ಬೈರತಿ ಸುರೇಶ್ ಕೊಲೆ ಯತ್ನ: ಮಗ ಮಾನಸಿಕ ಅಸ್ವಸ್ಥ ಎಂದ ತಾಯಿ
ಬೆಂಗಳೂರು, ಅಕ್ಟೋಬರ್ 18: ಹೆಬ್ಬಾಳ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಅವರ ಹತ್ಯೆಗೆ ಪ್ರಯತ್ನಿಸಿದ ಆರೋಪಿ ಶಿವು ಮಾನಸಿಕ ಅಸ್ವಸ್ಥನಾಗಿದ್ದ ಎಂದು ಆತನ ತಾಯಿ ಹೇಳಿದ್ದಾರೆ.
ಖಾಸಗಿ ವಾಹಿನಿಗಳೊಂದಿಗೆ ಮಾತನಾಡಿದ ಆತನ ತಾಯಿ ಕಮಲಮ್ಮ, 'ನನ್ನ ಮಗ ಒಳ್ಳೆಯ ಹುಡುಗ. ಅವನು ಚೆನ್ನಾಗಿಯೇ ಇದ್ದ. ಈಗ ಯಾಕೆ ಹೀಗೆ ಮಾಡಿದ್ದಾನೋ ಗೊತ್ತಿಲ್ಲ. ಒಂದೂವರೆ ವರ್ಷದ ಹಿಂದೆ ರಸ್ತೆಯಲ್ಲಿ ಗಲಾಟೆ ಮಾಡಿದ್ದ. ಬೆತ್ತಲೆಯಾಗಿ ಓಡಾಡಿದ್ದ. ಕೊನೆಗೆ ನಿಮ್ಹಾನ್ಸ್‌ಗೆ ಸೇರಿಸಿದ್ದೆವು ಎಂದು ತಿಳಿಸಿದ್ದಾರೆ.
ನಿಮ್ಹಾನ್ಸ್‌ನಲ್ಲಿ ಮೂರು ತಿಂಗಳು ಇದ್ದು ಸರಿಯಾಗಿದ್ದ. ಆದರೆ ಮಾತ್ರೆ ಕೊಡುವುದನ್ನು ಮುಂದುವರಿಸಬೇಕು ಎಂದು ವೈದ್ಯರು ಹೇಳಿದ್ದರು. ಕೆಲವುತಿಂಗಳ ಹಿಂದೆ ಮೂರ್ಚೆ ರೋಗ ಕಾಣಿಸಿಕೊಂಡಿತ್ತು. ಒಂದೆರಡು ದಿನ ಮಾತ್ರೆ ತೆಗೆದುಕೊಂಡಿರಲಿಲ್ಲ. ಅದಕ್ಕಾಗಿ ಹೀಗೆ ಆಡುತ್ತಿರಬೇಕು ಎಂದು ಅವರು ಹೇಳಿದ್ದಾರೆ.

ಬೈರತಿ ಸುರೇಶ್ ಹತ್ಯೆ ಪ್ರಯತ್ನದ ಆರೋಪದಲ್ಲಿ ಬಂಧಿತನಾಗಿರುವ ಶಿವಕುಮಾರ್‌ನನ್ನು ವಿಚಾರಣೆ ನಡೆಸುವಾಗ ಆತ ತಾನು ಕೊಲೆ ಮಾಡಲು ಹೋಗಿದ್ದೇನಾ? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದ ಎಂಬುದಾಗಿ ವರದಿಯಾಗಿದೆ.
ಶಾಸಕ ಬೈರತಿ ಸುರೇಶ್ ಅವರ ಕಾರ್‌ಗೆ ಬೈಕ್‌ನಿಂದ ಗುದ್ದಿದ್ದ ಶಿವು, ಬಳಿಕ ಚಾಕುವಿನಿಂದ ಅವರಿಗೆ ಇರಿಯಲು ಪ್ರಯತ್ನಿಸಿದ್ದ. ಸುರೇಶ್ ಅವರ ಗನ್‌ಮ್ಯಾನ್‌ಗಳು ಮತ್ತು ಇತರರು ಕೂಡಲೇ ಆತನನ್ನು ಹಿಡಿದಿದ್ದರು. ಶಿವು ತಮ್ಮ ಪಕ್ಕದ ಮನೆಯಲ್ಲಿಯೇ ಇದ್ದು, ಆತನ ತಾಯಿ ತಮ್ಮ ಮನೆಯಲ್ಲಿಯೇ ಕೆಲಸ ಮಾಡುತ್ತಾರೆ ಎಂದು ಸುರೇಶ್ ತಿಳಿಸಿದ್ದರು.












Click it and Unblock the Notifications