ಹೊಸೂರು ತನಕ ಮೆಟ್ರೋ ವಿಸ್ತರಣೆ; ಜನ ಹೇಳುವುದೇನು?
ಬೆಂಗಳೂರು ಜೂ. 12: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ನಮ್ಮ ಮೆಟ್ರೋ 2ನೇ ಹಂತದ ಆರ್. ವಿ. ರಸ್ತೆ-ಬೊಮ್ಮಸಂದ್ರವರೆಗಿನ ಮಾರ್ಗವನ್ನು ಹೊಸೂರು ತನಕ ವಿಸ್ತರಿಸುವ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ.
ಈ ಕುರಿತು ವಿವಿಧ ಆಯಾಮಗಳ ಚರ್ಚೆ ಆರಂಭವಾಗಿದೆ. ತಮಿಳುನಾಡಿನ ಹೊಸೂರು ತನಕ ಮೆಟ್ರೋ ವಿಸ್ತರಣೆ ಕುರಿತ ಕೃಷ್ಣಗಿರಿ ಸಂಸದ ಡಾ. ಎ. ಚೆಲ್ಲಕುಮಾರ್ ಪ್ರಸ್ತಾವಕ್ಕೆ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ವರದಿಯನ್ನು ಬಿಎಂಆರ್‌ಸಿಎಲ್ ಮೇ 5ರಂದು ಕೇಂದ್ರ ನಗರ ಮತ್ತು ವಸತಿ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿರುವುದಾಗಿ ತಿಳಿಸಿದೆ.
ನಮ್ಮ ಮೆಟ್ರೋ ಎರಡನೇ ಹಂತದ ಕೆಲಸ ಬೊಮ್ಮಸಂದ್ರದಲ್ಲಿ ಕೊನೆಗೊಳ್ಳುತ್ತದೆ. ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ ಬಳಿಕ ಮೆಟ್ರೋ ರೈಲು ಬೊಮ್ಮಸಂದ್ರಕ್ಕೆ ಬದಲಾಗಿ ಹೆಚ್ಚುವರಿ 10 ಕಿ.ಮೀ. ವರೆಗೆ ಸಾಗಿ ಹೊಸೂರಲ್ಲಿ ಕೊನೆಗೊಳ್ಳುತ್ತದೆ. ಹೀಗಾಗಿ ಈ ವಿಚಾರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಮೆಟ್ರೋ ಮಾರ್ಗ ವಿಸ್ತರಣೆ; ಬೊಮ್ಮಸಂದ್ರದಿಂದ ಹೊಸೂರುವರೆಗೆ ವಿಸ್ತರಿಸಿದರೆ ಬೆಂಗಳೂರು ಸೇರಿದಂತೆ ರಾಜ್ಯದ ವ್ಯಾಪ್ತಿಗೆ ಬರಬೇಕಾದ ಭವಿಷ್ಯದ ಕೈಗಾರಿಕೆಗಳು, ಉದ್ದಿಮೆಗಳು ಇನ್ನಿತರ ಆರ್ಥಿಕ ಚಟುವಟಿಕೆಗಳು ಹೊಸೂರಿಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇವೆ.
ಅಲ್ಲದೇ ಈಗಾಗಲೇ ವಿವಿಧೆಡೆ ನಮ್ಮ ಮೆಟ್ರೋ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಆ ಬಗ್ಗೆ ಸರ್ಕಾರ ಹೆಚ್ಚು ತಲೆ ಕೆಡಿಸಿಕೊಳ್ಳಬೇಕು. ಈ ಮಧ್ಯೆ ಹೊಸೂರುವರೆ ವಿಸ್ತರಣೆ ನಿರ್ಧಾರ ತಪ್ಪು ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಇನ್ನು ಕೆಲವರು ಹೊಸೂರು ಭಾಗಕ್ಕೆ ಸಂಪರ್ಕ ಸಾಧಿಸಲು, ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ರಾಜ್ಯ ಸರ್ಕಾರದ ನಿರ್ಧಾರ ಬೆಂಬಲಿಸಿದ್ದಾರೆ.

ಕೆಲವು ಅಂಶಗಳು
* ಆರ್. ವಿ. ರಸ್ತೆಯಿಂದ ಹೊಸೂರಿಗೆ 20.5 ಕಿ.ಮೀ. ಆಗಲಿದೆ ಎಂದು ಅಂದಾಜಿಸಲಾಗಿದೆ. ಅಷ್ಟು ದೂರದ ಸಂಪರ್ಕದವರೆಗೆ ವಿಸ್ತರಣೆ ಮಾಡುವುದು ಕಾರ್ಯಸಾಧುವಲ್ಲ. ಅಲ್ಲದೇ ಈ ಸಂಬಂಧ ಪದೇ ಪದೇ ದೂರದ ಪ್ರದೇಶಗಳಿಗೆ ಮೆಟ್ರೋ ವಿಸ್ತರಿಸುವ ಕುರಿತು ಹೇಳುವುದು ಸರಿಯಲ್ಲ ಎಂದು ನಗರ ಸಮುದಾಯ ಕಾರ್ಯಕರ್ತ ದ್ಯಾವಣ್ಣನವರ್ ಅಭಿಪ್ರಾಯಪಟ್ಟಿದ್ದಾರೆ.
* ಈಗಾಗಲೇ ಬೆಂಗಳೂರಿನ ಹೃದಯ ಭಾಗದಲ್ಲಿ ನಮ್ಮ ಮೆಟ್ರೋ ಸಂಪರ್ಕ ಸಾಧ್ಯವಾಗಿದೆ. ಉದ್ದೇಶಿತ ಉಪನಗರ ರೈಲು ಯೋಜನೆಗಳನ್ನು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಪಡಿಸಬೇಕು ಹಾಗೂ ಉಪನಗರ ರೈಲು ಯೋಜನೆ ವಿಸ್ತರಿಸಬೇಕು ಎಂದು ಕೆಲವರು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.
* ಒಂದು ಮೆಟ್ರೋ ಬೋಗಿಯಲ್ಲಿ ಸುಮಾರು 30ಜನರಿಗೆ ಅವಕಾಶ ಇದ್ದು, ಹೆಚ್ಚು ಜನರು ಓಡಾಡುವ ದೂರದ ಹೊಸೂರಿನಿಂದ ನಗರಕ್ಕೆ ಬರಲು ಸಾಕಷ್ಟು ಸಮಯ ಹಿಡಿಯುತ್ತದೆ. ಈ ಕುರಿತು ತಮಿಳುನಾಡು ದೆಹಲಿ-ಮಥುರಾ ರೈಲ್ವೆ ವ್ಯವಸ್ಥೆ ನೋಡಿ ಕಲಿಯಬೇಕು ಎಂದುಕರ್ನಾಟಕ ರೈಲ್ವೆ ವೇದಿಕೆಯ ಲೋಕೇಶ್ ಎಂಬುವವರು ಮಾಹಿತಿ ಹಂಚಿಕೊಂಡಿದ್ದಾರೆ.
* ಇವೆಲ್ಲವನ್ನು ಗಮನಿಸಿದರೆ ಬೊಮ್ಮಸಂದ್ರದಿಂದ ಹೊಸೂರುವರೆಗಿನ ಮೆಟ್ರೋ ವಿಸ್ತರಣೆಗೆ ಸಾರ್ವಜನಿಕ ಒಪ್ಪಿಗೆಗಿಂತ ತಗಾದೆಗಳು ಹೆಚ್ಚು ಕೇಳಿಬಂದಿವೆ ಎನ್ನಬಹುದು.












Click it and Unblock the Notifications