲ್ಡ್ ಪ್ರದೇಶದಲ್ಲಿ ರಾಮೇಶ್ವರಂ ಕೆಫೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟ ಸಂಭವಿಸಿದ್ದು, 10 ಮಂದಿ ಗಾಯಗೊಂಡಿದ್ದರು. ಬೆಂಗಳೂರು ಪೊಲೀಸರ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪ್ರಾಥಮಿಕ ತನಿಖೆಯ ನಂತರ, ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿಕ್ಕಮಗಳೂರಿನ ಖಾಲ್ಸಾ ನಿವಾಸಿ ಮುಝಮ್ಮಿಲ್ ಶರೀಫ್ ಎಂಬಾತನನ್ನು ಎನ್‌ಐಎ ಬಂಧಿಸಿದೆ. ಎನ್ಐಎ ಪ್ರಕಾರ, ಶರೀಫ್ ಪ್ರಮುಖ ಸಂಚುಕೋರನಾಗಿದ್ದು, ಶಂಕಿತ ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಸಹ-ಸಂಚುಗಾರ ಅಬ್ದುಲ್ ಮಥೀನ್ ತಾಹಾಗೆ ವ್ಯವಸ್ಥಾಪನಾ ಬೆಂಬಲ ಕೊಟ್ಟಿದ್ದಾನೆ. ಕರ್ನಾಟಕದ 12 ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 18 ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿದ ನಂತರ ಅವನನ್ನು ಬಂಧಿಸಲಾಗಿದೆ.
ಇನ್ನೂ ಇಬ್ಬರು ಶಂಕಿತರ ಉಗ್ರರ ಬಂಧನಕ್ಕೆ ಎನ್‌ಐಎ ಬಲೆ ಬೀಸಿದ್ದು, ಶಂಕಿತರ ಸುಳಿವು ಕೊಟ್ಟರೆ ತಲಾ ₹10 ಲಕ್ಷ ಬಹುಮಾನ ನೀಡುವುದಾಗಿ ಕೂಡ ಎನ್‌ಐಎ ಘೋಷಣೆ ಮಾಡಿದೆ.












Click it and Unblock the Notifications