ಬೆಂಗಳೂರಿಗರಿಗೆ ಹೊಸ ಶಾಕ್: ಇನ್ಮುಂದೆ ಕಸ ಎಸೆಯುವುದಕ್ಕೂ ಕೊಡ್ಬೇಕು ಕಾಸು!
ಬೆಂಗಳೂರಲ್ಲಿ ದಿನ ಒಂದಿಲ್ಲೊಂದು ತೆರಿಗೆ (ಟ್ಯಾಕ್ಸ್) ಹೊರೆ ಜನರಿಗೆ ಬೀಳುತ್ತಲ್ಲೇ ಇದೆ. ಇದೀಗ ಕಸದ ಸಂಗ್ರಹದಲ್ಲೂ ಟ್ಯಾಕ್ಸ್ (ಸೆಸ್) ಹಾಕುವುದಕ್ಕೆ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಮುಂದಾಗಿದೆ. ಬೆಂಗಳೂರಿನಲ್ಲಿ ಕಸ ಸಂಗ್ರಹದಲ್ಲಿ ಕೆಜಿ ಲೆಕ್ಕದ ಮೇಲೆ ಸೆಸ್ ಹಾಕುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಆದರೆ, ಈ ವಿಷಯದಲ್ಲಿ ಸಣ್ಣ ವಿನಾಯಿತಿಯನ್ನು ಸಹ ನೀಡುತ್ತಿದೆ. ಹಾಗಾದರೆ ಈ ಕಸದ ಸೆಸ್ ಯಾರಿಗೆ ಅನ್ವಯವಾಗಲಿದೆ, ಎಷ್ಟು ಕೆಜಿ ಕಸಕ್ಕೆ ಎಷ್ಟು ಪಾವತಿ ಮಾಡಬೇಕು ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ ಹೆಚ್ಚು ಕಸ ಉತ್ಪಾದಿಸುವವರಿಗೆ ಬಿಸಿ ಮುಟ್ಟಿಸಲು ಬಿಬಿಎಂಪಿ ಮುಂದಾಗಿದೆ. ಇದರ ಭಾಗವಾಗಿ ಹೆಚ್ಚು ಕಸ ಉತ್ಪಾದಿಸುವವರು (ಹೆಚ್ಚು ಕಸವನ್ನು ಕಸದ ಗಾಡಿಗೆ ಕೊಡುವವರು) ಪ್ರತಿ ಕೆಜಿಗೂ 12 ರೂಪಾಯಿ ಸೆಸ್ (ದರ) ವಿಧಿಸಲು ಬಿಬಿಎಂಪಿ ಮುಂದಾಗಿದೆ. ಇದಕ್ಕೆ ಬಿಬಿಎಂಪಿ ಹಾಗೂ ಅದರ ಅಂಗಸಂಸ್ಥೆ ನೀಡಿರುವ ಕಾರಣ ಬೆಂಗಳೂರಲ್ಲಿ ಹೆಚ್ಚು ಕಸ ಉತ್ಪಾದನೆಯಾಗುತ್ತಿದೆ ಎನ್ನುವುದು.

ಈ ಬಗ್ಗೆ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಬೆಂಗಳೂರಿನಲ್ಲಿ ಕೆಲವು ಭಾಗದಲ್ಲಿ ಅತಿ ಹೆಚ್ಚು ಕಸ ಉತ್ಪತ್ತಿಯಾಗುತ್ತಿದೆ. ಬೆಂಗಳೂರು ನಗರದಲ್ಲಿ ಕೆಲವು ವಸತಿ ಸಮುಚ್ಛಯಗಳು, ಹೋಟೆಲ್‌ಗಳು ಹಾಗೂ ಮಾಲ್‌ಗಳಿಂದ ನಿತ್ಯವೂ 100 ಕೆಜಿಗಿಂತಲೂ ಹೆಚ್ಚಿನ ಕಸ ಉತ್ಪತ್ತಿಯಾಗುತ್ತಿದೆ. ಈ ಕಸವನ್ನು ದಿನ ಬಿಬಿಎಂಪಿ ಕಾಂಪ್ಯಾಕ್ಟರ್‌ಗಳಿಗೆ ಕೊಡಲಾಗ್ತಿದೆ. ಈ ರೀತಿ ಕಸ ಉತ್ಪಾದನೆಯಾಗುತ್ತಿರುವುದರಿಂದ ಕಸ ವಿಲೇವಾರಿ ಹಾಗೂ ನಿರ್ವಹಣೆಯ ಮೇಲೆ ಭಾರಿ ಹೊಡೆತ ಬೀಳುತ್ತಿದೆ ಎಂದಿದ್ದಾರೆ.
ಸರ್ಕಾರಕ್ಕೆ ಪ್ರಸ್ತಾವನೆ: ಬೆಂಗಳೂರಿನಲ್ಲಿ ಹೆಚ್ಚು ಕಸ ಉತ್ಪಾದನೆ ಮಾಡುವವರಿಂದ ಪ್ರತ್ಯೇಕ ಸೆಸ್ ಸಂಗ್ರಹ ಮಾಡುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್‌ಗಿರಿನಾಥ್ ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚು ಕಸ ಉತ್ಪಾದನೆ ಮಾಡುವವರಿಂದ ಕಸ ಹೆಚ್ಚಾಗಿ ಸಂಗ್ರಹವಾಗುತ್ತಿದ್ದು, ಇದರಿಂದ ಕಸ ಸಂಗ್ರಹ ಮಾಡುವ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

