Namma Metro: ವೈಟ್‌ಫಿಲ್ಡ್ ಪ್ರಯಾಣಿಕರಿಗೆ ಸಿಹಿ ಸುದ್ದಿ, ಸಂಪರ್ಕ ಕೊಂಡಿ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಶೀಘ್ರ
ಬೆಂಗಳೂರು, ಜೂನ್ 11: ಐಟಿ ಕಾರಿಡಾರ್ ವೈಟ್‌ಫಿಲ್ಡ್‌ಗೆ ಸಂಪರ್ಕ ಕಲ್ಪಿಸುವ ಬೆಂಗಳೂರು ನಮ್ಮ ಮೆಟ್ರೋದ ಬಹುನಿರೀಕ್ಷೆ ಬೈಯಪ್ಪನಹಳ್ಳಿಯಿಂದ-ಕೆಆರ್.ಪುರ ವರೆಗಿನ ಲೈನ್ ನಲ್ಲಿ ಆದಷ್ಟು ಶೀಘ್ರವೇ ಅಧಿಕಾರಿಗಳು ಪ್ರಾಯೋಗಿಕ ಸಂಚಾರ ನಡೆಸಲಿದ್ದಾರೆ. ಬಳಿಕ ಅಧಿಕೃತವಾಗಿ ತಪ್ಪಿಹೋಗಿದ್ದ ಈ ಮಾರ್ಗದಲ್ಲಿ ಸಂಚಾರ ಆರಂಭವಾಗಲಿದ್ದು, ಸಾವಿರಾರು ಜನರಿಗೆ ಅನುಕೂಲವಾಗಲಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಮೂಲಗಳ ಪ್ರಕಾರ, ಮುಂದಿನ ತಿಂಗಳ ಜುಲೈ ಮೊದಲ ವಾರ -ಕೆಆರ್.ಪುರ- ಬೈಯಪ್ಪನಹಳ್ಳಿ ವರೆಗಿನ 2.5 ಕಿಲೋ ಮೀಟರ್ ಉದ್ದದ ಮಾರ್ಗದಲ್ಲಿ ಟ್ರೈಯಲ್ ರನ್ ನಡೆಯಲಿದೆ. ಬಳಿಕ ಉನ್ನತ ಅಧಿಕಾರಿಗಳು ಪ್ರಯಾಣಿಕರ ಸಂಚಾರ ಸುರಕ್ಷತೆ ಪರಿಶೀಲಿಸಲಿದ್ದಾರೆ.

