Namma Metro: ಅ. 3 ರಂದು ನಾಗಸಂದ್ರ-ಪೀಣ್ಯ ಇಂಡಸ್ಟ್ರಿ ನಡುವೆ ಮೆಟ್ರೋ ಸಂಚಾರ ಸ್ಥಗಿತ
ಅಕ್ಟೋಬರ್ 3 ರಂದು ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ತಿಳಿಸಿದೆ. ನಾಗಸಂದ್ರ ಮತ್ತು ಮಾದವರ ನಡುವಿನ ಮೆಟ್ರೋ ಮಾರ್ಗದಲ್ಲಿ ಸುರಕ್ಷತಾ ತಪಾಸಣೆ ನಡೆಯುವ ಕಾರಣ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ನಾಗಸಂದ್ರ ಮತ್ತು ಮಾದಾವರ ನಡುವಿನ ನಮ್ಮ ಮೆಟ್ರೊ ಹಸಿರು ವಿಸ್ತೃತ ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ದಕ್ಷಿಣ ವೃತ್ತ) ಸುರಕ್ಷತಾ ತಪಾಸಣೆ ನಡೆಸಲಿದ್ದಾರೆ ಎಂದು ಬಿಎಂಆರ್‌ಸಿಎಲ್ ಹೇಳಿಕೆಯಲ್ಲಿ ತಿಳಿಸಿದೆ. ಅಕ್ಟೋಬರ್ 3 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ಅಕ್ಟೋಬರ್ 3 ರಂದು ಗುರುವಾರ ನಾಗಸಂದ್ರ ಮತ್ತು ಪೀಣ್ಯ ಇಂಡಸ್ಟ್ರಿ ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ರೈಲು ಸೇವೆ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ಹಸಿರು ಮಾರ್ಗದ ಪೀಣ್ಯ ಇಂಡಸ್ಟ್ರಿ ಮತ್ತು ಸಿಲ್ಕ್ ಇನ್ಸ್ಟಿಟ್ಯೂಟ್ ನಿಲ್ದಾಣಗಳ ನಡುವೆ ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಬೆಳಿಗ್ಗೆ 9 ಗಂಟೆಗೆ ಸಿಲ್ಕ್ ಇನ್ಸ್ಟಿಟ್ಯೂಟ್ ನಿಲ್ದಾಣದಿಂದ ಹೊರಡುವ ರೈಲು ನಾಗಸಂದ್ರಕ್ಕೆ ಬರುವ ಕೊನೆಯ ರೈಲು ಆಗಿರುತ್ತದೆ, ಆ ನಂತರ ಹೊರಡುವ ರೈಲುಗಳ ಪೀಣ್ಯ ಇಂಡಸ್ಟ್ರಿಯವರೆಗೆ ಮಾತ್ರ ಸಂಚರಿಸಲಿವೆ.
ಈ ಸಂದರ್ಭದಲ್ಲಿ ನಮ್ಮ ಮೆಟ್ರೋ ನೇರಳೆ ಮಾರ್ಗದ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಎಂದಿನಂತೆ ನೇರಳೆ ಮಾರ್ಗದಲ್ಲಿ ರೈಲುಗಳು ಸಂಚರಿಸಲಿವೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.
Curtailment of Metro Rail services on Green Line between Nagasandra & Peenya Industry - on 3.10.2024 due to CMRS Inspection between Nagasandra & Madavara on 3-4 oct 2024. Public & Metro Commuters may kindly note the change. pic.twitter.com/c6klCDnoe7
— ನಮ್ಮ ಮೆಟ್ರೋ (@OfficialBMRCL) October 1, 2024
7 ವರ್ಷಗಳ ಕಾಮಗಾರಿ
ನಾಗಸಂದ್ರ ಮತ್ತು ಮಾದವಾರ ನಡುವಿನ ನಮ್ಮ ಮೆಟ್ರೋ ಹಸಿರು ಮಾರ್ಗದ 3.7 ಕಿ.ಮೀ ಉದ್ದದ ವಿಸ್ತೃತ ಮಾರ್ಗವನ್ನು ಸುದೀರ್ಘ 7 ವರ್ಷಗಳ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅಕ್ಟೋಬರ್ 3 ಮತ್ತು 4 ರಂದು ಮೆಟ್ರೊ ರೈಲು ಸುರಕ್ಷತಾ ಆಯುಕ್ತರು (CMRS) ಸುರಕ್ಷತಾ ತಪಾಸಣೆ ನಡೆಸಲಿದ್ದಾರೆ ಎಂದು ಬಿಎಂಆರ್ ಸಿಎಲ್ ಈ ಮೊದಲು ಮಾಹಿತಿ ನೀಡಿತ್ತು. ಈಗಾಗಲೇ ನಾಗಸಂದ್ರ ಮಾದಾವರ ನಡುವೆ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ಸುರಕ್ಷತೆ ತಪಾಸಣೆ ಬಳಿಕ ವಾಣಿಜ್ಯ ಕಾರ್ಯಾಚರಣೆಗೆ ಸುರಕ್ಷತಾ ಆಯುಕ್ತರು ಗ್ರೀನ್ ಸಿಗ್ನಲ್ ಕೊಟ್ಟರೆ ಶೀಘ್ರದಲ್ಲೇ ರೈಲು ಸಂಚಾರ ಆರಂಭವಾಗಲಿದೆ.
ವಿಸ್ತೃತ ಹಸಿರು ಮಾರ್ಗದ ಕಾಮಗಾರಿಯನ್ನು 2017ರಲ್ಲಿ ಆರಂಭಿಸಿದರೂ ಸಾಕಷ್ಟು ಮಂದಗತಿಯಲ್ಲಿ ಕಾಮಗಾರಿ ನಡೆಯಿತು. ನೈಸ್ ರಸ್ತೆಬಳಿ ಭೂಸ್ವಾಧೀನ, ಕೊರೊನಾ ಸಾಂಕ್ರಾಮಿಕ, ಭೀಸ್ವಾಧೀನ ಪ್ರಕ್ರಿಯೆ ವಿಳಂಬ ಕಾಮಗಾರಿ ತಡವಾಗಲು ಮುಖ್ಯ ಕಾರಣವಾಗಿದೆ. ಈಗ ನಾಗಸಂದ್ರದಿಂದ ಮಾದಾವರದವರೆಗೆ 3.7 ಕಿ.ಮೀ. ಮಾರ್ಗದಲ್ಲಿ ಎರಡು ನಿಲ್ದಾಣಗಳು ಬರಲಿವೆ.












Click it and Unblock the Notifications