6 ತಿಂಗಳ ಹಿಂದೆಯೇ ನೋಟಿಸ್ ನೀಡಲಾಗಿದೆ
ಇನ್ನು ಬೆಂಗಳೂರಿನಲ್ಲಿ ಸಗಟು (ಹೆಚ್ಚು) ಕಸ ಉತ್ಪಾದನೆ ಮಾಡುವವರಿಂದ ಸಮಸ್ಯೆ ಆಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾರಿಗೂ ಆರು ತಿಂಗಳು ಮುಂಚೆಯೇ ನೋಟಿಸ್ ಹಾಗೂ ಮಾಹಿತಿ ಸಹ ಕೊಡಲಾಗಿತ್ತು ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ. ನಗರದಲ್ಲಿ ಕೆಲವು ಅನಧಿಕೃತ ಹೋಟೆಲ್‌ಗಳು ಸೇರಿದಂತೆ ಕೆಲವು ಭಾಗದಿಂದ ಹೆಚ್ಚು ಕಸ ಉತ್ಪತ್ತಿಯಾಗುತ್ತಿದೆ. ಬೆಂಗಳೂರಲ್ಲಿ ಕಸ ವಿಲೇವಾರಿ ಮಾಡುವುದು ನಮ್ಮ ಜವಾಬ್ದಾರಿ ನಿಜ. ಆದರೆ, ಹೆಚ್ಚು ಕಸ ಉತ್ಪತ್ತಿಸುವವರು ಅವರ ಜವಾಬ್ದಾರಿ ನಿರ್ವಹಿಸಬೇಕು.
ಈ ಸಂಬಂಧ ಆರು ತಿಂಗಳು ಹಿಂದೆಯೇ ನೋಟಿಸ್ ಜಾರಿ ಮಾಡಲಾಗಿದೆ. ಹೆಚ್ಚು ಕಸ ಉತ್ಪಾದನೆ ಮಾಡುವವರಿಗೆ ನೀವೇ ಕಸ ವಿಲೇವಾರಿ ಮಾಡಿಕೊಳ್ಳಿ ಎಂದು ಸೂಚನೆಯನ್ನೂ ಕೊಡಲಾಗಿತ್ತು. ಆದರೆ, ಬಹುತೇಕರು ಹೆಚ್ಚು ಕಸ ಉತ್ಪಾದನೆಯ (ಕಾಂಪೋಸ್ಟ್ ಮಾಡುವುದು) ವಿಲೇವಾರಿ ಮಾಡುವುದಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ, ಈ ರೀತಿ ಮಾಡುವವರಿಗೆ ಪ್ರತಿ ಕೆ.ಜಿ. ಕಸಕ್ಕೆ 12 ರೂಪಾಯಿ ಸೆಸ್ ವಿಧಿಸಲು ಉದ್ದೇಶಿಸಲಾಗಿದೆ. ಈ ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ರೀತಿ ಕಸ ಹೆಚ್ಚಾಗುತ್ತಿರುವುದರಿಂದ ಪಾಲಿಕೆಗೆ ಆರ್ಥಿಕ ಹೊರೆಯೂ ಆಗಿದೆ ಎನ್ನಲಾಗಿದೆ. ಕಸ ಸಂಗ್ರಹ ಹೆಚ್ಚಾದಂತೆ ಅದರ ವಿಲೇವಾರಿ ಮಾಡುವುದು ಸಹ ಸವಾಲಿನ ಕೆಲಸವಾಗುತ್ತದೆ ಎಂದೇ ವಿಶ್ಲೇಷಣೆ ಮಾಡಲಾಗಿದೆ.












Click it and Unblock the Notifications