Namma Metro: ಹೊಸಕೋಟೆ, ದೇವನಹಳ್ಳಿ ಸೇರಿ ಒಟ್ಟು 4 ಪಟ್ಟಣಗಳಿಗೆ ಮೆಟ್ರೋ ಸಂಪರ್ಕ- ಮಹತ್ವದ ಮಾಹಿತಿ, ವರದಿ, ವಿವರ
ಬೆಂಗಳೂರು, ಆಗಸ್ಟ್ 10: ಬೆಂಗಳೂರಿನ ( Bengaluru ) ಹೊರವಲಯದ ನಾಲ್ಕು ಪಟ್ಟಣಗಳಿಗೆ ನಮ್ಮ ಮೆಟ್ರೋ ( Namma Metro ) ಸಂಪರ್ಕ ಕಲ್ಪಿಸಲು ಸಿದ್ದರಾಮಯ್ಯ ( Siddaramaiah ) ನೇತೃತ್ವದ ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ( DK Shivakumar ) ಮತ್ತು ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದೆ.
ಬೆಂಗಳೂರು ಗ್ರಾಮಾಂತರ ಶಾಸಕರ ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕರೊಬ್ಬರು ಈ ವಿಚಾರವನ್ನು ಬಹಿರಂಗಪಡಿಸಿದರು. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಂತರ ಜಿಲ್ಲೆಯ ಪಟ್ಟಣಗಳ ನಡುವಿನ ಸಂಪರ್ಕವನ್ನು ಸುಧಾರಿಸಬೇಕಿದೆ. ಈ ಹಿನ್ನೆಲೆಯಲ್ಲಿ ನಾವು ನಾಲ್ಕು ಪಟ್ಟಣಗಳಿಗೆ ಮೆಟ್ರೋವನ್ನು ವಿಸ್ತರಿಸಲು ಕೋರಿದ್ದೇವೆ ಎಂದು ಹೇಳಿದರು.

'ಇದು ಪಟ್ಟಣಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಬೆಂಗಳೂರಿನ ಜನದಟ್ಟಣೆಯನ್ನು ಕಡಿಮೆ ಮಾಡುತ್ತದೆ' ಎಂದು ಮತ್ತೊಬ್ಬ ಶಾಸಕರು ತಿಳಿಸಿದರು.
ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ ಮತ್ತು ಹೊಸಕೋಟೆ ಪಟ್ಟಣಗಳಿಗೆ ನಮ್ಮ ಮೆಟ್ರೋವನ್ನು ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ.
2ಎ ಮತ್ತು 2ಬಿ ಹಂತಗಳಲ್ಲಿ ನಡೆಯುತ್ತಿರುವ ಮೆಟ್ರೋ ಯೋಜನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಬೆಂಗಳೂರಿನ ಉಪನಗರಗಳಿಗೆ ಸಂಪರ್ಕ ಕಲ್ಪಿಸಲಿದೆ ಎಂದು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರಿಗೆ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಎತ್ತಿನಹೊಳೆ ನೀರಾವರಿ ಯೋಜನೆ ಕುರಿತು ಚರ್ಚೆ
ಕೊಡಗು, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದಾವಣಗೆರೆ ಮತ್ತು ಚಾಮರಾಜನಗರದ ಶಾಸಕರೊಂದಿಗೆ ಮತ್ತೊಂದು ಸಭೆ ನಡೆಸಲಾಯಿತು.
ಬೆಂಗಳೂರು ಗ್ರಾಮಾಂತರ ಶಾಸಕರು ಎತ್ತಿನಹೊಳೆ ಲಿಫ್ಟ್ ನೀರಾವರಿ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಲ್ಲಿ ಕೇಳಿಕೊಂಡಿದ್ದಾರೆ.
ಕಾವೇರಿ 5 ನೇ ಹಂತದ ಯೋಜನೆ
ಬೆಂಗಳೂರಿಗೆ ಹೆಚ್ಚುವರಿ 18 ಟಿಎಂಸಿ ನೀರನ್ನು ತರಬೇಕಿದೆ. ಈ ಹಿನ್ನೆಲೆಯಲ್ಲಿ, ಕಾವೇರಿ 5 ನೇ ಹಂತದ ಯೋಜನೆಯಡಿ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಬೇಕೆಂದು ಶಾಸಕರು ಮನವಿ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರದ ನಾಲ್ಕು ತಾಲ್ಲೂಕುಗಳು ಕುಡಿಯುವ ಮತ್ತು ನೀರಾವರಿ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿವೆ.

ಡಿಸ್ನಿಲ್ಯಾಂಡ್ ಕುರಿತು ಪ್ರಸ್ತಾಪ
ಇದೇ ವೇಳೆ, ಮಂಡ್ಯ ಜಿಲ್ಲೆಯ ಶಾಸಕರ ಜತೆಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪ್ರತ್ಯೇಕ ಸಭೆ ನಡೆಸಿದರು. ಕೃಷ್ಣರಾಜ ಸಾಗರ ಅಣೆಕಟ್ಟಿನಲ್ಲಿ ಡಿಸ್ನಿಲ್ಯಾಂಡ್ ಸ್ಥಾಪಿಸಲು ಸಿಎಂ ಮತ್ತು ಡಿಸಿಎಂ ಒಪ್ಪಿಗೆ ಸೂಚಿಸಿದರು. ಅಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ವಿಸ್ತೃತ ಯೋಜನಾ ವರದಿ ಅನುಷ್ಠಾನಕ್ಕಾಗಿ ಕೆಲಸ ಮಾಡಲು ಶಾಸಕರಿಗೆ ಸೂಚಿಸಿದರು. ಶಿವಕುಮಾರ್ ಅವರು 2019 ರಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದಾಗ ಈ ಯೋಜನೆಯನ್ನು ಮೊದಲು ಮಂಡಿಸಿದ್ದರು.
ಕಾಫಿ ಬೆಳೆಗಾರರ ಸಂಕಷ್ಟ ಕುರಿತು ಚರ್ಚೆ
ಕಳೆದ ಎರಡ್ಮೂರು ವರ್ಷಗಳಿಂದ ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಕೊಡಗಿನ ಶಾಸಕರು ಕೋರಿದರು. ಇಳುವರಿಯಲ್ಲಿ ತೀವ್ರ ಕುಸಿತದಿಂದ ಕಂಗೆಟ್ಟಿರುವ ಈ ಭಾಗದ ಕಾಫಿ ಬೆಳೆಗಾರರ ಸಂಕಷ್ಟವನ್ನು ಸರ್ಕಾರ ಪರಿಗಣಿಸುವಂತೆ ಒತ್ತಾಯಿಸಿದರು.
ಮೂರನೇ ದಿನದ ಸಭೆ ಮುಗಿದಿದ್ದು, ಸಿಎಂ ಮತ್ತು ಡಿಸಿಎಂ 19 ಜಿಲ್ಲೆಗಳ ಶಾಸಕರೊಂದಿಗೆ ಸಮಾಲೋಚನೆ ಪೂರ್ಣಗೊಳಿಸಿದ್ದಾರೆ. ಉಳಿದ 12 ಜಿಲ್ಲೆಗಳಿಗೆ ಆ.16 ಮತ್ತು 17ರಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಜತೆ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದರು.












Click it and Unblock the Notifications