Traffic Advisory; ಬೆಂಗಳೂರು ನಗರಕ್ಕೆ ಮೋದಿ ಭೇಟಿ
ಬೆಂಗಳೂರು, ಮೇ 05; ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮತ್ತೆ ರಾಜ್ಯಕ್ಕೆ ಬರುತ್ತಿದ್ದಾರೆ. ಸಂಜೆ ಅವರು ಬೆಂಗಳೂರು ನಗರಕ್ಕೂ ಆಗಮಿಸಲಿದ್ದು, ಸಂಚಾರಿ ಪೊಲೀಸರು ವಾಹನ ಸವಾರರಿಗೆ ಪರ್ಯಾಯ ಮಾರ್ಗವನ್ನು ಬಳಕೆ ಮಾಡುವಂತೆ ಮನವಿ ಮಾಡಿದ್ದಾರೆ.
ಶುಕ್ರವಾರ ಕರ್ನಾಟಕದಲ್ಲಿ ಎರಡು ಸಮಾವೇಶ ಉದ್ದೇಶಿಸಿ ಮಾತನಾಡಲಿರುವ ನರೇಂದ್ರ ಮೋದಿ ಬಳಿಕ ಬೆಂಗಳೂರಿಗೆ ಆಗಮಿಸಿ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಹಿನ್ನಲೆಯಲ್ಲಿ ವಾಹನ ಸಂಚಾರದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.

ಬೆಂಗಳೂರು ಸಂಚಾರಿ ಪೊಲೀಸರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಶುಕ್ರವಾರ ಸಂಜೆ 5.30 ರಿಂದ 7 ಗಂಟೆಯ ತನಕ ಈ ಮಾರ್ಗದಲ್ಲಿ ಸಂಚಾರ ಮಾಡಬೇಡಿ, ಪರ್ಯಾಯ ಮಾರ್ಗವನ್ನು ಬಳಸಿ, ಬೆಂಗಳೂರು ಪೊಲೀಸರ ಜೊತೆ ಸಹಕರಿಸಿ ಎಂದು ಕೋರಿದ್ದಾರೆ.
ಯಾವ-ಯಾವ ರಸ್ತೆಗಳು; ಶುಕ್ರವಾರ ಸಂಜೆ ವಾಹನ ಸವಾರರು ಹಳೆ ವಿಮಾನ ನಿಲ್ದಾಣ ರಸ್ತೆ, ಕೇಂಬ್ರಿಡ್ಜ್ ಲೇಔಟ್ ರಸ್ತೆ, ಇಂದಿರಾ ನಗರ 100 ಅಡಿ ರಸ್ತೆ, ಅರಳಿ ಕಟ್ಟೆ, ಎ. ಎಸ್. ಸಿ. ಸೆಂಟರ್, ಟ್ರಿನಿಟಿ ವೃತ್ತ, ರಾಜಭವನ ರಸ್ತೆ ಬದಲು ಪರ್ಯಾಯ ಮಾರ್ಗ ಬಳಕೆ ಮಾಡಿ ಎಂದು ಕರೆ ನೀಡಿದ್ದಾರೆ.

ಸವಾರರು ಎಂ. ಜಿ. ರಸ್ತೆ, ಡಿಕನ್‌ಸನ್ ರಸ್ತೆ, ಮಣಿಪಾಲ್ ಸೆಂಟರ್, ಕಬ್ಬನ್ ರಸ್ತೆ, ಬಿ. ಆರ್. ವಿ. ಜಂಕ್ಷನ್, ಸಿ. ಟಿ. ಓ. ಜಂಕ್ಷನ್, ಇನ್‌ಫೆಂಟ್ರಿ ರಸ್ತೆಯನ್ನು ಬಳಕೆ ಮಾಡದೆ ಪರ್ಯಾಯ ರಸ್ತೆಗಳಲ್ಲಿ ಸಂಚಾರ ನಡೆಸಬೇಕು ಎಂದು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಮೋದಿ ರೋಡ್ ಶೋಗೆ ಅನುಮತಿ; ಪ್ರಧಾನಿ ನರೇಂದ್ರ ಮೋದಿ ಭಾನುವಾರದ ತನಕ ಬೆಂಗಳೂರು ನಗರದಲ್ಲಿ ಇರಲಿದ್ದಾರೆ. ಶನಿವಾರ ಮತ್ತು ಭಾನುವಾರ ಅವರು ನಗರದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಆದರೆ ಈ ರೋಡ್ ಶೋಗೆ ಅನುಮತಿ ನೀಡಬಾರದು ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಆದರೆ ಆಯೋಗ ಈ ಮನವಿ ತಿರಸ್ಕಾರ ಮಾಡಿದೆ.
ಶನಿವಾರ ಮತ್ತು ಭಾನುವಾರ ನರೇಂದ್ರ ಮೋದಿ ಬೆಂಗಳೂರು ನಗರದಲ್ಲಿ 38 ಕಿ. ಮೀ. ರೋಡ್ ಶೋ ನಡೆಸಲಿದ್ದಾರೆ. ಏಪ್ರಿಲ್ 29 ರಿಂದ ಮೇ 7ರ ತನಕ ನರೇಂದ್ರ ಮೋದಿ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಬೆಂಗಳೂರು ನಗರದಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ. ನಗರದಲ್ಲಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಬೇಕು ಎಂದು ಬಿಜೆಪಿ ತಂತ್ರ ರೂಪಿಸಿದೆ. ಅದಕ್ಕಾಗಿ ಮೋದಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ನರೇಂದ್ರ ಮೋದಿ ಶನಿವಾರ ಸಂಜೆ 6 ಗಂಟೆಯಿಂದ 10 ಗಂಟೆಯ ತನಕ ಬೆಂಗಳೂರು ನಗರದಲ್ಲಿ ಸುಮಾರು 28 ಕಿ. ಮೀ. ರೋಡ್ ಶೋ ನಡೆಸಬೇಕಿತ್ತು. ಆದರೆ ಅದನ್ನು ಭಾನುವಾರ ಬೆಳಗ್ಗೆಗೆ ಮುಂದೂಡಿಕೆ ಮಾಡಲಾಗಿದೆ. ಆದರೆ ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ 5 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರ ತನಕ ರೋಡ್ ಶೋ ಮಾಡಲಿದ್ದಾರೆ.
ಶನಿವಾರ ಮತ್ತು ಭಾನುವಾರ ಬೆಂಗಳೂರು ನಗರದಲ್ಲಿ ಸಂಚಾರ ನಡೆಸುವ ಜನರಿ ಮೋದಿ ರೋಡ್ ಶೋ ಮಾರ್ಗದ ಕುರಿತು ತಿಳಿದಿರುವುದು ಉತ್ತಮ. ಮೋದಿ ಎಸ್‌ಪಿಜಿ ಭದ್ರತೆ ಹೊಂದಿರುವ ಕಾರಣ ರೋಡ್ ಶೋ ಸಾಗುವ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗುತ್ತದೆ. ಅಲ್ಲದೇ ಆ ಮಾರ್ಗದ ಅಂಗಡಿಗಳನ್ನು ಸಹ ಮುಚ್ಚಲಾಗುತ್ತದೆ.











Click it and Unblock the Notifications