ನಮ್ಮ ಮೆಟ್ರೋ ಹಳದಿ ಮಾರ್ಗ: ದೀಪಾವಳಿ ಹಬ್ಬಕ್ಕೆ BMRCLನಿಂದ ಸಿಹಿ ಸುದ್ದಿ?
ಬೆಂಗಳೂರು, ಮೇ 23: ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸುಮಾರು 19 ಕಿಲೋ ಮೀಟರ್ ಉದ್ದದ ಈ ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ವಿದ್ಯುದ್ದೀಕರಣ ಕಾರ್ಯ ಆರಂಭವಾಗಿದೆ. ಮುಂದಿನ ದೀಪಾವಳಿ ಹೊತ್ತಿಗೆ BMRCL ಅಧಿಕಾರಿಗಳು ನಗರವಾಸಿಗಳಿಗೆ ಸಿಹಿ ಸುದ್ದಿ ನೀಡಲಿದ್ದಾರೆ.
ಹೌದು, ಒಟ್ಟು ಸುಮಾರು ಹದಿನಾರು ನಿಲ್ದಾಣಗಳನ್ನು ಹೊಂದಿರುವ ಈ ಮೆಟ್ರೋ ಹಳದಿ ಮಾರ್ಗದಲ್ಲಿ (Namma Metro Yellow Line) ವಿದ್ಯುದ್ದೀಕರಣ ಕಾರ್ಯವನ್ನು ಇದೇ ಮೇ 18ರಂದು ಆರಂಭಿಸಿತ್ತು. ಈ ಮಾರ್ಗದ ವಯಾಡಕ್ಟ್ ಮೂಲಕ ವಿದ್ಯುತ್ ಅನ್ನು ಹರಿಸಲಾಗುತ್ತಿದೆ.

750 ವೋಲ್ಟ್ ವಿದ್ಯುತ್ ಪ್ರವಹಿಸುವ ಮೂಲಕ ಹಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಅದನ್ನು ಇಂದು ಗುರುವಾರ ಮೆಟ್ರೋ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿದೆಯೇ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಏಕೆಂದರೆ ಈ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ರೈಲುಗಳು ಓಡಲಿವೆ. ಹೀಗಾಗಿ ವಿಶೇಷ ಎಚ್ಚರಿಕೆ ವಹಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಮಾಹಿತಿ ನೀಡಿವೆ.
ಮೆಟ್ರೋ ರೈಲು ಪರೀಕ್ಷಾ ಕಾರ್ಯ ಪ್ರಗತಿ
ವಿದ್ಯುದ್ದೀಕರಣ ಜೊತೆಗೆ ಹೊಸ ಮೆಟ್ರೋ ಬೋಗಿಗಳನ್ನು ಪರೀಕ್ಷಿಸಲಾಗುತ್ತಿದೆ. ವಯಾಡಕ್ಟ್ ಮೂಲಕ ವಿದ್ಯುತ್ ಪ್ರವಹಿಸಿ ಹಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ನಂತರ ಪ್ರೊಟೋ ಟೈಪ್ ಮೆಟ್ರೋ ಬೋಗಿಗಳ ನಡುವೆ ಸಂಪರ್ಕ ಸಾಧಿಸುವ ಕಾರ್ಯ ಪ್ರಗತಿಯಲ್ಲಿದೆ.
ಇದೆಲ್ಲ ಕಾರ್ಯಗಳು ಅಂತಿಮಗೊಳ್ಳುತ್ತಿದ್ದಂತೆ ಚೀನಾ ಕಂಪನಿ ನಿರ್ಮಿತ ಹಳದಿ ಮಾರ್ಗದ ರೈಲುಗಳಿಗೆ ಅನೇಕ ಪರೀಕ್ಷೆಗಳು ನಡೆಯಲಿವೆ. ಮುಂದಿನ ದೀಪಾವಳಿ ಹಬ್ಬದ ಹೊತ್ತಿಗೆ ಅಕ್ಟೋಬರ್ ತಿಂಗಳಲ್ಲಿ ಪ್ರಾಯೋಗಿಕ ಸಂಚಾರ ನಡೆಸುವ ನಿರೀಕ್ಷೆ ಇವೆ. ಇದರೊಂದಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನಗರದ ಜನರಿಗೆ ವಾಣಿಜ್ಯ ಕಾರ್ಯಾಚರಣೆಯ ಬಗ್ಗೆ ಸಿಹಿ ಸುದ್ದಿ ನೀಡುವ ಸಾಧ್ಯತೆಗಳು ಇವೆ.

