Namma Metro Driverless Rail: 'ಹಳದಿ ಮಾರ್ಗ'ದಲ್ಲಿ ಚಾಲಕರಿಂದಲೇ ಓಡಲಿವೆ ಮೆಟ್ರೋ ರೈಲು: ಏಕೆ? ಅಪ್ಡೇಟ್ ಮಾಹಿತಿ
ಬೆಂಗಳೂರು, ಫೆಬ್ರವರಿ 24: ಬೆಂಗಳೂರಿಗರು ಬಹು ನಿರೀಕ್ಷೆಯಿಂದ ಕಾಯುತ್ತಿರುವ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ (Namma Metro Yellow Line) ಓಡಲು ಚೀನಾದಿಂದ ಚಾಲಕ ರಹಿತ (ಡ್ರೈವರ್‌ಲೆಸ್) ರೈಲು ಬೆಂಗಳೂರಿಗೆ ಆಗಮಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಆದರೆ ಇವುಗಳ ಚಾಲನೆ ವಿಚಾರದಲ್ಲಿ ಸದ್ಯಕ್ಕೆ ಕೆಲವು ಬದಲಾವಣೆಗಳು ಆಗಿವೆ ಎಂದು ಮೂಲಗಳು ತಿಳಿಸಿವೆ.
ಹೆಸರೇ ಹೇಳುವಂತೆ ಚೀನಾದಿಂದ ಬೆಂಗಳೂರಿಗೆ ಆಗಮಿಸಿದ ಪ್ರೋಟೊಟೈಮ್ ಮೆಟ್ರೋ ರೈಲುಗಳ ಆರು ಬೋಗಿಗಳು ಚಾಲಕ ರಹಿತವಾಗಿವೆ. ಆದರೂ ಸಹಿತ ಈ ಡ್ರವೈರ್‌ಲೆಸ್ ರೈಲುಗಳನ್ನು BMRCL ಚಾಲಕರೇ ಓಡಿಸಲಿದ್ದಾರೆ. ಸದ್ಯಕ್ಕೆ ಸಿಗ್ನಲ್ ಆಧಾರಿತವಾಗಿ ಇವುಗಳನ್ನು ಓಡಿಸುತ್ತಿಲ್ಲ ಎನ್ನಲಾಗಿದೆ.

ನಮ್ಮ ಮೆಟ್ರೋ ಹಳದಿ ಮಾರ್ಗವು ಬೆಂಗಳೂರಿನ ಐಟಿ ಕೇಂದ್ರ, ಐಟಿ ಹೃದಯ ಎನ್ನಲಾಗುವ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಪ್ರಮುಖ ಜಂಕ್ಷನ್‌ಗಳಿಗೆ ಸಂಪರ್ಕ ಕಲ್ಪಿಸುವ ಒಟ್ಟು 19 ಕಿಲೋ ಮೀಟರ್ ಉದ್ದದ ಮಾರ್ಗವಾಗಿದೆ.
ಅಪ್ಡೇಟ್ ಮಾಹಿತಿ ಏನಿದೆ?
ಲಭ್ಯ ಮಾಹಿತಿಯ ಪ್ರಕಾರ, ಈ ಚಾಲಕ ರಹಿತ ರೈಲುಗಳಲ್ಲಿ ಚಾಲಕರು ಇರುತ್ತಾರೆ. ಅವರೇ ಈ ಮೆಟ್ರೋ ರೈಲನ್ನು ಓಡಿಸುತ್ತಾರೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಈ ಚಾಲಕರಹಿತ ರೈಲುಗಳನ್ನು ಚಾಲಕರೊಂದಿಗೆ ಓಡಿಸಲು ಚಿಂತನೆ ನಡೆಸಿದೆ.

