Namma metro Tunneling: ಪಿಂಕ್ ಲೈನ್‌ನಲ್ಲಿ ಟಿಬಿಎಂ 'ಭದ್ರಾ' ಸುರಂಗ ಕಾರ್ಯ ಯಶಸ್ವಿ, ಕಾಮಗಾರಿ ಪ್ರಗತಿಯ ಅಪ್ಡೇಟ್
ಬೆಂಗಳೂರು, ಫೆಬ್ರವರಿ 08: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಡೆಸುತ್ತಿರುವ ಗುಲಾಬಿ ಮಾರ್ಗದ (Metro Pink line) ಕಾಮಗಾರಿಯಲ್ಲಿ 'ಭದ್ರಾ' ಹೆಸರಿನ ಟನಲ್ ಬೋರಿಂಗ್ ಮೆಷಿನ್ (TBM) ಯಶಸ್ವಿ ಕಾರ್ಯಾಚರಣೆ ಬಳಿಕ ಗುರುವಾರ ಹೊರ ಬಂದಿದೆ.
ಈ ಟಿಬಿಎಂ ಹೊರ ಬರುವ ಮೂಲಕ ಮೆಟ್ರೋ ಮಾರ್ಗ ನಿರ್ಮಾಣದಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಈ ಕಾರ್ಯಾಚರಣೆಯ ವೀಕ್ಷಣೆಗೆ ನಮ್ಮ ಮಟ್ರೋ (Namma Metro) ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಆಹ್ವಾನಿಸಿತ್ತು. ಅಧಿಕಾರಿಗಳ ಜತೆ ಮಾರ್ಗ, ನಕ್ಷೆ ಹಾಗೂ ಟನಲ್ ಕೊರೆದು ಹೊರ ಬಂದ 'ಭದ್ರಾ' ಟಿಬಿಎಂ ಕಾರ್ಯವನ್ನು ಅವರು ವೀಕ್ಷಿಸಿದರು.

ಟಿಬಿಎಂ 'ಭದ್ರಾ' ಗುಲಾಬಿ ಮಾರ್ಗದಲ್ಲಿ ವೆಂಕಟೇಶಪುರದಿಂದ ಕೆಜಿ ಹಳ್ಳಿಯವರೆಗೆ ಉತ್ತರಕ್ಕೆ 1,186 ಮೀಟರ್ ಉದ್ದದ ಸುರಂಗ ಕೊರೆದು ಯಶಸ್ವಿಯಾಗಿ ಇಂದು ಹೊರ ಬಂದಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶೇ.91ರಷ್ಟು ಸುರಂಗ ಮಾರ್ಗ ಪೂರ್ಣ
ಈ 'ಭದ್ರಾ' ಟಿಬಿಎಂ ಯಂತ್ರವು ಈ ಮಾರ್ಗದಲ್ಲಿ ಕಳೆದ ವರ್ಷ 2023ರ ಫೆಬ್ರುವರಿ 16ರಂದು ತನ್ನ ಕಾರ್ಯಾಚರಣೆ ಆರಂಭಿಸಿತ್ತು. ಈ ಮಾರ್ಗದಲ್ಲಿ BMRCL ಉದ್ದೇಶಿಸಿದ್ದ ಒಟ್ಟಾರೆ 20,992 ಮೀಟರ್ ಸುರಂಗ ಮಾರ್ಗದಲ್ಲಿ 19,120 ರಷ್ಟು ಅಂದರೆ ಶೇಕಡಾ 91ರಷ್ಟು ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಅಧಿಕಾರಿಗಳು ಸಾಧನೆಯನ್ನು ಹಂಚಿಕೊಂಡಿದ್ದಾರೆ.

