ಬೆಂಗಳೂರಿನ 4 ಪಥದ ರಸ್ತೆ ಯೋಜನೆಗೆ ಟೆಂಡರ್ ಕರೆದ ಎನ್‌ಹೆಚ್‌ಎಐ
ಬೆಂಗಳೂರು, ಫೆಬ್ರವರಿ 02: ಉದ್ಯಾನ ನಗರಿ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಮಹತ್ವದ ಯೋಜನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೆಂಡರ್ ಕರೆದಿದೆ. 280 ಕಿ. ಮೀ. ಉದ್ದದ ರಸ್ತೆ ಯೋಜನೆ ಇದಾಗಿದ್ದು, ಎರಡು ರಾಜ್ಯಗಳನ್ನು ಸಂಪರ್ಕಿಸಲಿದೆ. ಬೆಂಗಳೂರು ನಗರದ ಹೊರವಲಯದಲ್ಲಿ ಇದು ಹಾದು ಹೋಗಲಿದ್ದು, ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ.
ಎನ್‌ಹೆಚ್‌ಎಐ ಬೆಂಗಳೂರಿನ ಉಪನಗರ ವರ್ತುಲ ರಸ್ತೆ ಯೋಜನೆಯ (ಎಸ್‌ಟಿಆರ್‌ಆರ್)ಯ ಎರಡು ವಿಭಾಗದ ಕಾಮಗಾರಿಗೆ ಟೆಂಡರ್ ಕರೆದಿದೆ. ಸದ್ಯದ ಮಾಹಿತಿ ಪ್ರಕಾರ ಈ ಯೋಜನೆಯನ್ನು ಐದು ಪ್ಯಾಕೇಜ್ ಆಗಿ ವಿಭಾಗ ಮಾಡಲಾಗಿದೆ.

ನೆಲಮಂಗಲ ತಾಲೂಕಿನ ಒಬಳಾಪುರ ದಿಂದ ರಾಮನಗರ ತಾಲೂಕಿನ ಕುಣಿಗಲ್ ತನಕ 79 ಕಿ. ಮೀ. ಮತ್ತು ಕುಣಿಗಲ್‌ನಿಂದ ಹೊಸೂರು ತಾಲೂಕಿನ ಬಾಲಗೊಂಡಪ್ಪಲ್ಲಿ 65 ಕಿ. ಮೀ. 4 ಪಥದ ರಸ್ತೆ ನಿರ್ಮಾಣ ಮಾಡಲು ಎನ್‌ಹೆಚ್‌ಎಐ ಟೆಂಡರ್ ಕರೆದಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ 8.6 ಕಿ. ಮೀ. ಫ್ಲೈ ಓವರ್ ನಿರ್ಮಾಣವೂ ಇದರಲ್ಲಿ ಸೇರಿದೆ.
280 ಕಿ. ಮೀ.ಯ ಎಸ್‌ಟಿಆರ್‌ಆರ್ ಯೋಜನೆ: ಉಪನಗರ ವರ್ತುಲ ರಸ್ತೆ ಯೋಜನೆಯು 280 ಕಿ. ಮೀ. ಇರಲಿದೆ. ಇದು ಬೆಂಗಳೂರು ನಗರದ ಹೊರವಲಯದ ನೆಲಮಂಗಲ, ಮಾಗಡಿ, ರಾಮನಗರ, ಕನಕಪುರ, ಆನೇಕಲ್, ಹೊಸೂರು, ಹೊಸಕೋಟೆ ಮತ್ತು ದೇವನಹಳ್ಳಿಯನ್ನು ಸಂಪರ್ಕಿಸುತ್ತದೆ.
ಈಗಾಗಲೇ ಈ ಯೋಜನೆಯ ದಾಬಸ್‌ಪೇಟೆ-ದೇವನಹಳ್ಳಿ-ಹೊಸಕೋಟೆ ಮಾರ್ಗ ನಿರ್ಮಾಣವಾಗಿದ್ದು, ಟೋಲ್ ಶುಲ್ಕದೊಂದಿಗೆ ವಾಹನ ಸವಾರರು ಸಂಚಾರ ನಡೆಸಲು ಅನುಕೂಲ ಮಾಡಿಕೊಡಲಾಗಿದೆ.
