ಬೆಂಗಳೂರಿನ ಪ್ರಮುಖ ಕೆರೆಯ ಸಮಗ್ರ ಅಭಿವೃದ್ಧಿಗೆ ಮುಂದಾದ ಜಿಬಿಎ
ಬೆಂಗಳೂರಿನ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ಹಲಸೂರು ಕೆರೆ ಸಮಗ್ರ ಅಭಿವೃದ್ಧಿ ಮತ್ತು ನಿರ್ವಹಣೆಗೆ ಅಗತ್ಯ ಕ್ರಮ ವಹಿಸಿ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ರವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಹಲಸೂರು ಕೆರೆಗೆ ನವೆಂಬರ್ 20ರ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಕೆರೆಯ ಸುತ್ತಲೂ ಸ್ವಚ್ಛತೆ ಕಾಪಾಡಬೇಕು. ಮಲಿನ ನೀರು ಕೆರೆಗೆ ಬರದಂತೆ ತಡೆಯಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ತ್ಯಾಜ್ಯ ನೀರು ಕೆರೆಗೆ ಬರದಂತೆ ತಡೆಯಲು ಬೆಂಗಳೂರು ಜಲಮಂಡಳಿ ಮತ್ತಿತರೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ, ಸಭೆ ಏರ್ಪಡಿಸಲು ಸೂಚಿಸಿದ್ದಾರೆ.

ಹಲಸೂರು ಕೆರೆ ಜೀರ್ಣೋದ್ಧಾರ ಕಾಮಗಾರಿ ಕೈಗೊಳ್ಳಬೇಕು. ವಾಯುವಿಹಾರಿಗಳಿಗೆ (Walkers) ನಡೆಯುವ ಮಾರ್ಗವನ್ನು ಸಮರ್ಪಕವಾಗಿ ನಿರ್ಮಿಸಿ ನಿರ್ವಹಣೆ ಮಾಡುವ ಮೂಲಕ ನಾಗರಿಕರಿಗೆ ಸುಗಮ ನಡಿಗೆ ಮಾರ್ಗ ಒದಗಿಸಲು ಸೂಚನೆ ನೀಡಿದರು. ಅಲ್ಲದೇ ಕೆರೆ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡುವುದರ ಜೊತೆಗೆ, ಕೆರೆಗೆ ಹೊಂದಿಕೊಂಡಿರುವ ಖಾಲಿ ಜಾಗಗಳಲ್ಲಿ ಉದ್ಯಾನವನ ನಿರ್ಮಿಸಿ, ಸಸಿಗಳನ್ನು ನೆಟ್ಟು ಆಕರ್ಷಣೀಯ ಸ್ಥಳವನ್ನಾಗಿ ಮಾಡಲು ಹಾಗೂ ಅದನ್ನು ಪೋಷಣೆ ಮಾಡಲು ಸೂಚನೆ ನೀಡಿದ್ದಾರೆ.
ಸಾರ್ವಜನಿಕರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಮರಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದು, ಒಣಗಿದ ಮರ, ರೆಂಬೆ-ಕೊಂಬೆಗಳನ್ನು ಕೂಡಲೆ ತೆರವುಗೊಳಿಸುವಂತೆ ತಿಳಿಸಲಾಗಿದೆ. ಅಲ್ಲದೇ ಹಲಸೂರು ಕೆರೆಗೆ ಹೊಂದಿಕೊಂಡಿರುವ ರಾಜಕಾಲುವೆಯಲ್ಲಿ ಹೂಳೆತ್ತಿ ನಿರಂತರವಾಗಿ ಸ್ವಚ್ಛತೆ ಕಾಪಾಡುವುದರ ಜೊತೆಗೆ ಮಳೆನೀರು ಸರಾಗವಾಗಿ ಹರಿದುಹೋಗುವಂತೆ ನೋಡಿಕೊಳ್ಳಲು ನಿರ್ದೇಶನ ನೀಡಲಾಗಿದೆ.
ಮುಂದುವರಿದು ಪ್ರಸ್ತುತ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಕ್ತಾಯಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ದೊರಕುವಂತೆ ಮಾಡುವುದು ಹಾಗೂ ಪ್ರಗತಿಯಲ್ಲಿರುವ ಕಾಮಗಾರಿ ಮುಕ್ತಾಯಗೊಂಡ ನಂತರದ ಹಂತದಲ್ಲಿ ಉಳಿದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆಯೂ ತಿಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಮುಖ್ಯ ಎಂಜಿನಿಯರರಾದ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಎಂಜಿನಿಯರರಾದ ಪುನೀತ್, ಶಿವಾಜಿನಗರ ಕಾರ್ಯಪಾಲಕ ಎಂಜಿನಿಯರರು, ಸಹಾಯಕ ಕಾರ್ಯಪಾಲಕ ಎಂಜಿನಿಯರರು, ವಲಯ ಅರಣ್ಯಧಿಕಾರಿ, ರಾಜಕಾಲುವೆ ವಿಭಾಗದ ಎಂಜಿನಿಯರರು ಸೇರಿದಂತೆ ಹಲವರು ಹಾಜರಿದ್ದರು.












Click it and Unblock the Notifications