ಇನ್ನೂ ಈ ಮಾರ್ಗದಲ್ಲಿ ಟ್ಯಾನರಿ ರಸ್ತೆಯಿಂದ ನಾಗವಾರದ ಉತ್ತರ ರಾಂಪ್‌ವರೆಗೆ 4.591 ಕಿಮೀ ಉದ್ದದ ಭೂಗತ ವಿಭಾಗದ ನಿರ್ಮಾಣಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಲ್ಲಿ ಸುರಂಗ ಮಾರ್ಗ ಮತ್ತು ನಾಲ್ಕು ಭೂಗತ ಮೆಟ್ರೋ ನಿಲ್ದಾಣಗಳು ಒಳಗೊಳ್ಳುತ್ತವೆ.
ಟ್ಯಾನರಿ ರಸ್ತೆ, ವೆಂಕಟೇಶಪುರ, ಕಾಡಗೊಂಡನಹಳ್ಳಿ ಮತ್ತು ನಾಗವಾರವನ್ನು ಡಿಸೆಂಬರ್ 2019 ರಲ್ಲಿ ಗುತ್ತಿಗೆದಾರ M/s ITD ಸಿಮೆಂಟೇಶನ್ ಇಂಡಿಯಾ ಲಿಮಿಟೆಡ್‌ಗೆ ನೀಡಲಾಯಿತು. ಅದರಂತೆ ಗುತ್ತಿಗೆದಾರರು 2021 ರಲ್ಲಿ TBM-1 (ಭದ್ರಾ) ಮತ್ತು TBM-2 (ತುಂಗಾ) ಎಂಬ ಎರಡು EPB ಟೈಪ್ ಟನಲ್ ಬೋರಿಂಗ್ ಮೆಷಿನ್‌ಗಳನ್ನು (TBM) ಬಳಸಿಕೊಂಡು ಸುರಂಗ ಕೊರೆಯಲು ಕಾಮಗಾರಿ ಆರಂಭಿಸಿದ್ದರು.
ಒಪ್ಪಂದದಲ್ಲಿದ್ದ 3 ಟನಲ್ ಕಾರ್ಯಾಚರಣೆ ಪಟ್ಟಿ
* ವೆಂಕಟೇಶಪುರ-ಶಾದಿಮಹಲ್ ವರೆಗೆ ಸುರಂಗ ಮಾರ್ಗ 1066.80 ಮೀಟರ್. ಸೌತ್‌ಬೌಂಡ್ ಟನಲ್ 'ತುಂಗಾ' 2022 ಆಗಸ್ಟ್ 24ರಂದು ತನ್ನ ಕಾರ್ಯಾಚರಣೇ ನಡೆಸಿ ಹೊರ ಬಂದಿತ್ತು. ಇನ್ನೂ ಉತ್ತರದ ಸುರಂಗ ವನ್ನು ಕೊರೆದ 'ಭದ್ರಾ' ಟಿಬಿಎಂ 2022ರ ಡಿಸೆಂಬರ್ 16ರಂದು ಹೊರ ಬಂದಿತ್ತು.
* ವೆಂಕಟೇಶಪುರದಿಂದ ಕೆ.ಜಿ.ಹಳ್ಳಿಗೆ ಸುರಂಗ ಮಾರ್ಗ 1185.80 ಮೀಟರ್ ಕೊರೆಯಲಾಗಿದೆ. ಇಲ್ಲಿ ಕಾರ್ಯ ನಿರ್ವಹಿಸಿದ್ದ ಸೌತ್‌ಬೌಂಡ್ ಟನಲ್ 'ತುಂಗಾ' ಕಳೆದ ವರ್ಷ 2023ರ ಡಿಸೆಂಬರ್ 06 ರಂದು ಕೆಲಸ ಮುಗಿಸಿತ್ತು. ಇತ್ತ ಉತ್ತರದ ಸುರಂಗ 'ಭದ್ರಾ' ಟಿಬಿಎಂ ಇಂದು ಫೆಬ್ರುವರಿ 08ರಂದು ಹೊರ ಬಂದಿದೆ.
* ಅದೇ ರೀತಿ ಕೆ.ಜಿ.ಹಳ್ಳಿಯಿಂದ ಕಟ್ ಮತ್ತು ಕವರ್-1ರವರೆಗೆ ಸುರಂಗ ಮಾರ್ಗ 935 ಮೀಟರ್ ಕೊರೆದು ಸೌತ್‌ಬೌಂಡ್ ಟನಲ್ 'ತುಂಗಾ' ಕಾರ್ಯಾಚರಣೆಯನ್ನು ಇದೇ ತಿಂಗಳ ಫೆ. 02ರಂದು ಕಾರ್ಯ ಆರಂಭಿಸಿದೆ. ಇದಕ್ಕೆ ಪ್ರತಿಯಾಗಿ ಉತ್ತರದ ಸುರಂಗ 'ಭದ್ರಾ' ಟಿಬಿಎಂ ಮುಂದಿನ ಏಪ್ರೀಲ್ 07ರಂದು ಸುರಂಗ ಕೊರೆಯುವ ಕೆಲಸ ನಡೆಸಲಿದೆ.
ನಮ್ಮ ಮೆಟ್ರೋ ರೀಚ್ 6 ಲೈನ್ ಮಾಹಿತಿ
ಈ ಮೆಟ್ರೋ ಯೋಜನೆಯು ಹಂತ-2 ರ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಒಟ್ಟು 21.26 ಕಿ.ಮೀ. ವ್ಯಾಪ್ತಿಯ ಈ ರೀಚ್ 6 ಲೈನ್ ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ 18 ನಿಲ್ದಾಣಗಳನ್ನು ಒಳಗೊಂಡಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ 6 ನಿಲ್ದಾಣ ಮತ್ತು ಡೈರಿ ಸರ್ಕಲ್‌ನಿಂದ ನಾಗವಾರದವರೆಗೆ 12 ನಿಲ್ದಾಣ ಈ ಲೈನ್ ವ್ಯಾಪ್ತಿಗೆ ಬರುತ್ತವೆ ಎಂದು BMRCL ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮಾರ್ಗದ ಸಿವಿಲ್ ಕಾಮಗಾರಿ ಮುಗಿದು ಹಳಿ ಜೋಡಣೆ, ಮೆಟ್ರೋ ನಿಲ್ದಾಣ ನಿರ್ಮಾಣದ ಕೆಲಸಗಳೂ ನಡೆಯಬೇಕಿದೆ.












Click it and Unblock the Notifications