Namma Metro: ಡಿಸೆಂಬರ್ ವೇಳೆಗೆ ಪ್ರಯಾಣಿಕರ ಸಂಖ್ಯೆ 10 ಲಕ್ಷಕ್ಕೆ ಏರಿಕೆ
ಬೆಂಗಳೂರು, ಮೇ 06: ನಮ್ಮ ಮೆಟ್ರೋ ಬೆಂಗಳೂರು ನಗರದ ಜನರ ಸಂಚಾರಕ್ಕೆ ಸಹಕಾರಿಯಾಗಿದೆ. ದಿನನಿತ್ಯ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಈಗ ಬಿಎಂಟಿಸಿ ಬಸ್ ಮತ್ತು ನಮ್ಮ ಮೆಟ್ರೋ ನಡುವೆ ಪೈಪೋಟಿ ನಡೆಯುತ್ತಿದೆ. ಸದ್ಯ ನಗರದಲ್ಲಿ ಹಳದಿ, ನೇರಳೆ ಮಾರ್ಗದಲ್ಲಿ ಮಾತ್ರ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ.
2024ರ ಅಂತ್ಯಕ್ಕೆ ಹೊಸ ಮಾರ್ಗದಲ್ಲಿ ನಮ್ಮ ಮಟ್ರೋ ರೈಲುಗಳ ಸಂಚಾರ ಆರಂಭವಾಗಲಿದೆ. ಆಗ ಪ್ರಸ್ತುತ ಇರುವ ಪ್ರತಿದಿನದ ಪ್ರಯಾಣಿಕರ ಸಂಖ್ಯೆ 6 ರಿಂದ ದ 10 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರತಿ ತಿಂಗಳು ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಏಪ್ರಿಲ್ ತಿಂಗಳಿನಲ್ಲಿ ಒಂದೇ ದಿನ 7,92,000 ಮಂದಿ ಪ್ರಯಾಣ ಮಾಡಿ ಹೊಸ ದಾಖಲೆ ಮಾಡಿದ್ದರು. ಬಿಎಂಆರ್‌ಸಿಎಲ್ ಸಹ ಜನರಿಗೆ ಅನುಕೂಲವಾಗುವಂತೆ ಮೆಟ್ರೋ ಸಂಚಾರದ ಅವಧಿಯಲ್ಲಿಯೂ ಬದಲಾವಣೆಯನ್ನು ಮಾಡುತ್ತಲೇ ಇದೆ.
ನಮ್ಮ ಮೆಟ್ರೋ ಜಾಲ ವಿಸ್ತರಣೆ: ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದೆ. ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಜನರು ನಮ್ಮ ಮೆಟ್ರೋ ಬಳಕೆ ಮಾಡುತ್ತಿದ್ದು, ಪ್ರತಿ ತಿಂಗಳು ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಉಳಿದ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಕಾಮಗಾರಿಗಳಿಗೆ ಚುರುಕು ನೀಡಿದೆ.
