New Year 2023: ಹೊಸ ವರ್ಷದಂದು ಹಲವು ನಿರ್ಬಂಧಗಳನ್ನು ಜಾರಿಗೊಳಿಸಿದ ಬೆಂಗಳೂರು ಪೊಲೀಸರು
ಬೆಂಗಳೂರು, ಡಿ. 29: ಹೊಸ ವರ್ಷಾಚರಣೆಗೆ ಮುಂಚಿತವಾಗಿ, ಬೆಂಗಳೂರು ಪೊಲೀಸರು ಹಲವು ನಿರ್ಬಂಧಗಳನ್ನು ಜಾರಿಗೊಳಿಸಿದ್ದಾರೆ.
ಶಬ್ಧ ಮಾಲಿನ್ಯ, ಮಾದಕ ವಸ್ತುಗಳ ಬಳಕೆಗೆ ಕಡಿವಾಣ ಸೇರಿದಂತೆ ಕಮಿಷನರ್ ಪ್ರತಾಪ್ ರೆಡ್ಡಿ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ. ನಗರದಲ್ಲಿ ಕಾರ್ಯಕ್ರಮ ಸಂಘಟಕರಿಗೆ ಡೆಸಿಬಲ್ ನಿಯಮಗಳನ್ನು ಅನುಸರಿಸಬೇಕು ಎಂದು ತಿಳಿಸಿದ್ದಾರೆ.
ಹೆಚ್ಚಿನ ಶಬ್ಧ ಮಾಲಿನ್ಯ ಮಾಡಬಾರದು ಎಂದು ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ನಗರದಲ್ಲಿ ಡೆಸಿಬಲ್ ನಿಯಮಗಳನ್ನು ಅನುಸರಿಸಬೇಕು. ಸುತ್ತಮುತ್ತಲಿನ ಜನರಿಗೆ ಅನಾನುಕೂಲತೆಯನ್ನು ಉಂಟುಮಾಡಬಾರದು ಎಂದು ಸೂಚಿಸಿದ್ದಾರೆ.

ಈ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಟ್ವೀಟ್ ಮಾಡಿ, "ಹೊಸ ವರ್ಷದ ಆಚರಣೆಯೇ...? ಧ್ವನಿವರ್ಧಕಗಳಿಗೆ ಶಬ್ದ ಮಾಲೀನ್ಯ ನಿಯಮಗಳ ಅಡಿಯಲ್ಲಿ ಕಡ್ಡಾಯ ಪರವಾನಗಿಯನ್ನು ಪಡೆದುಕೊಳ್ಳಿ. ಡೆಸಿಬಲ್ ಮಿತಿಗಳು ಮತ್ತು ಸಮಯಗಳನ್ನು ಅನುಸರಿಸಿ" ಎಂದಿದ್ದಾರೆ.
ಬೆಂಗಳೂರು ಪೊಲೀಸರ ಪ್ರಕಾರ, ಕೈಗಾರಿಕಾ ಪ್ರದೇಶಗಳಲ್ಲಿ, 70 ರಿಂದ 75 ಡೆಸಿಬಲ್‌ಗಳ ಧ್ವನಿಯನ್ನು ಅನುಮತಿಸಲಾಗಿದೆ. ಆದರೆ ವಸತಿ ಪ್ರದೇಶಗಳಲ್ಲಿ, ಧ್ವನಿ ಮಿತಿಯನ್ನು 45 ರಿಂದ 55 ಡೆಸಿಬಲ್‌ಗಳಿಗೆ ನಿಗದಿಪಡಿಸಲಾಗಿದೆ. ಆದರೂ, ವಾಣಿಜ್ಯ ಪ್ರದೇಶಗಳಲ್ಲಿ, 55 ರಿಂದ 65 ಡೆಸಿಬಲ್‌ಗಳ ಧ್ವನಿ ಮಿತಿಯನ್ನು ಅನುಮತಿಸಲಾಗಿದೆ.

ಹೊಸ ವರ್ಷದ ರಾತ್ರಿ ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. "ತಪ್ಪು ಸ್ಥಳಗಳಲ್ಲಿ ಅಥವಾ ತಪ್ಪು ಮಾಡುವ ಜನರ ನಡುವೆ ಇರಬೇಡಿ. ಡ್ರಗ್ಸ್ ಎಂಬುದು ಗಂಭೀರ ಅಪರಾಧವಾಗಿದೆ. ಗ್ರಾಹಕರು ಮತ್ತು ಪೆಡ್ಲರ್‌ಗಳು ಇದಕ್ಕೆ ಜವಾಬ್ದಾರರು. ಸಂಘಟಕರು ಕೂಡ ದಂಡಕ್ಕೆ ಒಳಗಾಗುತ್ತಾರೆ ಎಂದು ಎಚ್ಚರಿಸಿದ್ದಾರೆ.
ಕಾನೂನು-ಸುವ್ಯವಸ್ಥೆ ಸಮಸ್ಯೆಗಳು ಉಂಟಾಗದಂತೆ ಬೆಂಗಳೂರು ನಗರದಲ್ಲಿ ಹೊಸ ವರ್ಷಾಚರಣೆಯನ್ನು ಸೂಕ್ಷ್ಮವಾಗಿ ಗಮನಿಸುವುದಾಗಿ ಹೇಳಿದ್ದು, ಹೆಚ್ಚುವರಿ ಸಿಸಿಟಿವಿ ಮತ್ತು ಡ್ರೋನ್ ಕ್ಯಾಮೆರಾಗಳೊಂದಿಗೆ ಇಡೀ ನಗರವನ್ನು ಕಣ್ಗಾವಲು ಮಾಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.












Click it and Unblock the Notifications