ಸಿಗ್ನಲ್ ಬೇಸ್ ಸಂಚಾರ ಸದ್ಯಕ್ಕೆ ತೊಡಕು
ಚಾಲಕ ರಹಿತ ರೈಲುಗಳನ್ನು ಸಿಗ್ನಲ್ ರಹಿತ ಓಡಿಸಲು ಅನುಮತಿ ಪಡೆಯುವುದು ತೊಡಕಿನ ಪ್ರಕ್ರಿಯೆ. ನಾವು ಚಾಲಕರೊಂದಿಗೆ ಪ್ರಾರಂಭಿಸುತ್ತೇವೆ ಮತ್ತು ಕ್ರಮೇಣ ಸಿಗ್ನಲ್ ಆಧಾರಿತ ಕಾರ್ಯಾಚರಣೆಗಳಿಗೆ ಬದಲಾಯಿಸುತ್ತೇವೆ, ಎಂದು ಉನ್ನತ ಅಧಿಕಾರಿಯೊಬ್ಬರ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಮಾಹಿತಿ ನೀಡಿದ್ದಾರೆ.
ವಾರದ ಹಿಂದೆ ಆಗಮಿಸಿದ ಸಿಲಿಕಾನ್ ಸಿಟಿಯ ಚಾಲಕ ರಹಿತ ನಮ್ಮ ಮೆಟ್ರೋ ರೈಲುಗಳು ದೇಶಾದ್ಯಂತ ಸಂಚಲನ ಮೂಡಿಸಿದ್ದು, ನಗರದ ಜನರು ಈ ಚಾಲಕ ರಹಿತ ರೈಲುಗಳಲ್ಲಿ ಸಂತೋಷದ ಸವಾರಿ ಮಾಡಲು ಸಿದ್ಧರಾಗಿದ್ದಾರೆ. ಈಗಾಗಲೇ ರೈಲುಗಳನ್ನು ಹಳಿಗೆ ಇಳಿಸಿ ಚಾಲನೆಯನ್ನು ಪರಿಶೀಲಿಸಲಾಗುತ್ತಿದೆ. ಈ ಕುರಿತ ವಿಡಿಯೋ, ಫೋಟೊಗಳನ್ನು ನಮ್ಮ ಮೆಟ್ರೋ ತನ್ನ ಸಾಮಾಜಿಕ ಜಾಲತಾಣ X ನಲ್ಲಿ ಹಂಚಿಕೊಂಡಿದೆ.
ಹಳಿಗೆ ಇಳಿದ ರೈಲು: ಸಂಚಾರ ಪರಿಶೀಲನೆ
ಇದರ ಎಲ್ಲ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕ ಚಾಲನೆ ಮಾತ್ರ ಬಾಕಿ ಇದೆ. ಈ ಮಾರ್ಗಕ್ಕೆಂದೆ ಚೀನಾ ಕಂಪನಿಯು ಆರು ಬೋಗಿಗಳ ಒಂದು ರೈಲ್ ಸೆಟ್ ಅನ್ನು ಫೆಬ್ರವರಿ 14 ರಂದು ಬೆಳಗ್ಗೆ 3.30ಕ್ಕೆ ನಗರ ಹೆಬ್ಬಗೋಡಿ ಡಿಪೋ ತಲುಪಿಸಿದೆ.
ಈ ಮೆಟ್ರೋ ಬೋಗಿಗಳ ಕಾರ್ಯಾಚರಣೆ ಆರಂಭವಾಗಿದೆ. ಮೊದಲು ಬೋಗಿಗಳನ್ನು ಟ್ರೈಲರ್‌ನಿಂದ ಹಳಿಗೆ ಇಳಿಸಿ ಜೋಡಿಸಲಾಗಿದೆ. ಇದೀಗ ಬೋಗಿಗಳ ಚಾಲನೆ ಶುರುವಾಗಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ. ಇವುಗಳ ಪ್ರಾಯೋಗಿಕ ಚಾಲನೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹತ್ತಾರು ಅನುಮತಿ ಪಡೆಯುವುದು ಬಾಕಿ ಇದೆ. ಅದಾದ ಬಳಿಕವೇ ಜುಲೈ ಹೊತ್ತಿಗೆ ಟ್ರಯಲ್ ರನ್ ಮುಗಿಯುತ್ತದೆ. ಬಳಿಕವೇ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications