Namma Metro: ನಾಳೆ ಭಾನುವಾರದ ಪ್ರಯಾಣಿಕರು ಗಮನಿಸಿ
ಬೆಂಗಳೂರು, ಮಾರ್ಚ್ 09: ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಅದರಲ್ಲು ನಾಳೆ ಭಾನುವಾರ ಮೆಟ್ರೋದಲ್ಲಿ ಓಡಾಡುವವರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸಿಹಿ ಸುದ್ದಿಯೊಂದು ನೀಡಿದೆ.
ನಾಳೆ ಮಾರ್ಚ್ 10ರಂದು ಭಾನುವಾರ ಬೆಳಗ್ಗೆ ನಮ್ಮ ಮೆಟ್ರೋ ರೈಲುಗಳು ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಸಂಚಾರ ಸೇವೆ ಆರಂಭಿಸಲಿವೆ. ಇದು ಯಾವೆಲ್ಲ ಮಾರ್ಗಕ್ಕೆ ಅನ್ವಯಿಸಲಿದೆ, ಕಾರಣವೇನು? ಎಂಬ ಮಾಹಿತಿಗೆ ಮುಂದೆ ಓದಿ.

ರಾಜಧಾನಿ ಬೆಂಗಳೂರಿನಲ್ಲಿ ನಾಳೆ 10ನೇ ಮಾರ್ಚ್ (ಭಾನುವಾರ) ದಂದು ಕರ್ನಾಟಕ ಪೊಲೀಸ್ ವತಿಯಿಂದ ರಾಜ್ಯ ಮಟ್ಟದ 10K/5K ರನ್ (ಮ್ಯಾರಾಥಾನ್) ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬೃಹತ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸುಗಮವಾಗಿ ಭಾಗವಹಿಸಲು ಅನುಕೂಲವಾಗುವಂತೆ ಈ ನಿರ್ಣಯ ಕೈಗೊಳ್ಳಲಾಗಿದೆ.
2 ಮಾರ್ಗ 4 ಟರ್ಮಿನಲ್‌ನಿಂದ ರೈಲು ಸಂಚಾರ
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL)ವು ಮೆಟ್ರೋ ನೇರಳೆ ಮಾರ್ಗ (Metro Purple Line) ಮತ್ತು ಮೆಟ್ರೋ ಹಸಿರು ಮಾರ್ಗಗಳಲ್ಲಿ (Metro Green Line) ಮೆಟ್ರೊ ರೈಲು ಸೇವೆಗಳನ್ನು ಎಲ್ಲಾ ನಾಲ್ಕು ಟರ್ಮಿನಲ್‌ಗಳಿಂದ ಒಂದು ಗಂಟೆ ಮುಂಚಿತವಾಗಿ ಕಾರ್ಯಚರಣೆ ಮಾಡಲು ನಿರ್ಧರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೆಟ್ರೊ ಸಂಚಾರ ಸಮಯ ಬದಲಾವಣೆ
ಬೆಂಗಳೂರು ನಮ್ಮ ಮೆಟ್ರೋ ಪ್ರತಿ ಭಾನುವಾರ ಬೆಳಗ್ಗೆ 07 ಗಂಟೆಗೆ ರೈಲು ಸೇವೆ ಆರಂಭಿಸುತ್ತಿತ್ತು. ಆದರೆ ನಾಳೆ ಭಾನುವಾರ ಮಾತ್ರ ಒಂದು ದಿನ ಬೆಳಗ್ಗೆ 07 ಗಂಟೆಗೆ ಬದಲಾಗಿ ಒಂದು ಗಂಟೆ ಮುಂಚಿತವಾಗಿ ಅಂದರೆ 06 ಗಂಟೆಗೆ ಸೇವೆ ಪ್ರಾರಂಭಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಆದ್ದರಿಂದ ಭಾನುವಾರ ನಮ್ಮ ಮೆಟ್ರೋ ಬಳಸುವ ಎಲ್ಲ ಪ್ರಯಾಣಿಕರು ಬೆಳಗ್ಗೆ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮೊದಲೇ ಮೆಟ್ರೋ ಸೇವೆ ಪಡೆಯಬಹುದು.
ಪ್ರತಿ ಭಾನುವಾರವು ಮುಂದುವರೆಸಿ
ಹಿಂದಿನಿಂದಲೂ ಭಾನುವಾರ ಬೆಳಗ್ಗೆ 7 ಗಂಟೆಗೆ ಮೆಟ್ರೋ ರೈಲು ಆರಂಭಕ್ಕೆ ಹಲವು ಪ್ರಯಾಣಿಕರ ವಿರೋಧ ಇದೆ. ಊರಿನಿಂದ ಬೆಂಗಳೂರಿಗೆ ನಸುಕಿನ ಜಾವದಲ್ಲಿ ಬರುವವರಿಗೆ ಮತ್ತು ಭಾನುವಾರ ಕಚೇರಿಗೆ ತೆರಳುವವರಿಗೆ ತಡವಾಗಿ ಮೆಟ್ರೋ ಸೇವೆ ಆರಂಭವಾಗುವುದರಿಂದ ತೊಂದರೆ ಆಗುತ್ತಿದೆ. ಆದ್ದರಿಂದ ಪ್ರತಿ ಭಾನುವಾರವು ಮೆಟ್ರೋ ಸೇವೆ ಬೇಗನೇ ಆರಂಭವಾಗಬೇಕು ಎಂಬ ಒತ್ತಾಯವು ಕೇಳಿ ಬಂದಿದೆ.












Click it and Unblock the Notifications