Namma Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶೀಘ್ರವೇ 5ಜಿ ನೆಟ್‌ವರ್ಕ್ ಸೌಲಭ್ಯ
ಬೆಂಗಳೂರು, ಡಿಸೆಂಬರ್ 01: ಉದ್ಯಾನ ನಗರಿ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಿಹಿಸುದ್ದಿ ನೀಡಲಿದೆ. ಮೆಟ್ರೋದಲ್ಲಿ ಸಂಚಾರ ನಡೆಸುವಾಗ 5ಜಿ ಮೊಬೈಲ್ ನೆಟ್‌ವರ್ಕ್ ಸಿಗುವಂತೆ ಮಾಡಲು ಕ್ರಮಗಳನ್ನು ಕೈಗೊಳ್ಳಲಿದೆ. ಇದಕ್ಕಾಗಿ ನಮ್ಮ ಮೆಟ್ರೋ ಕಂಬಗಳಲ್ಲಿ 5ಜಿ ನೆಟ್‌ವರ್ಕ್ ಸೆಲ್‌ಗಳನ್ನು ಹಾಕಲು ಟೆಂಡರ್ ಕರೆದಿದೆ. ಪ್ರಸ್ತುತ ಸುಮಾರು 6 ಲಕ್ಷಕ್ಕೂ ಅಧಿಕ ಜನರು ಪ್ರತಿದಿನ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮತಿ (ಬಿಎಂಆರ್‌ಸಿಎಲ್) ಇದಕ್ಕಾಗಿ ಟೆಂಡರ್ ಕರೆದಿದೆ. ನಮ್ಮ ಮೆಟ್ರೋ ಹಂತ-1 ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ಮಾರ್ಗದಲ್ಲಿ, ರೀಚ್-5, ರೀಚ್-6 ಮಾರ್ಗದ ಉದ್ದಕ್ಕೂ ಎಲಿವೇಟೆಡ್ ಸೆಕ್ಷನ್‌ನಲ್ಲಿ 5ಜಿ ಚಿಕ್ಕಸೆಲ್‌ಗಳನ್ನು ಅಳವಡಿಕೆ ಮಾಡಲು ಟೆಂಡರ್ ಕರೆದಿದೆ.

ಏಕ ಹಂತದಲ್ಲಿ ದ್ವಿ-ಲಕೋಟೆ ಪದ್ಧತಿಯಡಿಯಲ್ಲಿ ಸೂಕ್ತ, ಅರ್ಹ, ಅನುಭವುಳ್ಳವರು, ಪ್ರತಿಷ್ಠಿತರು ಇ-ಟೆಂಡರ್ ಸಲ್ಲಿಸಬಹುದು ಎಂದು ಹೇಳಿದೆ. ಬಿಎಂಆರ್‌ಸಿಎಲ್ ವ್ಯಾಪ್ತಿಯಲ್ಲಿ 5ಜಿ ಮೊಬೈಲ್ ಕವರೇಜ್ ಒದಗಿಸಲು ಟೆಲಿಕಾಂ ಕಂಪನಿಗಳು ಉಪಕರಣ ನಿಯೋಜಿಸಲು, ಕಾರ್ಯಾಚರಣೆ ನಡೆಸಲು ಮೆಟ್ರೋ ಪಿಲ್ಲರ್‌ಗಳ ನಡುವಿನ ಸ್ಥಳವನ್ನು ನೀಡಲಾಗುತ್ತದೆ.
ಮೆಟ್ರೋದಲ್ಲಿ 5ಜಿ ನೆಟ್‌ವರ್ಕ್: ಆಸಕ್ತ ಕಂಪನಿಗಳು ಇ-ಟೆಂಡರ್ ಸಲ್ಲಿಕೆ ಮಾಡಲು ಕೊನೆಯ ದಿನಾಂಕ 29/1/2025, ಮಧ್ಯಾಹ್ನ 3 ಗಂಟೆ. 30/1/2025ರ ಮಧ್ಯಾಹ್ನ 3 ಗಂಟೆಗೆ ಟೆಂಡರ್ ತೆರೆಯಲಾಗುತ್ತದೆ. ಆಸಕ್ತರು ವಿವರಗಳಿಗೆ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ತಿಳಿಸಲಾಗಿದೆ.
2022ರಲ್ಲಿ ಬಿಎಂಆರ್‌ಸಿಎಲ್ ದೇಶದಲ್ಲಿ ಮೆಟ್ರೋ ರೈಲಿನಲ್ಲಿ 5ಜಿ ನೆಟ್‌ವರ್ಕ್ ಒದಗಿಸಲು ಟ್ರಾಯ್ ಅನುಮತಿ ಪಡೆದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆಯಿತು. ಎಂಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ರಿಲಾಯನ್ಸ್ ಜಿಯೋ ನೆಟ್‌ವರ್ಕ್ ಒದಗಿಸಲು ಪ್ರಾಯೋಗಿಕವಾಗಿ ಉಪಕರಣ ಹಾಕಲಾಯಿತು.
