Breaking News: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ಸಮಸ್ಯೆ
ಬೆಂಗಳೂರು, ಅಕ್ಟೋಬರ್ 16: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ನಗರದಲ್ಲಿ ಮಂಗಳವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಮಳೆ ಜನರಿಗೆ, ವಾಹನ ಸವಾರರಿಗೆ ಸಂಕಷ್ಟ ತಂದಿದೆ. ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಬುಧವಾರ ನಮ್ಮ ಮೆಟ್ರೋ ರೈಲುಗಳ ಸಂಚಾರಕ್ಕೆ ಸಹ ಮಳೆ ಅಡಚಣೆ ಉಂಟು ಮಾಡಿದೆ.
ಬುಧವಾರ ಬೆಳಗ್ಗೆ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಈ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ, ಜನರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ನೇರಳೆ ಮಾರ್ಗದಲ್ಲಿ ಸಂಚಾರ: ಸಾಮಾಜಿಕ ಜಾಲತಾಣದ ಪೋಸ್ಟ್ ಮಾಹಿತಿಯಂತೆ, 'ಇಂದು ಬೆಳಿಗ್ಗೆ 6.15 ಗಂಟೆ ಸುಮಾರಿಗೆ ನೇರಳೆ ಮಾರ್ಗದಲ್ಲಿನ ಎಸ್ಎ ರಸ್ತೆ ಮತ್ತು ಇಂದಿರಾ ನಗರ ನಡುವೆ ಹಳಿಯ ಮೇಲೆ ಒಂದು ಮರ ಬಿದ್ದ ಕಾರಣ ಕಾರ್ಯಾಚರಣೆ ತಾತ್ಕಾಲಿಕವಾಗಿ ಅಡ್ಡಿಯಾಗಿದೆ' ಎಂದು ಹೇಳಿದೆ.
'ಈ ಸಮಯದಲ್ಲಿ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಮತ್ತು ವೈಟ್ ಫೀಲ್ಡ್ ಹಾಗೂ ಎಂಜಿ ರಸ್ತೆ ಮತ್ತು ಚಲ್ಲಘಟ್ಟ ನಡುವೆ ಮಾತ್ರ ರೈಲುಗಳು ಓಡುತ್ತಿವೆ. ಅಧಿಕಾರಿಗಳಿಂದ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರಯಾಣಿಕರಿಗೆ ಇದರಿಂದಾಗಿರುವ ಅನಾನುಕೂಲತೆಗಾಗಿ ವಿಷಾಧಿಸಲಾಗಿದೆ' ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸುವಾಗ ಪ್ರಯಾಣಿಕರಿಗೆ ಮೆಟ್ರೋ ಫೀಡರ್ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿತ್ತು. 8.05ಕ್ಕೆ ಮರ ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ರೈಲು ಸಂಚಾರವನ್ನು ಪುನಃ ಆರಂಭಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
Purple line update : The tree obstruction for train movement is cleared and train services on complete purple line restored from 8.05 am . FKI .
— ನಮ್ಮ ಮೆಟ್ರೋ (@OfficialBMRCL) October 16, 2024
ಬೆಂಗಳೂರು ನಗರದಲ್ಲಿ ಮಂಗಳವಾರ ಮುಂಜಾನೆಯಿಂದ ನಿರಂತರವಾಗಿ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಅಕ್ಟೋಬರ್ 16ರಂದು ಸಹ ಮಳೆಯ ಎಚ್ಚರಿಕೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಳೆಯ ತೀವ್ರತೆ ಹೆಚ್ಚಾಗಿರುವುದರಿಂದ ಮುಂಜಾಗೃತಾ ಕ್ರಮವಾಗಿ ಬುಧವಾರ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.
ಮಳೆಯ ಹಿನ್ನಲೆಯಲ್ಲಿ ಮಂಗಳವಾರ ಹಲವು ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ನೀಡಿದ್ದವು. ಬುಧವಾರ ಸಹ ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ನೀಡಿ ಎಂದು ಸರ್ಕಾರವೇ ಐಟಿ-ಬಿಟಿ ಕಂಪನಿಗಳಿಗೆ ಸಲಹೆ ನೀಡಿದೆ. ಮಳೆಯ ಕಾರಣ ಹೆಚ್ಚಿನ ಪ್ರಯಾಣಿಕರು ನಮ್ಮ ಮೆಟ್ರೋ ಅವಲಂಬಿಸಿದ್ದಾರೆ. ಆದರೆ ನೇರಳೆ ಮಾರ್ಗದಲ್ಲಿ ಸಂಚಾರ ಸಮಸ್ಯೆ ಉಂಟಾಗಿತ್ತು.
ಉದ್ಯಾನ ನಗರಿಯಲ್ಲಿ ನಮ್ಮ ಮೆಟ್ರೋ ಈಗ ಜನರ ನೆಚ್ಚಿನ ಸಾರಿಗೆ ವ್ಯವಸ್ಥೆಯಾಗುತ್ತಿದೆ. ಪ್ರತಿದಿನ 6 ಲಕ್ಷಕ್ಕೂ ಅಧಿಕ ಜನರು ಮೆಟ್ರೋದಲ್ಲಿ ಸಂಚಾರವನ್ನು ನಡೆಸುತ್ತಾರೆ. ಮುಂಜಾನೆಯೇ ಮೆಟ್ರೋ ಸಂಚಾರ ಆರಂಭವಾಗಲಿದ್ದು, ಜನರಿಗೆ ಅನುಕೂಲವಾಗಿದೆ. ಮೆಟ್ರೋ ಸಂಚಾರ ಕೈಕೊಟ್ಟರೆ ಕಛೇರಿಗೆ ತೆರಳುವವರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಲಿದೆ. ಇಂದು ಹಳಿಯ ಮೇಲೆ ಮರ ಬಿದ್ದ ಪರಿಣಾಮ ಕೆಲವು ತಾಸು ಮೆಟ್ರೋ ಸಂಚಾರದಲ್ಲಿ ಸಮಸ್ಯೆ ಉಂಟಾಗಿತ್ತು.











Click it and Unblock the Notifications