Namma Metro 3rd Phase: ಹೊಸ ಮಾರ್ಗ ನಿರ್ಮಾಣಕ್ಕೆ ಟೆಂಡರ್ ಆಹ್ವಾನ, 2031ಕ್ಕೆ 222 ಕಿಮೀ. ಜಾಲ ವಿಸ್ತರಣೆ
ಬೆಂಗಳೂರು: ಕೇಂದ್ರ ಸರ್ಕಾರದ ಅನುಮೋದನೆ ಬಳಿಕವು ವಿಳಂಬವಾಗಿದ್ದ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ವೇಗ ಸಿಕ್ಕಿದೆ. ಈ ಮಾರ್ಗದಲ್ಲಿ ಎರಡು ಕಾರಿಡಾರ್‌ಗಳು ನಿರ್ಮಾಣವಾಗಲಿದ್ದು, ಒಟ್ಟು ಎಂಟು ಹಂತಗಳಲ್ಲಿ ಟೆಂಡರ್ ಕರೆಯಲು ತಿರ್ಮಾನಿಸಲಾಗಿದೆ. ಜನವರಿ 13ರಂದು 18,581 ಕಿ.ಮೀ ಉದ್ದದ ಮೂರು ಪ್ಯಾಕೇಜ್‌ಗಳಲ್ಲಿ ಮೊದಲ ಇ ಟೆಂಡರ್ ಆಹ್ವಾನಿಸಿದೆ.
18.581 ಕಿ.ಮೀ. ಉದ್ದದ ಮೂರು ಪ್ಯಾಕೇಜ್‌ಗಳಿಗೆ 4,187.41 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಏಳು ಇಂಟರ್‌ಚೇಂಜ್ ನಿಲ್ದಾಣಗಳು ಮೂರನೇ ಹಂತದ ಯೋಜನೆಯಡಿ ಬರುತ್ತವೆ. ಜೂನ್ ಒಳಗೆ ಟೆಂಡರ್ ಮುಗಿದು, ಅಲ್ಲಿಂದ ಯೋಜನೆ ಆರಂಭವಾದರೆ 2031 ರೊಳಗೆ ಪೂರ್ಣಗೊಳಿಸುವ ಗಡುವು ಸಹ ಬಿಡ್‌ದಾರರಿಗೆ ನೀಡಲಾಗಿದೆ. ಈ ಕಾಮಗಾರಿ ಮುಗಿಯುವ ಹೊತ್ತಿಗೆ ಬೆಂಗಳೂರು ಮೆಟ್ರೋ ಜಾಲವು ಬರೋಬ್ಬರಿ 222 ಕಿ.ಮೀ.ಗೆ ವಿಸ್ತರಣೆ ಆಗಿರಲಿದೆ.

ಈ ಎರಡು ಪ್ಯಾಕೇಜ್ ಟೆಂಡರ್‌ನಲ್ಲಿ ಮೆಟ್ರೋ ವಯಾಡಕ್ಟ್‌ಗಳು, ರೈಲು-ಕಮ್-ರೋಡ್ ಮೇಲ್ಸೇತುವೆ, ನಿಲ್ದಾಣಗಳ ನಿರ್ಮಾಣ ಸೇರಿವೆ. ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಬಿಡ್ ಸಲ್ಲಿಸಲು ಫೆಬ್ರವರಿ 25 ಕೊನೆ ದಿನವಾಗಿದೆ. ಬಿಡ್ ಪರಿಶೀಲನೆ ಅಂತಿಮಗೊಂಡ ಬಳಿಕ ಜೂನ್‌ನಲ್ಲಿ ಕೆಲಸ ಆರಂಭಿಸಲು ಅಧಿಕಾರಿಗಳು ಪ್ಲಾನ್ ಮಾಡಿಕೊಂಡಿದ್ದಾರೆ. ಈ ನಮ್ಮ ಮೆಟ್ರೋ ಮೂರನೇ ಹಂತದಲ್ಲಿ ಬರುವ ಎರಡು ಪ್ರಮುಖ ಕಾರಿಡಾರ್‌ಗಳು ಡಬಲ್ ಡೆಕ್ಕರ್ ಮೇಲ್ಸೇತುವೆ ಹೊಂದಿರಲಿವೆ. ಇದು ನಗರದ ದಟ್ಟಣೆ ನಿಯಂತ್ರಣಕ್ಕೆ ಸಹಕಾರಿ ಆಗಲಿದೆ. ಈ ಮೆಟ್ರೋ ಯೋಜನೆಯಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆ ಸೇರ್ಪಡೆಯಿಂದಲೇ ಯೋಜನೆ ವಿಳಂಬವಾಗಿತ್ತು.
