Video Viral of Namma Metro: ಮೆಟ್ರೋದಲ್ಲಿ ಮೊಳಗಿದ 'ಕನ್ನಡ ಡಿಂಡಿಮ': ಮಿಶ್ರ ಪ್ರತಿಕ್ರಿಯೆ!
ಬೆಂಗಳೂರು, ಅಕ್ಟೋಬರ್ 02: ರಾಜಧಾನಿಯ ನಮ್ಮ ಮೆಟ್ರೋದಲ್ಲಿ ದೈನಂದಿನ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಇನ್ನೇನು ನವೆಂಬರ್ ತಿಂಗಳಪೂರ್ತಿ ಕನ್ನಡದ ಕಂಪು ಪಸರಿಸುವ ಮೊದಲೇ ಮೆಟ್ರೋ ಪ್ರಯಾಣಿಕರು 'ಕನ್ನಡ ಡಿಂಡಿಮ' ಸಂಗೀತ ಆಸ್ವಾದಿಸಿದ್ದಾರೆ. ಕನ್ನಡಿಗರೊಬ್ಬರು ಹಾಡಿರುವ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ತಿಂಗಳ ಮೊದಲೇ ಮೆಟ್ರೋ ರೈಲಿನಲ್ಲಿ ಕನ್ನಡದ ನಾದ ಮೊಳಗಿದೆ.
ಬೆಂಗಳೂರು ನಮ್ಮ ಮಟ್ರೋದಲ್ಲಿ ಗಿಟಾರ್ ಹಾಗೂ ಇತರ ಸಂಗೀತ ಸಲಕರಣೆ ಹಿಡಿದು ಕನ್ನಡದ ಹಾಡು ಹಾಡಲಾಗಿದೆ. ಇದಕ್ಕೆ ಕನ್ನಡಾಭಿಮಾನಿಗಳು ಫಿದಾ ಆಗಿದ್ದಾರೆ. ನೆವೆಂಬರ್ ತಿಂಗಳ ಮೊದಲೇ ವೈರಲ್ ಆಗುತ್ತಿರುವ ಈ ಮೆಟ್ರೋ ಹಾಡನ್ನು ಹೆಚ್ಚು ಹೆಚ್ಚು ಶೇರ್ ಮಾಡಿಕೊಳ್ಳಲಾಗುತ್ತದೆ.

ಶಿವಾನಂದ್ ಗುಂಡನವರ್ ಎಂಬುವವರು ಮೆಟ್ರೋ ರೈಲಿನಲ್ಲಿ ರಾಷ್ಟ್ರಕವಿ ಕುವೆಂಪು ರಚನೆಯ 'ಬಾರಿಸು ಕನ್ನಡ ಡಿಂಡಿಮವ..ಓ ಕರ್ನಾಟಕ ಹೃದಯಶಿವ..' ಹಾಡು ಹಾಡಿದ್ದರ ವಿಡಿಯೋ ಹಂಚಿಕೊಂಡಿದ್ದಾರೆ. ಇದೀಗ ವೈರಲ್ ಆಗುತ್ತಿದೆ. ಎಸ್.ವಿ.ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಹಾಗೂ ಆರ್.ಸುನೀಲ್ ನಿರ್ದೇಶನ ಮಾಡಿ ವಿಡಿಯೋ ಹಾಡು ಬಿಡುಗಡೆ ಮಾಡಿದ್ದರು. ಅದನ್ನು ಗಿಟಾರ್ ಹಿಡಿದು ಬಂದ ಗ್ರೂಪ್ ಮೆಟ್ರೋದಲ್ಲಿ ಹಾಡಿದೆ.
ಹಾಡಿಗೆ ಮನಸೋತ ಕನ್ನಡಿಗರು
ಇದೇ 'ಕನ್ನಡ ಡಿಂಡಿಮ' ಹಾಡನ್ನು ಸಂಗೀತ ವಾದ್ಯಗಳ ಸಮೇತ ಹೇಳಲಾಗಿದೆ. ರೈಲಿನ ಒಳಗಿದ್ದ ಪ್ರಯಾಣಿಕರು ಈ ಹಾಡಿಗೆ ಮನಸೋತಿದ್ದಾರೆ. ಕೆಲ ಹೊತ್ತು ಕಿವಿ ತಂಪು ಮಾಡಿಕೊಂಡಿದ್ದಾರೆ. ಕೆಲಸ, ಇನ್ನಿತರ ಒತ್ತಡ ಧಾವಂತ ಬದುಕಿನಲ್ಲಿ ಕನ್ನಡದ ಹಾಡನ್ನು ಶಾಂತವಾಗಿ ಆಲಿಸಿದ್ದು ಕಂಡು ಬಂತು.
Kannada Vibes in #NammaMetro #Bengaluru pic.twitter.com/2I283DVf4Z
— Shivanand Gundanavar (@shivanand087) September 28, 2024
ಅರ್ಧ ನಿಮಿಷದ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಕಾರಾತ್ಮಕ ಹಾಗೂ ನಕಾರಾತ್ಮಕವಾಗಿ ಕಾಮೆಂಟ್ ಬಂದಿವೆ. ಕೆಲವರು ದೆಹಲಿ ಮೆಟ್ರೋ ಒಳಗಿನ ವರ್ತನೆಗಳು ಬೆಂಗಳೂರು ಮೆಟ್ರೋದಲ್ಲಿ ಮರುಕಳಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಅನೇಕ ಕನ್ನಡ ಶಾಲೆಗಳಿಗೆ ಸರಿಯಾದ ಸೂರಿಲ್ಲ, ಊಟವಿಲ್ಲ. ಅಲ್ಲಿ ಇಂತಹ ಕನ್ನಡದ ಪ್ರೀತಿ ತೋರಿಸಬೇಕು. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ದೆಹಲಿ ಮೆಟ್ರೋನಂತಾಗುವುದು ಬೇಡ ಎಂದಿದ್ದಾರೆ. ಈ ಮೂಲಕ ದೆಹಲಿ ಮೆಟ್ರೋದಲ್ಲಿ ಹಾಡು, ನೃತ್ಯ, ಇನ್ನಿತರ ದಂಡ ಹೇರಿಕೆಗೆ ಕಾರಣವಾದ ಚಟುವಟಿಕೆಗಳನ್ನು ಅವರು ಜ್ಞಾಪಿಸಿದ್ದಾರೆ. ಹೀಗೆ ಒಂದಷ್ಟು ಮಿಶ್ರ ಪ್ರತಿಕ್ರಿಯೆಗಳು ಈ ಹಾಡಿಗೆ ವ್ಯಕ್ತವಾಗಿವೆ.












Click it and Unblock the Notifications