200 ಮೀಟರ್ ವ್ಯಾಪ್ತಿಯಲ್ಲಿ 1.45 ಜಿಬಿಪಿಎಸ್ ಡೌನ್‌ಲೋಡ್, 65 ಎಂಬಿಪಿಎಸ್ ಅಪ್‌ಲೋಡ್ ವೇಗದಲ್ಲಿ ಸೇವೆ ಆರಂಭಿಸಲಾಯಿತು. ಇದು 4ಜಿಗಿಂತ ಶೇ 50ರಷ್ಟು ಅಭಿವೃದ್ಧಿ ಹೊಂದಿದ್ದ ನೆಟ್‌ವರ್ಕ್ ಆಗಿತ್ತು. ಈಗ ಮೆಟ್ರೋ ಪಿಲ್ಲರ್‌ಗಳನ್ನು ನೀಡುವ ಮೂಲಕ ಕಂಪನಿಗಳು ನಮ್ಮ ಮೆಟ್ರೋ ಜಾಲದಲ್ಲಿ ಪೂರ್ಣವಾಗಿ 5ಜಿ ನೆಟ್‌ವರ್ಕ್ ಸೌಲಭ್ಯ ಸಿಗುವಂತೆ ಉಪಕರಣ ಆಳವಡಿಕೆಗೆ ಅವಕಾಶ ನೀಡಲಾಗುತ್ತಿದೆ.
ಕಂಪನಿಗಳು ಲಭ್ಯವಿರುವ ಮೆಟ್ರೋ ಪಿಲ್ಲರ್, 5ಜಿ ಸೇವೆ ವಿಸ್ತರಣೆ ಮಾಡಲು ಅನುಕೂಲವಾಗುವ ಮಾದರಿಯಲ್ಲಿ ಸಮೀಕ್ಷೆ ನಡೆಸಲು ಸಹ ಅವಕಾಶ ನೀಡಲಾಗಿದೆ. ಅದರಲ್ಲೂ ಪೀಕ್ ಅವರ್‌ನಲ್ಲಿ ಮತ್ತು ಹೆಚ್ಚು ಪ್ರಯಾಣಿಕ ದಟ್ಟಣೆ ಸಮಯದಲ್ಲಿಯೂ ನೆಟ್‌ವರ್ಕ್ ಸ್ಪೀಡ್ ಕಡಿಮೆ ಆಗದಂತೆ ಉಪಕರಣ ಅಳವಡಿಕೆ ಮಾಡಲು ಸಮೀಕ್ಷೆಗಳನ್ನು ಮಾಡಬಹುದು.
5ಜಿ ನೆಟ್‌ವರ್ಕ್ ಸೌಲಭ್ಯದಿಂದ ನಮ್ಮ ಮೆಟ್ರೋ ಪ್ರಯಾಣಿಕರು ಮಾರ್ಗದ ಉದ್ದಕ್ಕೂ ಯಾವುದೇ ಅಡೆತಡೆ ಇಲ್ಲದ, ವೇಗವಾದ ಇಂಟರ್‌ನೆಟ್ ಸಂಪರ್ಕವನ್ನು ಪಡೆಯಬಹುದು. ಇದು ಪ್ರಯಾಣಿಕರು ಮೀಟಿಂಗ್‌ಗಳಲ್ಲಿ ಪಾಲ್ಗೊಳ್ಳಲು, ಮೆಟ್ರೋ ರೈಲಿನಲ್ಲಿಯೂ ಕೆಲಸ ನಿರ್ವಹಣೆ ಮಾಡಲು ಅನುಕೂಲ ಮಾಡಿಕೊಡಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಸದ್ಯ ನಮ್ಮ ಮೆಟ್ರೋ ರೈಲು ಸುರಂಗ ಮಾರ್ಗದಲ್ಲಿ ಸಂಚಾರ ನಡೆಸುವಾಗ ಮೊಬೈಲ್ ನೆಟ್‌ವರ್ಕ್ ಸಿಗುವುದಿಲ್ಲ ಅಥವ ವೇಗ ಕಡಿಮೆ ಆಗುತ್ತಿದೆ. ಆದರೆ 5ಜಿ ನೆಟ್‌ವರ್ಕ್ ಸ್ಥಾಪನೆಯಾದರೆ ಈ ಸಮಸ್ಯೆಗಳು ನಿವಾರಣೆಯಾಗಲಿದ್ದು, ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗಲಿದೆ.












Click it and Unblock the Notifications