ಜನರಿಗೆ ಓಡಾಡದಂತೆ ಎಚ್ಚರಿಕೆ
ಹಳದಿ ಮಾರ್ಗದಲ್ಲಿ ವಯಾಡಕ್ಸ್ ಮಾರ್ಗವಾಗಿ ವಿದ್ಯುತ್ ಪ್ರವಹಿಸುತ್ತಿರುವ ಕಾರಣ ಸಾರ್ವಜನಿಕರು ಯಾರು ವಯಾಡಕ್ಟ್ ಕೆಳಗೆ ಬರದಂತೆ ನಮ್ಮ ಮೆಟ್ರೋ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಅನಗತ್ಯವಾಗಿ ಯಾರು ಅನುಮತಿ ಇಲ್ಲದೇ ಪ್ರವೇಶಿಸದಂತೆ ಪ್ರಕಟಣೆ ಮೂಲಕ ಮನವಿ ಮಾಡಿದ್ದರು.
ವಯಾಡಕ್ಟ್ ಕೆಳಗೆ 33 ಕೆವಿ ವಿದ್ಯುತ್ ಲೈನ್ ಎಳೆಯಲಾಗಿತ್ತು. ಇದರ ಮೂಲಕ ವಿದ್ಯುತ್ ಅನ್ನು ಹಳಿಗೆ ಹರಿಸುವಾಗ ಅಪಾಯ ಎದುರಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಜನರಿಗೆ ಅಧಿಕಾರಿಗಳು ಅಗತ್ಯ ಎಚ್ಚರಿಕೆ ಕೊಟ್ಟಿದ್ದರು.
2017ರಲ್ಲಿ ಈ ಹಳದಿ ಮಾರ್ಗದ ಕಾಮಗಾರಿ ಕೆಲಸ ಆರಂಭವಾಗಿತ್ತು. ಕಳೆದ ವರ್ಷ ಶೇಕಡಾ 90ರಷ್ಟು ಕಾಮಗಾರಿ ಪೂರ್ಣಗೊಂಡಿತ್ತು. ಇದೀಗ ಈ ಮಾರ್ಗ ಅಂತಿಮ ಹಂತಕ್ಕೆ ಬಂದಿದೆ. ಚಾಲಕ ರಹಿತ ಮೆಟ್ರೋ ರೈಲಿನ ಯಶಸ್ವಿ ಪ್ರಾಯೋಗಿಕ ಸಂಚಾರ ಬಳಿಕ ಮಾರ್ಗ ಸಾರ್ವಜನಿಕರಿಗೆ ಮುಕ್ತವಾಗಲಿದೆ.
ಸದ್ಯ ಬೆಂಗಳೂರಿನ ಜನತೆ ಅದರಲ್ಲೂ ಐಟಿ ಉದ್ಯೋಗಿಗಳು ಆರ್‌ವಿ ರಸ್ತೆ-ಬೊಮ್ಮಸಂದ್ರ ವರೆಗಿನ ಹಳದಿ ಮಾರ್ಗ ಕಾರ್ಯಾಚರಣೆ ಯಾವಾಗ ಆಗಲಿದೆ ಎಂದು ಕಾಯುತ್ತಿದ್ದಾರೆ. ಅವರಿಗೆ ಮುಂದಿನ ದೀಪಾವಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆಗಳು ದಟ್ಟವಾಗಿವೆ.












Click it and Unblock the Notifications