Namma Metro: ಚಲ್ಲಘಟ್ಟ - ಕೆಂಗೇರಿ ಮಾರ್ಗದ ಸುರಕ್ಷತಾ ತಪಾಸಣೆಗೆ ಮುಹೂರ್ತ ಫಿಕ್ಸ್
ಬೆಂಗಳೂರು ನಮ್ಮ ಮೆಟ್ರೋದ ಕೆಆರ್ ಪುರ - ಬೈಯಪ್ಪನಹಳ್ಳಿ ನಡುವಿನ 2-ಕಿಮೀ ಮಾರ್ಗದ ಸುರಕ್ಷತಾ ಪರಿಶೀಲನೆಯನ್ನು ನಡೆಸಿದ್ದ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಈ ಮಾರ್ಗದಲ್ಲಿ ರೈಲು ಓಡಾಟಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅತಿ ಶೀಘ್ರದಲ್ಲೇ ಕೆಆರ್ ಪುರ - ಬೈಯಪ್ಪನಹಳ್ಳಿ ನಡುವೆ ಮೆಟ್ರೋ ಸಂಚಾರ ಆರಂಭವಾಗಲಿದೆ.
ವೈಟ್‌ಫೀಲ್ಡ್ ಭಾಗದ ಮೆಟ್ರೋ ಪ್ರಯಾಣಿಕರಿಗೆ ಈ ಸುದ್ದಿ ಹೆಚ್ಚು ಖುಷಿ ನೀಡಿದೆ. ಇದರ ಜೊತೆಯಲ್ಲೇ ಕೆಂಗೇರಿ - ಚಲ್ಲಘಟ್ಟ ಮಾರ್ಗದ ಸುರಕ್ಷತಾ ತಪಾಸಣೆಗೂ ಮುಹೂರ್ತ ನಿಗದಿ ಮಾಡಲಾಗಿದೆ. ಸೆಪ್ಟೆಂಬರ್ 29ರಂದು ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಕೆಂಗೇರಿ ಚಲ್ಲಘಟ್ಟ ನಡುವಿನ ಮಾರ್ಗದಲ್ಲಿ ಸುರಕ್ಷತಾ ತಪಾಸಣೆ ನಡೆಸಲಿದ್ದಾರೆ.

ಅತಿ ಶೀಘ್ರದಲ್ಲೇ ನಮ್ಮ ಮೆಟ್ರೋ ನೇರಳೆ ಮಾರ್ಗ ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿದೆ. ಕೆಆರ್ ಪುರ - ಬೈಯಪ್ಪನಹಳ್ಳಿ ಮತ್ತು ಚಲ್ಲಘಟ್ಟ - ಕೆಂಗೇರಿ ನಡುವೆ ಏಕಕಾಲಕ್ಕೆ ಕಾರ್ಯಾಚರಣೆ ಆರಂಭಿಸಲು ಬಿಎಂಆರ್‌ಸಿಎಲ್ ಚಿಂತಿಸಿತ್ತು, ಆದರೆ ಸುರಕ್ಷತಾ ತಪಾಸಣೆ ವಿಳಂಬವಾದ ಬಳಿಕ, ಬೇರೆ ಬೇರೆ ದಿನಾಂಕಗಳಲ್ಲಿ ಮೆಟ್ರೋ ಸಂಚಾರ ಆರಂಭಿಸಲಾಗುತ್ತದೆ.
ಅಕ್ಟೋಬರ್ 15ರೊಳಗೆ ರೈಲು ಸಂಚಾರ?
ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್ 15ರ ವೇಳೆಗೆ ನೇರಳೆ ಮಾರ್ಗದಲ್ಲಿ ಚಲ್ಲಘಟ್ಟ - ವೈಟ್‌ಫೀಲ್ಡ್ ವರೆಗೆ ಸಂಪೂರ್ಣ ಮೆಟ್ರೋ ಸಂಚಾರ ಆರಂಭವಾಗಲಿದೆ. ಈಗಾಗಲೇ ಬೈಯಪ್ಪನಹಳ್ಳಿ ಕೆಆರ್ ಪುರ ನಡುವಿನ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅನುಮತಿ ಸಿಕ್ಕಿದ್ದು, ಈ ತಿಂಗಳ ಅಂತ್ಯದ ವೇಳೆಗೆ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ.
ಸೆಪ್ಟೆಂಬರ್ 19ರಂದು ಕೆಂಗೇರಿ - ಚಲ್ಲಘಟ್ಟ ನಡುವೆ ಸುರಕ್ಷತಾ ತಪಾಸಣೆ ನಡೆಸಿ ಅನುಮೋದನೆ ಕೊಟ್ಟ ಬಳಿಕ ಒಂದು ವಾರದ ಒಳಗೆ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ.
ನಮ್ಮ ಮೆಟ್ರೋ ನೇರಳೆ ಮಾರ್ಗ ಬೆಂಗಳೂರು ನಗರದ ಪೂರ್ವ ಮತ್ತು ಪಶ್ಚಿಮ ಭಾಗಗಳ ನಡುವೆ ಸಂಪರ್ಕ ಸೇತುವೆಯಾಗಿದೆ. ಪೂರ್ವ ಭಾಗದಲ್ಲಿರುವ ಐಟಿ ಪಾರ್ಕ್‌ಗಳಿಗೆ ಪಶ್ಚಿಮ ಭಾಗವನ್ನು ಜೋಡಿಸುವ ಕಾರಣ, ಐಟಿ ಉದ್ಯೋಗಿಗಳಿಗೆ ಭಾರಿ ಅನುಕೂಲವಾಗಲಿದೆ. ಸಮಯ, ಹಣ ಎರಡೂ ಉಳಿತಾಯವಾಗಲಿದ್ದು, ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಕೂಡ ಗಣನೀಯ ಏರಿಕೆಯಾಗಲಿದೆ.
44 ಕಿಮೀ ಉದ್ದದ ನೇರಳೆ ಮಾರ್ಗದ ಸಂಪೂರ್ಣವಾಗಿ ಕಾರ್ಯಾಚರಣೆ ಪ್ರಾರಂಭಿಸಿದ ನಂತರ ದೈನಂದಿನ ಪ್ರಯಾಣಿಕರ ಸಂಖ್ಯೆ 75000 ದಿಂದ 1 ಲಕ್ಷ ದಷ್ಟು ಹೆಚ್ಚಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.
ಸುರಕ್ಷತಾ ತಪಾಸಣೆ ಹೇಗೆ?
ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಲಿದ್ದು, ಸುರಕ್ಷತಾ ಕ್ರಮಗಳನ್ನು ವೀಕ್ಷಿಸಲಿದ್ದಾರೆ. ಮೆಟ್ರೋ ನಿಲ್ದಾಣ, ಲಿಫ್ಟ್, ಎಸ್ಕಲೇಟರ್, ಪಂಪ್ ರೂಂ, ಬೆಂಕಿ ಆರಿಸುವ ಉಪಕರಣಗಳನ್ನು ಪರಿಶೀಲನೆ ಮಾಡುವ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುತ್ತಾರೆ. ನಂತರ, ಪ್ಲಾಟ್‌ಫಾರ್ಮ್ ಕ್ಲಿಯರೆನ್ಸ್ ಮತ್ತು ಟ್ರ್ಯಾಕ್ ಅನ್ನು ಕೂಡ ಪರಿಶೀಲನೆ ಮಾಡಲಿದ್ದಾರೆ.












Click it and Unblock the Notifications