ವೈಟ್‌ಫಿಲ್ಡ್ ಸಂಪರ್ಕ ಕೊಂಡಿಯಾಗಿರುವ ಈ ಮಾರ್ಗದಲ್ಲಿ ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಉಳಿದಿಕೊಂಡಿವೆ. ಮುಂದಿನ 2-3 ವಾರಗಳಲ್ಲಿ ಅವೆಲ್ಲವೂ ಪೂರ್ಣಗೊಳ್ಳಲಿವೆ. ಅದಾದ ಬಳಿಕವೇ ಈ 'ನೇರಳೆ ಮಾರ್ಗ'ದಲ್ಲಿ ಬೈಯಪ್ಪನಹಳ್ಳಿಗೆ ಬದಲಾಗಿ ಕೆಆರ್ ಪುರಂವರೆಗೂ ಅಲ್ಲಿಂದ ವೈಟ್‌ಫಿಲ್ಡ್ ವರೆಗೂ ಓಡಾಡಬಹುದು. ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿಯವರು ವೈಟ್‌ಫಿಲ್ಡ್-ಕೆಆರ್ ಪುರಂ ಮಾರ್ಗ ಉದ್ಘಾಟಿಸಿದ್ದರು.
ಸಂಚಾರ ಸಮಸ್ಯೆಗೆ ಮುಕ್ತಿ
ವೈಟ್‌ಫಿಲ್ಡ್‌ಗೆ ಹೋಗುವ ಕೆಂಗೇರಿ ಮಾರ್ಗ, ನಾಗಸಂದ್ರ ಮಾರ್ಗದ ಪ್ರಯಾಣಿಕರು ಬೈಯ್ಯಪನಹಳ್ಳಿವರೆಗೆ ಬಂದು, ಅಲ್ಲಿಂದ ಫಿಡ್ ಬಸ್ ಮೂಲಕ ಕೆಆರ್ ಪುರವರೆಗೆ ತೆರಳಿ ಮತ್ತೆ ಅಲ್ಲಿಂದ ಮೆಟ್ರೋ ಹಿಡಿದು ವೈಟ್‌ಫಿಲ್ಡ್‌ಗೆ ತೆರಳಬೇಕಿತ್ತು. ಆ ಸಮಸ್ಯೆಗೆ ಮುಂದಿನ ತಿಂಗಳು ಮುಕ್ತಿ ಸಿಗಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ವೈಟ್‌ಫಿಲ್ಡ್-ಕೆಆರ್ ಪುರಂ ಮೆಟ್ರೋ ಲೈನ್ ಉದ್ಘಾಟನೆ ಬಳಿಕ ಮೂರು ತಿಂಗಳಲ್ಲಿ ಸಂಪರ್ಕ ಕೊಂಡಿಯ ಬೈಯ್ಯಪನಹಳ್ಳಿಯ -ಕೆ.ಆರ್‌ಪುರಂ ಮಾರ್ಗದ ಟ್ರ್ಯಾಕ್ ಅಳವಡಿಕೆ, ವಿದ್ಯುದೀಕರಣ, ತೆರೆದ ವೆಬ್‌ಗರ್ಡರ್ ಅಳವಡಿಕೆ ಪೂರ್ಣಗೊಳ್ಳಬೇಕಿತ್ತು. ಆದರೆ ಬೆನ್ನಿಗಾನಹಳ್ಳಿಯ ವೆಬ್‌ಗರ್ಡರ್ ಅಳವಡಿಕೆಯಲ್ಲಿನ ವಿಳಂಬ ಇನ್ನಿತರ ತಾಂತ್ರಿಕ ಕಾರಣಗಳಿಂದ ಇಲ್ಲಿನ ಕೆಲಸಗಳು ತಡವಾಗಿವೆ. ಇನ್ನೇನು ಕೆಲವೇ ದಿನಗಳಲ್ಲಿ ಬಾಕಿ ಎಲ್ಲ ಸಣ್ಣಪುಟ್ಟ ಕೆಲಸಗಳು ಮುಗಿಯಲಿವೆ.

ಜುಲೈ ಮಧ್ಯಭಾಗಕ್ಕೆ ಸಂಚಾರ ಆರಂಭ?
ಜುಲೈ ಎರಡನೇ ವಾರದೊಳಗೆ ಪ್ರಾಯೋಗಿಕ ಸಂಚಾರ, ಸಿಗ್ನಲಿಂಗ್ ಪರೀಕ್ಷೆ, ವಾಕ್ ವೇ, ಟ್ರಾಕ್ ವರ್ಕ ಸೇರಿದಂತೆ ಎಲ್ಲವು ಅಂತಿಮ ತಪಾಸಣೆ ಮುಗಿದ ಉನ್ನತ ಅಧಿಕಾರಿಗಳು ಮೆಟ್ರೋ ರೈಲಿನ ಅಧಿಕೃತ ಚಾಲನೆ ಗ್ರಿನ್ ಸಿಗ್ನಲ್ ನೀಡಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಎಲ್ಲವು ಅಂದುಕೊಂಡಂತೆ ಆದರೆ ವೈಟ್‌ಫಿಲ್ಡ್‌ವರೆಗೆ ಮೆಟ್ರೋ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಇದರಿಂದ ಸದ್ಯ 25-30 ಸಾವಿರ ಪ್ರಯಾಣಿಕರು ಸಂಚರಿಸುತ್ತಾರೆ. 2.5 ಕಿ.ಮೀ. ಲೈನ್ ಸಾರ್ವಜನಿಕ ಸೇವೆಗೆ ಮುಕ್ತವಾದ ನಂತರ ಸುಮಾರು ಒಂದು ಲಕ್ಷ ಮಂದಿ ನಿತ್ಯವು ಇಲ್ಲಿ ಸಂಚಾರ ನಡೆಸಲಿದ್ದಾರೆ ಎನ್ನಲಾಗಿದೆ.












Click it and Unblock the Notifications