Namma Metro: ಹೊಸಕೋಟೆಗೆ ಮೆಟ್ರೋ ವಿಸ್ತರಣೆ, ಡಬಲ್ ಡೆಕ್ಕರ್ ಫ್ಲೈಓವರ್ ಸಹ ಇರಲಿದೆ! ಪ್ಲ್ಯಾನ್ ಹೀಗಿದೆ
ಬೆಂಗಳೂರು: ನಮ್ಮ ಮೆಟ್ರೋ 2030ಕ್ಕೆ ಒಟ್ಟು 220 ಕಿಲೋ ಮೀಟರ್ ವಿಸ್ತರಣೆ ಆಗುವ ಗುರಿ ಇಟ್ಟುಕೊಂಡಿದೆ. ಇದಕ್ಕೆ ಪೂರಕ ಎಂಬಂತೆ ಚಲಘಟ್ಟದಿಂದ ವೈಟ್‌ಫಿಲ್ಡ್ ವರೆಗೆ ಇರುವ ಹಾಲಿ ಮೊದಲ ಮೆಟ್ರೋ ನೇರಳೆ ಮಾರ್ಗವು (Namma Metro Purple Line) ಹೊಸಕೋಟೆವರೆಗೆ (16 ಕಿಮೀ.) ವಿಸ್ತರಣೆ (Metro Expand To Hoskote) ಬಗ್ಗೆ ದೆಹಲಿ ಮೂಲದ ಕಂಪನಿಯೊಂದು ಕಾರ್ಯಸಾಧ್ಯತಾ ವರದಿಯಲ್ಲಿ ಉಲ್ಲೇಖಿಸಿದೆ. ಇಲ್ಲಿ ಗಮನಿಸಬೇಕಾದ ವಿಶೇಷವೆಂದರೆ ಈ ಉದ್ದೇಶಿತ ವಿಸ್ತರಣೆ ಮೆಟ್ರೋ ಮಾರ್ಗವು 'ಡಬಲ್ ಡೆಕ್ಕರ್ ಮೇಲ್ಸೇತುವೆ' (Double Decker Flyover) ಹೊಂದಿರುತ್ತದೆ. ಈ ಯೋಜನೆ ಕಾರ್ಯಸಾಧ್ಯವೆಂದು ಕಂಪನಿಯು ವಿವರಿಸಿದೆ.
ಈ ಹಿಂದೆ ಬೆಂಗಳೂರು ನಮ್ಮ ಮೆಟ್ರೋ ರೈಲು ನಿಗಮ (BMRCL) ನಗರದ ಹೊರವಲಯಕ್ಕೆ ಮೆಟ್ರೋ ವಿಸ್ತರಣೆಗೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಸೂಚನೆ ನೀಡಿತ್ತು. ಅದರ ಅನ್ವಯ ದೆಹಲಿ ಮೂಲದ ಇಂಟ್ರೋಸಾಫ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಕಂಪನಿಯು ಮೆಟ್ರೋ ನೇರಳೆ ಮಾರ್ಗದ ಪ್ರಮುಖ ನಿಲ್ದಾಣವಾದ ಕೆ.ಆರ್.ಪುರಂ ನಿಂದ 16 ಕಿಲೋ ಮೀಟರ್ ದೂರ ಇರುವ ಹೊಸಕೋಟೆವರೆಗೆ ಡಬಲ್ ಡೆಕ್ಕರ್ ಮೇಲ್ಸೇತುವೆ ಸಹಿತ ಮಾರ್ಗ ವಿಸ್ತರಣೆ ಮಾಡಬಹುದೆಂದು ತನ್ನ ವರದಿಯಲ್ಲಿ ತಿಳಿಸಿದೆ ಎಂದು 'ಮನಿ ಕಂಟ್ರೋಲ್' ವರದಿ ಮಾಡಿದೆ.