ಇನ್ನೂ ಎರಡು ಪ್ಯಾಕೇಜ್‌ಗಳಾದ ಕರ್ನಾಟಕ ಹೊಸಕೋಟೆ-ತಮಿಳುನಾಡು ಗಡಿಯ 20 ಕಿ. ಮೀ., 36 ಕಿ. ಮೀ.ಯ ಬಾಲಗೊಂಡಪ್ಪಲ್ಲಿ-ಹೊಸೂರು ಕಾಮಗಾರಿ ನಡೆಯುತ್ತಿದೆ. ಈ ಯೋಜನೆಯಲ್ಲಿ ಒಬಳಾಪುರ-ಮಧುಗಡಪಲ್ಲಿಯ ಕಾಮಗಾರಿಯನ್ನು ಇನ್ನೂ ಕೈಗೆತ್ತಿಕೊಳ್ಳಬೇಕಿದೆ.
ಈಗ ಕರೆದಿರುವ ಟೆಂಡರ್ ಅನ್ನು ರಸ್ತೆ ಸುರಕ್ಷತೆ ಮತ್ತು ಹೆದ್ದಾರಿ ಸಚಿವಾಲಯದ ಅಡಿಯಲ್ಲಿ ಬರುವ ಹಣಕಾಸು ಸ್ಥಾಯಿ ಸಮಿತಿ ಅಂತಿಮಗೊಳಿಸಲಿದೆ. ಈ ಸಮಿತಿ ಹೆದ್ದಾರಿ ಯೋಜನೆಗಳ ಹಣಕಾಸು ನಿರ್ವಹಣೆ ನೋಡಿಕೊಳ್ಳುತ್ತದೆ. ಬಿಡ್ ಮೂಲಕ ಟೆಂಡರ್ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ.
ಈ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಈಗಾಗಲೇ ಹಣಕಾಸು ಸ್ಥಾಯಿ ಸಮಿತಿ ಗುರುತಿಸಿದೆ. 2023ರ ಆಗಸ್ಟ್‌ನಲ್ಲಿಯೇ ಯೋಜನೆಗೆ ಭೂಮಿ ನೀಡುವವರಿಗೆ ಪರಿಹಾರವನ್ನು ಅಂತಿಮಗೊಳಿಸಲಾಗಿದೆ. ಈ ಯೋಜನೆಗೆ ಇನ್ನೂ ಎರಡು ಪ್ಯಾಕೇಜ್‌ಗೆ ಈ ಹಿಂದೆ ಟೆಂಡರ್ ಕರೆಯಲಾಗಿತ್ತು. ಆದರೆ ಕಾಮಗಾರಿ ಆರಂಭವಾಗಿರಲಿಲ್ಲ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇಗೆ ಸಂಪರ್ಕ ಕಲ್ಪಿಸುವಂತೆ ಎಸ್‌ಟಿಆರ್‌ಆರ್ ನಿರ್ಮಾಣ ಮಾಡಲಾಗುತ್ತದೆ. ಕರ್ನಾಟಕದ ವ್ಯಾಪ್ತಿಗೆ ಒಳಪಡುವ ಎಕ್ಸ್‌ಪ್ರೆಸ್ ವೇ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ವಾಹನಗಳು ಸಂಚಾರ ನಡೆಸುತ್ತಿವೆ. ಆದರೆ ಈ ಕಾರಿಡಾರ್‌ನಲ್ಲಿ ಉಳಿದ ರಾಜ್ಯಗಳ ಕಾಮಗಾರಿ ಇನ್ನೂ ಬಾಕಿ ಇದೆ.
ಎಸ್‌ಟಿಆರ್‌ಆರ್ ರಸ್ತೆಯ ವಾಹನಗಳ ಮೇಲೆ ಎಐ ಆಧಾರಿತ ಕ್ಯಾಮರಾಗಳು ಕಣ್ಗಾವಲು ವಹಿಸಲಿವೆ. ಈಗಾಗಲೇ ದಾಬಸ್‌ಪೇಟೆ-ಹೊಸಕೋಟೆ 80 ಕಿ. ಮೀ. ಮಾರ್ಗದಲ್ಲಿ ಈ ಮಾದರಿ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಬಳಿಕ ಈ ಮಾದರಿ ಕ್ಯಾಮರಾಗಳನ್ನು ಈ ರಸ್ತೆಯಲ್ಲಿ ಅಳವಡಿಕೆ ಮಾಡಲಾಗಿದೆ.












Click it and Unblock the Notifications