Namma Metro: ಮಹಿಳೆಯರ ಸುರಕ್ಷತೆಗೆ ಮೆಟ್ರೋ ಆದ್ಯತೆ, ಒಂದೇ ಬೋಗಿಯಲ್ಲಿ 4 ಬಟನ್, ಏನೆಲ್ಲ ಇದೆ? ಮಾಹಿತಿ
ಬೆಂಗಳೂರು, ಡಿಸೆಂಬರ್ 11: ಬೆಂಗಳೂರು ಮೆಟ್ರೋದಲ್ಲಿ ಡಿಸೆಂಬರ್ ಮೊದಲ ವಾರ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದರ ಪ್ರಕರಣ ಬೆಳಕಿಗೆ ಬಂದಿತ್ತು. ಹೀಗಾಗಿ ನಮ್ಮ ಮೆಟ್ರೋ (Namma Metro) ಸಂಸ್ಥೆಯು ಮಹಿಳೆಯರಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ನಾನಾ ಸೌಲಭ್ಯಗಳನ್ನು ಒದಗಿಸುತ್ತಿದೆ. ಮಹಿಳೆಯರು ಮೆಟ್ರೋದಲ್ಲಿ ತೊಂದರೆ ಆದರೆ ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.
ಮೆಟ್ರೋದಲ್ಲಿ ನಿಯಮ ಉಲ್ಲಂಘನೆ ಪ್ರಕರಣ, ಕಿಡಿಗೇಡಿತನ, ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿರುವುದು ವರದಿ ಆಗಿದೆ. ಮೆಟ್ರೋದಲ್ಲಿ ಓಡಾಡುವುದು ಹೇಗೆ ಎಂಬ ಭಾವನೆ ಮಹಿಳೆಯರಲ್ಲಿ ಮೂಡಿದೆ. ಹೀಗೆ ಭಯ ಸೃಷ್ಟಿಯಾಗುವ ಮೊದಲೇ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕೆಲವು ಸೌಲಭ್ಯಗಳನ್ನು ಪರಿಚಯಿಸಿದೆ. ಇದನ್ನು ಮಹಿಳೆಯರು ತಿಳಿಯುವುದು ಮುಖ್ಯವಾಗಿದೆ.

ಮೆಟ್ರೋದಲ್ಲಿ ನಿಮಗೇನಾದರೂ ತೊಂದರೆ, ಯಾವುದೇ ರೀತಿಯ ಕಿರುಕುಳ ಉಂಟಾದರೆ ನೀವು ಮೆಟ್ರೋ ಬೋಗಿಯಲ್ಲಿ ಅಳವಡಿಸಲಾಗಿರುವ ತುರ್ತು ಎಚ್ಚರಿಕೆ 'ಬಟನ್' ಪ್ರೆಸ್ ಮಾಡಬೇಕು. ಇದನ್ನು 'ಪ್ಯಾನಿಕ್ ಬಟನ್' ಅಂತಲೂ ಕರೆಯುತ್ತಾರೆ. ಇವು ಒಂದೇ ಬೋಗಿಯಲ್ಲಿ ನಾಲ್ಕು ಕಡೆಗಳಲ್ಲಿ ಅಳವಡಿಕೆ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ತುರ್ತು ಬಟನ್ ಪ್ರೆಸ್ ಮಾಡಿದರೆ ಸಹಾಯ ಹೇಗೆ?
ನೀವು ಈ ಪ್ಯಾನಿಕ್ ಬಟನ್ ಪ್ರೆಸ್ ಮಾಡಿದರೆ ಅದು ಲೋಕೋಪೈಲಟ್‌ಗೆ ಸಂದೇಶ ಹೋಗುತ್ತದೆ. ಅವರ ನಿಮ್ಮ ಸಹಾಯಕ್ಕೆ ಸಿಬ್ಬಂದಿಯನ್ನು ಸಂಪರ್ಕಿಸುತ್ತಾರೆ. ಅಲ್ಲದೆ ಬಟನ್ ಪ್ರೆಸ್ ಮಾಡಿದ ನಂತರ ನೀವು ಸಹ ರೈಲು ನಿರ್ವಾಹಕರ ಜೊತೆಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ. ಇನ್ನೂ ಅದೇ ಬೋಗಿ ಒಳಗಿರುವ ಸಿಸಿ ಕ್ಯಾಮೆರಾಗಳು ನಿಮ್ಮನ್ನು ಗಮನಿಸುತ್ತಲೇ ತೊಂದರೆಯ ದೃಶ್ಯಗಳನ್ನು ಸೆರೆ ಹಿಡಿಯುತ್ತವೆ. ಇದೆಲ್ಲ ನಡೆಯುವಷ್ಟರದಲ್ಲಿ ಎದುರಾಗುವ ಮುಂದಿನ ನಿಲ್ದಾಣದಲ್ಲಿ ಸಿಬ್ಬಂದಿ ನಿಮ್ಮ ಸಹಾಯಕ್ಕೆ ಬರುತ್ತಾರೆ.

ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗುತ್ತಿದ್ದಂತೆ ಮೆಟ್ರೋದಲ್ಲಿ ಆಗಾಗ ಸಹಾಯವಾಣಿಯ ನಂಬರ್ ಪ್ರದರ್ಶನಗೊಳ್ಳುತ್ತಿವೆ. ನೀವು ಈ ಸಂಖ್ಯೆ ಸೇವ್ ಮಾಡಿಟ್ಟುಕೊಳ್ಳಬಹುದಾಗಿದೆ. ಇದೆಲ್ಲ ವ್ಯವಸ್ಥೆ ಅಳವಡಿಕೆಯಿಂದಾಗಿ ಮಹಿಳೆಯರು ನಿರ್ಭಯದಿಂದ ಮೆಟ್ರೋದಲ್ಲಿ ಓಡಾಡಬಹುದಾಗಿದೆ. ಪ್ರತಿ ಹಂತದಲ್ಲಿ ನಮ್ಮ ಮೆಟ್ರೋ ನಿಮ್ಮ ಸಹಾಯಕ್ಕೆ ಬರಲಿದೆ.
ಸಹಾಯವಾಣಿ ಸಂಖ್ಯೆಗಳು ಹೀಗಿವೆ
ಯಾವುದೇ ತುರ್ತು ಸಂದರ್ಭದಲ್ಲಿ ನೆರವಾಗಲು ನಮ್ಮ ಮೆಟ್ರೋ ಸಿದ್ಧವಾಗಿದೆ. ಭದ್ರತಾ ಸಿಬ್ಬಂದಿ ಯಾವಾಗಲೂ ಜಾಗರೂಕರಾಗಿರುತ್ತಾರೆ. ಪ್ರಯಾಣಿರು ನಿಯಂತ್ರಣಾ ಕೇಂದ್ರವನ್ನು ದೂರವಾಣಿ ಸಂಖ್ಯೆ 0802519 1208, 080 2216 2258 / 2208 ಅಥವಾ ಟೂಲ್‌ಫ್ರಿ ಸಹಾಯವಾಣಿ ಸಂಖ್ಯೆ 1800-425-12345 ಗೆ ಸಂಪರ್ಕಿಸಬಹುದು.
ಇನ್ನೂ ಯಾವುದೇ ತುರ್ತು ಸಂದರ್ಭದಲ್ಲಿ ಮಹಿಳೆ ಸೇರಿದಂತೆ ಎಲ್ಲ ಪ್ರಯಾಣಿಕರು ತುರ್ತು ಬಟನ್ ಮೂಲಕ ಸಂಪರ್ಕಿಸಬಹುದಾಗಿದೆ.












Click it and Unblock the Notifications