ಈ ಮೊದಲು ನೇರಳೆ ಮಾರ್ಗದ ಕೊನೆಯ ನಿಲ್ದಾಣ ವೈಟ್‌ಫಿಲ್ಡ್‌ನಿಂದ ಹೊಸಕೋಟೆವರೆಗೆ ಮಾರ್ಗ ವಿಸ್ತರಣೆ ಮಾಡುವ ಬಗ್ಗೆ ಪ್ರಸ್ತಾವನೆ ಇತ್ತು. ಆದರೆ ಕಾರ್ಯಸಾಧ್ಯತಾ ವರದಿಯಲ್ಲಿ ತಿಳಿಸಿದಂತೆ ಕೆ.ಆರ್.ಪುರಂ ನಿಂದ ಮೆಟ್ರೋ ವಿಸ್ತರಣೆಗೆ ಬಿಎಂಆರ್‌ಸಿಎಲ್ ಆಸಕ್ತಿ ವ್ಯಕ್ತಪಡಿಸಿದೆ. ಈ ಕಾರ್ಯಸಾಧ್ಯತಾ ವರದಿ ನೋಡಿಕೊಂಡು ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವುದಾಗಿ ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೆ.ಆರ್.ಪುರ-ಹೊಸಕೋಟೆ ವರೆಗೆ 10 ನಿಲ್ದಾಣಗಳು
ಪ್ರಸ್ತಾವಿತ ಹೊಸಕೋಟೆವರೆಗಿನ ಮೆಟ್ರೋ ವಿಸ್ತರಣೆ ಯೋಜನೆಯಡಿ ಒಟ್ಟು 10 ಮೆಟ್ರೋ ನಿಲ್ದಾಣಗಳು ತಲೆ ಎತ್ತಲಿವೆ. ಕೆಆರ್ ಪುರ ಬಳಿಕ ಐಟಿಐ ಭವನ, ಟಿಸಿ ಪಾಳ್ಯ ಗೇಟ್, ಬಟ್ಟರಹಳ್ಳಿ ಜಂಕ್ಷನ್, ಮೇಡಹಳ್ಳಿ ಜಂಕ್ಷನ್, ಆವಲಹಳ್ಳಿ, ಬೂದಿಗೆರೆ ಕ್ರಾಸ್, ಕಟ್ಟಮನಲೂರ್ ಗೇಟ್ ಫ್ಲೈಓವರ್, ಹೊಸಕೋಟೆ ಟೋಲ್ ಪ್ಲಾಜಾ, ಕೆಇಬಿ ವೃತ್ತ ಮತ್ತು ಹೊಸಕೋಟೆ ಸರ್ಕಾರಿ ಆಸ್ಪತ್ರೆ ಮೆಟ್ರೋ ನಿಲ್ದಾಣಗಳ ಸ್ಥಾಪನೆಯು ಯೋಜನೆಯ ಭಾಗವಾಗಬಹುದೆಂದು ವರದಿಯಲ್ಲಿ ತಿಳಿಸಲಾಗಿದೆ.
ಸದ್ಯ ಹೊಸಕೋಟೆಯ ನಾಗರಿಕರು ನಗರದೊಳಗೆ ಬರಲು ಬೆನ್ನಿಗಾನಹಳ್ಳಿ ಮತ್ತು ವೈಟ್‌ಫಿಲ್ಡ್ ಮೆಟ್ರೋ ನಿಲ್ದಾಣಕ್ಕೆ ಬಂದು ಮೆಟ್ರೋ ಏರುತ್ತಿದ್ದರು. ಮುಂದಿನ ವರ್ಷಗಳಲ್ಲಿ ಎಲ್ಲವು ಅಂದುಕೊಂಡಂತಾಗಿ ಯೋಜನೆ ಅನುಷ್ಠಾನಗೊಂಡಲ್ಲಿ ಹೊಸಕೋಟೆಯಿಂದಲೇ ಮೆಟ್ರೋದಲ್ಲಿ ಸಂಚಾರ ಮಾಡಲಿದ್ದಾರೆ.
ರಿಯಲ್ ಎಸ್ಟೇಟ್‌ಗೆ ಬೂಸ್ಟ್
ಹೊಸಕೋಟೆವರೆಗಿನ ಮೆಟ್ರೋ ವಿಸ್ತರಣೆಯಿಂದಾಗಿ ಈ ಭಾಗದ ಆಸ್ತಿಗಳ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. ರಿಯಲ್ ಎಸ್ಟೇಟ್ ವಲಕ್ಕೆ ಬೂಸ್ಟ್ ಸಿಕ್ಕಂತಾಗುತ್ತದೆ. ಮನೆ ಬಾಡಿಗೆ ದರವು ಹೆಚ್ಚಾಗಬಹುದು. ಮುಖ್ಯವಾಗಿ ಈ ಭಾಗದ ಜನರಿಗೆ ಟ್ರಾಫಿಕ್ ದಟ್ಟಣೆ, ಕಿರಿಕಿರಿ ಇಲ್ಲದ ವೇಗದ ಸಾರಿಗೆ ಸೇವೆ ಸಿಕ್ಕಂತಾಗುತ್ತದೆ. ಇತ್ತೀಚೆಗೆ ಹಾಲಿ ರೇಷ್ಮೆ ಸಂಸ್ಥೆ-ಮಾದಾವರ ವರೆಗಿನ ಹಸಿರು ಮಾರ್ಗವು ತುಮಕೂರು ವರೆಗೆ ವಿಸ್ತರಣೆ ಮಾಡಲು ಡಿಪಿಆರ್ ತಯಾರಿಸುವ ಟೆಂಡರ್ ಅಂತಿಮಗೊಳಿಸಿದೆ. ಈ ಟೆಂಡರ್ ಅನ್ನು 1.2 ಕೋಟಿ ರೂ.ಗೆ ಆರ್ವೀ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್‌ಗೆ ನೀಡಿದೆ. ಐದು ತಿಂಗಳೊಳಗೆ ವರದಿ ನೀಡುವಂತೆ ಬಿಎಂಆರ್‌ಸಿಎಲ್ ಸೂಚನೆ ನೀಡಿದೆ.












Click it and Unblock the Notifications