ಮೈಸೂರು ಪೇಂಟ್ಸ್ ಕಾರ್ಖಾನೆಗೆ ಶೀಘ್ರವೇ 'ಬ್ರ್ಯಾಂಡ್' ಪಟ್ಟ: ತಯಾರಿ ಹೇಗಿದೆ?
ಬೆಂಗಳೂರು, ಮಾರ್ಚ್ 12: ಮೈಸೂರು ಮಹಾರಾಜರ ಕಾಲದ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾಗಿರುವ 'ಮೈಸೂರು ಬಣ್ಣ ಮತ್ತು ಅರಗಿನ ಕಾರ್ಖಾನೆ' (Mysuru Paints Factory) ಗೆ ರಾಜ್ಯ ಸರ್ಕಾರ ಬ್ರ್ಯಾಂಡ್ ವರ್ಚಸ್ಸು ತರಲು ಯೋಜಿಸಿದೆ. ಈ ಸಂಬಂಧ ನಿರ್ಧಾರಗಳನ್ನು ಕೈಗೊಂಡಿರುವುದಾಗಿ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
ಕಾರ್ಖಾನೆಯ ಆಡಳಿತ ಮಂಡಳಿ ಜೊತೆಗೆ ಸೋಮವಾರ ಸಭೆ ನಡೆಸಿದ ಮಾತನಾಡಿದ ಅವರು, ಕಾರ್ಖಾನೆಯಲ್ಲಿನ ನಉತ್ಪಾದನೆ ಮತ್ತು ಆರ್ಥಿಕ ವಹಿವಾಟನ್ನು ಹೆಚ್ಚಿಸಲಿದ್ದೇವೆ. ಇಲ್ಲಿ ಪೇಂಟ್ ಉತ್ಪಾದಿಸಲು ಸೂಚಿಸಲಾಗಿದೆ. ಅದಕ್ಕೆ ಅನುಮತಿಸಲಾಗಿದೆ. ಈ ಮೂಲಕ ಉದ್ದಿಮೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುಲಾಗುವುದು ಎಂದು ಅವರು ತಿಳಿಸಿದರು.

ಈ ವರ್ಷ ದುಪ್ಪಟ್ಟು ವಹೀವಾಟು ನಿರೀಕ್ಷೆ
ವಿಶ್ವೇಶ್ವರಯ್ಯನವರ ದಿವಾನಗಿರಿಯ ಕಾಲದಲ್ಲಿ ಆರಂಭವಾದ ಬಣ್ಣ ಮತ್ತು ಅರಗಿನ ಕಾರ್ಖಾನೆಯು ಸದ್ಯಕ್ಕೆ ವಾರ್ಷಿಕವಾಗಿ 34 ರಿಂದ 35 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ವೇಳೆ ಮತದಾರರ ಕೈಗೆ ಹಾಕುವ ಶಾಯಿಗೆ ತಯಾರಿಕೆಗೆ ಬೇಡಿಕೆ ಬಂದಿದೆ. ಇದೆಲ್ಲದ್ದರಿಂದ ಕಾರ್ಖಾನೆಯ ಈ ವರ್ಷದ ವಹಿವಾಟು 77 ಕೋಟಿ ರೂಪಾಯಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.
ಮುಖ್ಯವಾಗಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಹಳೆ ಪದ್ಧತಿಯಲ್ಲಿ ಸಾಗಿದರೆ ಆ ಉದ್ದಿಮೆಗೆ ಸ್ಪರ್ಧೆ ಒಡ್ಡಲು ಸಾಲುವುದಿಲ್ಲ. ಈ ಕಾರ್ಖಾನೆಗೆ ಮತ್ತಷ್ಟು ಕಸುವು ತುಂಬಲಾಗುವುದು ಎಂದು ಅವರು ತಿಳಿಸಿದರು.

