ಶಾಲಾ ಬಸ್ಸಿನಡಿ ಬಿದ್ದು ಅಪ್ಪಚ್ಚಿಯಾದ ವಿದ್ಯಾರ್ಥಿನಿ

ಚಂದ್ರಾ ಲೇಔಟ್ ಜ್ಯೋತಿನಗರದ 2ನೇ ಕ್ರಾಸ್ ನಿವಾಸಿ ನಮಿತಾ (8) ಮೃತಪಟ್ಟ ಬಾಲಕಿ. ನಾಗರಬಾವಿಯಲ್ಲಿರುವ ಸಿದ್ದಗಂಗಾ ಪಬ್ಲಿಕ್ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಆರ್ಕಿಟೆಕ್ಟ್ ನಾಗೇಂದ್ರ ಬಾಬು ಅವರ ಮೂವರು ಪುತ್ರಿಯರಲ್ಲಿ ನಮಿತಾ ಕೊನೆಯ ಮಗಳು. (ಮೈಸೂರು ಪೊಲೀಸರ ಜಾಗ್ರತೆಯಲ್ಲಿ ಮಕ್ಕಳಿನ್ನು ಸೇಫ್)
ಶಾಲೆಯ ಬಸ್ಸಿನಲ್ಲಿ ಮನೆಗೆ ಮರಳಿದ್ದ ನಮಿತಾ ತನ್ನ ಊಟದ ಡಬ್ಬಿಯನ್ನು ಬಸ್ಸಿನಲ್ಲೇ (Swaraj Mazda) ಮರೆತು ಕೆಳಗಿಳಿದಿದ್ದಳು. ಬಸ್ಸಿಳಿದ ಬಳಿಕ ಅದು ನೆನಪಿಗೆ ಬಂದು ಮತ್ತೆ ಬಸ್ಸಿನ ಕಡೆಗೆ ತಿರುಗಿದ್ದಾಳೆ. ಆ ವೇಳೆಗೆ ಬಸ್ಸಿನಲ್ಲಿದ್ದ ಆಕೆಯ ಸ್ನೇಹಿತರು ನಮಿತಾಳ ಊಟದ ಬ್ಯಾಗನ್ನು ಅವಳತ್ತ ಎಸೆದಿದ್ದಾರೆ. ಆದರೆ ಅದು ಬಸ್ಸಿಗೆ ಆನಿಕೊಂಡು ಕೆಳಗೆ ಬಿದ್ದಿದೆ. ಅದನ್ನು ತೆಗೆದುಕೊಳ್ಳುಲು ನಮಿತಾ ರಭಸವಾಗಿ ಬಸ್ಸಿನತ್ತ ನುಗ್ಗಿದ್ದಾಳೆ. ಇದೆಲ್ಲಾ ಬಸ್ ಚಾಲಕನ ಗಮನಕ್ಕೆ ಬಂದಿಲ್ಲ. ಬಸ್ಸು ಆಗಷ್ಟೇ ವೇಗವಾಗಿ ಹೊರಡತೊಡಗಿದೆ.
ಬಸ್ಸಿನ ಹಿಂಬದಿಯ ಬಲ ಭಾಗದ ಚಕ್ರ ನಮಿತಾಳ ಮೇಲೆ ಹರಿದಿದೆ. ಬಸ್ ವೇಗವಾಗಿದ್ದ ಕಾರಣ ಮಗು ಚಕ್ರದಡಿಗೆ ಸಿಲುಕಿ ಅಪ್ಪಚ್ಚಿಯಾಗಿದೆ. ಸಾಮಾನ್ಯವಾಗಿ ಮಕ್ಕಳು ಶಾಲಾ ಬಸ್ಸು/ ವ್ಯಾನಿನಿಂದ ಇಳಿಯುವ ವೇಳೆಗೆ ಪೋಷಕರು ಹಾಜರಿರುತ್ತಾರೆ. ನಿನ್ನೆ ಘಟನೆ ನಡೆದ ವೇಳೆ ಆಕೆಯನ್ನು ಕರೆದುಕೊಂಡು ಹೋಗಲು ದೊಡ್ಡವರು ಯಾರೂ ಅಲ್ಲಿರಲಿಲ್ಲ.
ಆದರೆ ನಮಿತಾಳ ಸೋದರಿ ತನುಜಾ ಮನೆಯ ಗೇಟ್ ಮುಂದೆಯೇ ನಿಂತಿದ್ದಳು. ತನುಜಾ ನೋಡನೋಡುತ್ತಿದ್ದಂತೆಯೇ ಬಸ್ಸಿನಡಿ ಬಿದ್ದು ನಮಿತಾಳ ಪ್ರಾಣಪಕ್ಷಿ ಹಾರಿದೆ. ಬಸ್ ಚಾಲಕ ಫಿರೋಜ್ ಖಾನ್ ನನ್ನು ಪೊಲೀಸರು ಬಂಧಿಸಲಾಗಿದೆ. (ಪ್ರವಾಸಕ್ಕೆ ಹೋದ 24 ವಿದ್ಯಾರ್ಥಿಗಳು ಪ್ರವಾಹಕ್ಕೆ ಬಲಿ)
ದುರದೃಷ್ಟವೆಂದರೆ ಬಸ್ ಚಾಲಕ ಫಿರೋಜ್ ಖಾನ್ ಮತ್ತು ದಾರಿಹೋಕರು ತಪ್ಪು ಯಾರದೆಂದು ಪರಸ್ಪರ ಜಗಳದಲ್ಲಿ ತಲ್ಲೀನರಾಗಿದ್ದಾರೆ. ಮಗುವನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಬಗ್ಗೆ ಯೋಚಿಸಿಲ್ಲ. ನಿಸ್ಸಹಾಯಕ ಮಗುವಿನ ತಾಯಿ ಪ್ರಮೀಳಾ ಅವರೇ ಧೈರ್ಯ ತಂದುಕೊಂಡು ಸಮೀಪದ ಆಸ್ಪತ್ರೆಗೆ ಮಗುವನ್ನು ಕರೆದೊಯ್ದಿದ್ದಾರಾದರೂ ಮಗು ಆ ವೇಳೆಗೆ ಮೃತಪಟ್ಟಿತ್ತು ಎಂದು ವೈದ್ಯರು ಕೈಚೆಲ್ಲಿದ್ದಾರೆ.












Click it and Unblock the Notifications