ನಗರದ ಬಹುನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗವಾದ ಆರ್. ವಿ. ರಸ್ತೆ-ಬೊಮ್ಮಸಂದ್ರ (ಹಳದಿ ಮಾರ್ಗ)ದಲ್ಲಿ ಡಿಸೆಂಬರ್ ಅಂತ್ಯಕ್ಕೆ ವಾಣಿಜ್ಯ ಸಂಚಾರ ನಿರೀಕ್ಷೆ ಮಾಡಲಾಗಿದೆ. ಈ ಮಾರ್ಗದಲ್ಲಿ ರೈಲುಗಳ ಓಡಾಟ ಆರಂಭವಾದರೆ ಸುಮಾರು 4 ಲಕ್ಷ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಲಿದ್ದು, ಪ್ರತಿದಿನ ಮೆಟ್ರೋ ಬಳಸುವ ಪ್ರಯಾಣಿಕರ ಸಂಖ್ಯೆ 10 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಅಂಕಿ ಸಂಖ್ಯೆಯ ಮಾಹಿತಿ ಪ್ರಕಾರ 2023ರ ಮೇ ತಿಂಗಳಿನಲ್ಲಿ 1.74 ಕೋಟಿ ಮೆಟ್ರೋ ಪ್ರಯಾಣಿಕರಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಅದು 2.04 ಕೋಟಿಗೆ ಏರಿಕೆ ಕಂಡಿತು. ಏಪ್ರಿಲ್‌ನಲ್ಲಿ ಒಂದೇ ದಿನ 7 ಲಕ್ಷಕ್ಕೂ ಅಧಿಕ ಜನರು ಸಂಚಾರ ಮಾಡಿ ಹೊಸ ದಾಖಲೆ ಬರೆದರು. ಬೇಸಿಗೆಯ ಬಿಸಿಲಿನ ಝಳ, ಸಂಚಾರ ದಟ್ಟಣೆಯನ್ನು ತಪ್ಪಿಸಿಕೊಳ್ಳಲು ಜನರು ಹೆಚ್ಚಾಗಿ ಮೆಟ್ರೋವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ನಮ್ಮ ಮೆಟ್ರೋದ ಎರಡು ಮಾರ್ಗವನ್ನು ನೋಡಿದರೆ ಹಸಿರು ಮಾರ್ಗಕ್ಕಿಂತ ನೇರಳೆ ಮಾರ್ಗದಲ್ಲಿಯೇ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಹಳದಿ ಮಾರ್ಗದ ವಾಣಿಜ್ಯ ಸಂಚಾರಕ್ಕೆ ಚಾಲನೆ ಸಿಕ್ಕಿದರೆ ಪ್ರಯಾಣಿಕರ ಸಂಖ್ಯೆ ಶೇ 20 ರಿಂದ 30ರಷ್ಟು ಅಧಿಕವಾಗಲಿದೆ. ಗುಲಾಬಿ ಮಾರ್ಗ, ನೀಲಿ ಮಾರ್ಗದ ಕಾಮಗಾರಿ ಇನ್ನೂ ನಡೆಯುತ್ತಿದ್ದು, 2025-26ರ ವೇಳೆಗೆ ವಾಣಿಜ್ಯ ಸಂಚಾರವನ್ನು ನಿರೀಕ್ಷೆ ಮಾಡಲಾಗಿದೆ.
ಆರ್. ವಿ. ರಸ್ತೆ, ಜಯದೇವ, ಸಿಲ್ಕ್ ಬೋರ್ಡ್, ಬೊಮ್ಮಸಂದ್ರ ಮಾರ್ಗದಲ್ಲಿ ಹೆಚ್ಚಿನ ಜನರು ಪ್ರಯಾಣ ಮಾಡುವ ಕುರಿತು ಡಿಪಿಆರ್‌ನಲ್ಲಿಯೇ ಮಾಹಿತಿ ನೀಡಲಾಗಿತ್ತು. ಈ ಮಾರ್ಗ ಸಾಫ್ಟ್‌ವೇರ್ ಕಂಪನಿಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಟೆಕ್ಕಿಗಳು ಹೆಚ್ಚಾಗಿ ಮೆಟ್ರೋ ಬಳಕೆ ಮಾಡಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು.
ನಮ್ಮ ಮೆಟ್ರೋ ಯೋಜನೆಯ ಹಂತ-2ರ 75 ಕಿ. ಮೀ. ಮಾರ್ಗದಲ್ಲಿ 61 ನಿಲ್ದಾಣಗಳಿವೆ. ನೇರಳೆ ಮತ್ತು ಹಸಿರು ಮಾರ್ಗ ನಾಲ್ಕು ದಿಕ್ಕುಗಳ ವಿಸ್ತರಣೆ ಮತ್ತು ಗೊಟ್ಟಿಗೆರೆ-ನಾಗವಾರ 21.25 ಕಿ. ಮೀ., ಆರ್. ವಿ. ರಸ್ತೆ ಬೊಮ್ಮಸಂದ್ರ 19.15 ಕಿ. ಮೀ. ಮಾರ್ಗವು ಸಂಚಾರಕ್ಕೆ ಮುಕ್ತವಾಗಬೇಕಿದೆ.












Click it and Unblock the Notifications