ವಿವಿಧ ಬಣ್ಣಗಳ ತಯಾರಿಕೆಗೆ ಸೂಚನೆ
ಮನೆ ಗೋಡೆ ಬಣ್ಣಗಳನ್ನು ತಯಾರಿಸಲು ಸೂಚಿಸಲಾಗಿದೆ. ಮುಕ್ತ ಮಾರುಕಟ್ಟೆ ಅಲ್ಲದೆ, ಸರ್ಕಾರಿ ಕಟ್ಟಡಗಳು, ಶಾಲಾ- ಕಾಲೇಜು, ಹಾಸ್ಟೆಲ್ ಗಳಿಗೆ ಕಾಲಕಾಲಕ್ಕೆ ಬೇಕಾಗುವ ಬಣ್ಣ, ಎಮಲ್ಶನ್ ಇತ್ಯಾದಿಗಳನ್ನು ಈ ಕಾರ್ಖಾನೆಯಲ್ಲೇ ತಯಾರಿಸುವ ಚಿಂತನೆಯಲ್ಲಿದ್ದೇವೆ. ಈ ಬಗ್ಗೆ ಸೂಚಿಸಲಾಗಿದೆ ಎಂದರು.
ಈ ಕಾರ್ಖಾನೆಯಲ್ಲಿ ವಿವಿಧ ಬಗೆಯ ಬಣ್ಣಗಳ ಉತ್ಪಾದನೆಗಾಗಿ ಈ ಉದ್ಯಮದಲ್ಲಿ ಪಳಗಿರುವ ಪರಿಣಿತರೊಬ್ಬರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲು ಸಭೆಯಲ್ಲಿ ಅನುಮತಿ ನೀಡಲಾಗಿದೆ. ಈ ಮೂಲಕ 'ಮೈಸೂರು ಪೇಂಟ್ಸ್' ಅನ್ನು ಬ್ರ್ಯಾಂಡ್ ವರ್ಚಸ್ಸು ತಂದು ಬೆಳೆಸಲಾಗುವುದು. ಈ ಮೂಲಕ ಖಾಸಗಿ ಕಂಪನಿಗಳಿಗೆ ಸಡ್ಡು ಹೊಡೆದು, ಸ್ಪಧಾತ್ಮಕ ಯುಗದಲ್ಲಿ ಗಟ್ಟಿಗೊಳಿಸಲಾಗುವುದು.
ಮಾರುಕಟ್ಟೆ ವಿಸ್ತರಣೆ
ಇದೆಲ್ಲ ಉದ್ದೇಶದಿಂದ ವೈಜ್ಞಾನಿಕವಾಗಿ ಮಾರುಕಟ್ಟೆಯನ್ನೂ ವಿಸ್ತರಿಸಿ, ಸ್ಪರ್ಧಾತ್ಮಕ ಬೆಲೆಯಲ್ಲಿ ಪೇಂಟ್ ಸಿಗುವಂತೆ ಮಾಡುವ ಯೋಚನೆ ಸರ್ಕಾರಕ್ಕೆ ಇದೆ. ಈಗ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದ ಉತ್ಪನ್ನಗಳು ಮತ್ತು ವಹಿವಾಟನ್ನು ವಿಸ್ತರಿಸಿರುವಂತೆ ಮೈಸೂರು ಬಣ್ಣ ಮತ್ತು ಅರಗಿನ ಕಾರ್ಖಾನೆಯನ್ನೂ ಹೊಸ ಸ್ತರಕ್ಕೆ ಕೊಂಡೊಯ್ಯಲಾಗುವುದು. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಈಗಾಗಲೇ ಆರಂಭಿಸಿದ್ದೇವೆ ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಮೈಸೂರು ಬಣ್ಣ ಮತ್ತು ಅರಗಿನ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಮಹಮದ್ ಇರ್ಫಾನ್ ಉಪಸ್ಥಿತರಿದ್ದರು.












Click it and Unblock the Notifications