ಮೆಟ್ರೋ 3ನೇ ಹಂತ ಯೋಜನೆ, ಡಬಲ್ ಡೆಕ್ಕರ್ ಮೇಲ್ಸೇತುವೆ
ಮೆಟ್ರೋ ಮೂರನೇ ಹಂತದಲ್ಲಿ ಜೆಪಿ ನಗರ 4 ನೇ ಹಂತದಿಂದ ಕೆಂಪಾಪುರಕ್ಕೆ ಹೊರ ವರ್ತುಲ ರಸ್ತೆ (ORR) ಉದ್ದಕ್ಕೂ 32.3 ಕಿಮೀ ಹೊಸ ಮಾರ್ಗ ನಿರ್ಮಾಣವಾಗಲಿದೆ. ಎರಡನೇ ಕಾರಿಡಾರ್ ಮಾಗಡಿ ರಸ್ತೆಯ ಹೊಸಹಳ್ಳಿ ಮೆಟ್ರೋ ನಿಲ್ದಾಣದಿಂದ ಕಡಬಗೆರೆ ವರೆಗೆ 12.15 ಕಿಮೀ ಕಾರಿಡಾರ್ ನಿರ್ಮಾಣವಾಗಲಿದೆ.
ಮೊದಲ ಕಾರಿಡಾರ್ ನಲ್ಲಿ ಡಾಲ್ಮಿಯಾ ವೃತ್ತದಿಂದ ಹೆಬ್ಬಾಳವರೆಗೆ 28.486 ಕಿಮೀ ಡಬಲ್ ಡೆಕ್ಕರ್ ನಿರ್ಮಾಣವಾಗಲಿದೆ. ಇದು ನಗರದ ಅತೀ ಉದ್ದದ ಮೇಲ್ಸೇತುವೆ ಆಗಲಿದೆ. ಇನ್ನೂ ಎರಡನೇ ಕಾರಿಡಾರ್ ನಲ್ಲಿ ಕೆಎಚ್‌ಬಿ ಕಾಲೋನಿಯಿಂದ ಕಡಬಗೆರೆಗೆ ಒಟ್ಟು 8.635 ಕಿಮೀ ಡಬಲ್ ಡೆಕ್ಕರ್ ಫ್ಲೈಓವರ್ ಬರಲಿದೆ. ಈ ಎಲ್ಲ ಯೋಜನೆಗಾಗಿ ಬಿಎಂಆರ್‌ಸಿಎಲ್ ಎಂಟು ಟೆಂಡರ್ ಆಹ್ವಾನಿಸಲಿದೆ. ಯೋಜನೆಗಾಗಿ ಜಪಾನ್‌ನ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (JICA) ಜೊತೆ ಸಾಲ ಪಡೆಯಲಿದೆ. ಬಳಿಕವೇ ಮುಂದಿನ ಮಾರ್ಚ್ ಹೊತ್ತಿಗೆ ಟೆಂಡರ್ ನೀಡಲಾಗುತ್ತದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
7 ಇಂಟರ್‌ಚೇಂಜ್ ನಿಲ್ದಾಣ
ಮೂರನೇ ಹಂತದ ಮೆಟ್ರೋ ಯೋಜನೆಯಲ್ಲಿ ಜೆಪಿ ನಗರ 4 ನೇ ಹಂತ (ಗುಲಾಬಿ ಮಾರ್ಗ), ಜೆಪಿ ನಗರ (ಹಸಿರು ಮಾರ್ಗ), ಮೈಸೂರು ರಸ್ತೆ (ನೇರಳೆ ಮಾರ್ಗ), ಸುಮನಹಳ್ಳಿ ಕ್ರಾಸ್ (ಸಿ 1 ಮತ್ತು ಸಿ 2), ಗೋರಗುಂಟೆಪಾಳ್ಯ (ಹಸಿರು ಮಾರ್ಗ), ಕೆಂಪಾಪುರ (ನೀಲಿ ಮಾರ್ಗ) ಮತ್ತು ಹೊಸಹಳ್ಳಿ (ನೇರಳೆ ಮಾರ್ಗದಲ್ಲಿ) ಒಟ್ಟು ಏಳು ಇಂಟರ್‌ಚೇಂಜ್ ನಿಲ್ದಾಣಗಳು ಸ್ಥಾಪನೆ ಆಗಲಿವೆ.












Click it and Unblock the Notifications