Namma Metro: ಇಬ್ಬರು ಪ್ರಯಾಣಿಕರಿಂದ ಯಡವಟ್ಟು: ಮೆಟ್ರೋ ಸಂಚಾರ ವ್ಯತ್ಯಯ
ತೆರಳುತ್ತಿದ್ದ ರೈಲ್ವೆ ಹತ್ತಿ ಬಳಿಕ ತುರ್ತು ನಿರ್ಗಮನ ದ್ವಾರದ ಗುಂಡಿ ಒತ್ತಿದ್ದರಿಂದ ಸುಮಾರು 20 ನಿಮಿಷ ಸಂಚಾರದಲ್ಲಿ ವ್ಯತ್ಯಯವಾದ ಘಟನೆ ಶನಿವಾರ ಸಂಜೆ ನಡೆದಿದೆ. ಕಾರಣ ತಿಳಿಯಿರಿ.
ಬೆಂಗಳೂರು, ಫೆಬ್ರವರಿ 12: ತೆರಳಬೇಕಿದ್ದ ಮಾರ್ಗದ ಬದಲಾಗಿ ಬೇರೆ ಮಾರ್ಗದ ಮೆಟ್ರೋ ರೈಲು ಹತ್ತಿದ ಪ್ರಯಾಣಿಕರು ಮಾಡಿದ ಅಚಾತುರ್ಯದಿಂದ ಮೆಟ್ರೋ ಸಂಚಾರ ಕೆಲ ಕಾಲ ವಿಳಂಬವಾಯಿತು.
ಮೆಟ್ರೋದಲ್ಲಿ ನಾಗಸಂದ್ರಕ್ಕೆ ಹೋಗಬೇಕಿದ್ದ ಇಬ್ಬರು ಪ್ರಯಾಣಿಕರು ಕೋಣನಕುಂಟೆ ಮಾರ್ಗಕ್ಕೆ ತೆರಳುತ್ತಿದ್ದ ಮೆಟ್ರೊ ರೈಲು ಹತ್ತಿದ್ದರು. ಇವರು ಗ್ರಾಮೀಣ ಭಾಗದಿಂದ ಬಂದಂತವರು. ಅವರಿಗೆ ಮೆಟ್ರೋ ರೈಲು, ಮಾರ್ಗದ ಬಗ್ಗೆ ಅಷ್ಟಾಗಿ ಅರಿವಿಲ್ಲ ಎನ್ನಲಾಗಿದೆ.
ನಾಗಸಂದ್ರಕ್ಕೆ ಹೋಗಬೇಕಾದವರು ಕೋಣನಕುಂಟೆ ಮಾರ್ಗದ ರೈಲು ಹತ್ತಿದ ನಂತರ ಗಾಬಿರಿಯಲ್ಲಿ ತುರ್ತು ನಿರ್ಗಮನದ ದ್ವಾರ ಬಟನ್ ಒತ್ತಿದ್ದಾರೆ. ಇದರ ಪರಿಣಾಮದಿಂದಾಗಿ ಮೆಟ್ರೋ ಸಂಚಾರ ಸುಮಾರು 20 ನಿಮಿಷ ವ್ಯತ್ಯಯವಾಗಿದೆ.

ತುರ್ತು ನಿರ್ಗಮನದ ಬಟನ್ (emergency button) ಒತ್ತಿದ್ದರಿಂದ ರೈಲು ಕುವೆಂಪು ಮೆಟ್ರೋ ನಿಲ್ದಾಣ ಸಮೀಪವೇ ಸಂಚಾರ ನಿಲ್ಲಿಸಿತು. ಇದರಿಂದ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದ ಪ್ರಯಾಣಿಕರು ಪರದಾಡಿದರು. ಸಂಜೆ 6ಗಂಟೆ ಸುಮಾರಿಗೆ ಹಳ್ಳಿಯಿಂದ ತರಕಾರಿ ಹೊತ್ತು ಬಂದಿದ್ದ ಈ ಇಬ್ಬರು ಕುವೆಂಪು ಮೆಟ್ರೋ ನಿಲ್ದಾಣದಿಂದ ಮೆಟ್ರೋ ರೈಲು ಹತ್ತಿದ್ದರು. ಆದರೆ ಅವರು ನಾಗಸಂದ್ರಕ್ಕೆ ಹೋಗಬೇಕಿತ್ತು.
ಈ ಇಬ್ಬರು ಪ್ರಯಾಣಿಕರು ತಪ್ಪಾಗಿ ಬೇರೆ ಪ್ಲಾಟ್‌ಫಾರ್ಮ್‌ನಿಂದ ಕೋಣನಕುಂಟೆ ರೈಲು ಏರಿದ್ದಾರೆ. ಕೆಲವೇ ಸಮಯದ ಬಳಿಕ ತಪ್ಪಿನ ಅರಿವಾಗಿದೆ. ಇದರಿಂದ ಗೊಂದಲಕ್ಕೆ ಒಳಗಾದ ಅವರು ಪ್ರಯಾಣಿಕರ ಸಲಹೆ ಮೇರೆಗೆ ಎಮರ್ಜೆನ್ಸಿ ದ್ವಾರದ ಬಟನ್ ಒತ್ತಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ನಿಲ್ಲಬೇಕಿದ್ದ ರೈಲು ದಾರಿಯ ಮಧ್ಯೆವೆ ನಿಂತಿದೆ.

ರೈಲು ಹೀಗೆ ದಿಢೀರನೇ ನಿಂತಿದ್ದರಿಂದ ಪ್ರಯಾಣಿಕರಿಗೆ ಏನಾಯ್ತು ಎಂಬ ಆತಂಕದಿಂದ ಪರದಾಡಿದರು. ನಮ್ಮ ಮೆಟ್ರೋ ರೈಲ್ವೆ ಸಿಬ್ಬಂದಿ ಆಗಮಿಸಿ ಎಮರ್ಜೆನ್ಸಿ ಬಾಗಿಲು ಬಂದ್ ಮಾಡಿ ಮತ್ತು ಮೆಟ್ರೋ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ನಿಲ್ದಾಣದಲ್ಲಿ ಆ ಇಬ್ಬರನ್ನು ಅವರು ತೆರಳಬೇಕಾದ ಮಾರ್ಗ ಕುರಿತು ತಿಳಿಸಲಾಯಿತು ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಅಧಿಕಾರಿಗಳು ತಿಳಿಸಿದರು.












Click it and Unblock the Notifications