ಮುರುಘಾ ಶ್ರೀ ಪ್ರಕರಣ: ಬಸವರಾಜನ್ ದಂಪತಿ ವಿರುದ್ಧದ ಕೌಂಟರ್ ಕೇಸ್ ರದ್ದು
ಬೆಂಗಳೂರು, ನವೆಂಬರ್ 4: ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಪ್ರತಿಯಾಗಿ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಮತ್ತು ಅವರ ಪತ್ನಿ ಸೌಭಾಗ್ಯ ಬಸವರಾಜನ್ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪದಡಿ ದಾಖಲಿಸಲಾಗಿದ್ದ ದೂರನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಇದರಿಂದಾಗಿ ಬಸವರಾಜನ್ ದಂಪತಿ ನಿರಾಳರಾಗುವಂತೆ ಮಾಡಿದೆ. ಅವರೇ ಪಿತೂರಿ ನಡೆಸಿ ಸ್ವಾಮೀಜಿ ವಿರುದ್ಧ ಕೇಸ್ ದಾಖಲಿಸಿದ್ದಾರೆಂಬ ಆರೋಪ ದಂಪತಿ ವಿರುದ್ಧ ಕೇಳಿಬಂದಿತ್ತು. ಆದರೆ ಅವರು ಅದನ್ನು ನಿರಾಕರಿಸಿದ್ದರು.

ಬಸವರಾಜನ್ ಮತ್ತು ಸೌಭಾಗ್ಯ ದಂಪತಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಹಾಗೂ ವಿಚಾರಣಾ ನ್ಯಾಯಾಲಯದ ಮುಂದಿನ ಪ್ರಕ್ರಿಯೆಗಳನ್ನು ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
ಅರ್ಜಿದಾರರ ಪರ ವಕೀಲರು, ಮಠದ ತಾತ್ಕಾಲಿಕ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಸಲ್ಲಿಸಿರುವ ಈ ದೂರಿನಲ್ಲಿ ಯಾವುದೇ ಹುರುಳಿಲ್ಲ. ಶರಣರ ವಿರುದ್ಧ ಹೊರಿಸಲಾಗಿರುವ ಬಾಲಕಿಯರ ಮೇಲಿನ ಅತ್ಯಾಚಾರದ ಆಪಾದನೆಗಳಿಗೆ ರಕ್ಷಣೆ ಪಡೆಯಲು ಇಂತಹ ಪ್ರತಿ ದೂರು ದಾಖಲಿಸಲಾಗಿದೆ ಎಂದು ವಾದ ಮಂಡಿಸಿದ್ದರು. ಅದನ್ನು ನ್ಯಾಯಾಲಯ ಮಾನ್ಯ ಮಾಡಿದೆ. ವಿಸ್ತೃತ ಆದೇಶ ಇನ್ನೂ ಹೊರಬೀಳಬೇಕಿದೆ.
ಪ್ರಕರಣದ ಹಿನ್ನೆಲೆ
2022ರ ನವೆಂಬರ್ 9ರಂದು ಬಸವಪ್ರಭು ಸ್ವಾಮೀಜಿ ದಂಪತಿ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ-1860ರ ಕಲಂ 120 ಬಿ (ಅಪರಾಧ ಎಸಗಲು ಕ್ರಿಮಿನಲ್ ಪಿತೂರಿ), 384 (ಸುಲಿಗೆ), 420 (ವಂಚನೆಯ ಅಪರಾಧ), 366 ಎ (ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ವಶದಲ್ಲಿ ಇರಿಸಿಕೊಳ್ಳುವುದು) ಅಡಿಯಲ್ಲಿ ದೂರು ದಾಖಲಿಸಿದ್ದರು.
ಪೋಕ್ಸೋ ಪ್ರಕರಣದಲ್ಲಿ ಶರಣರ ಬಂಧನವಾದ ನಂತರ, 'ಸುಳ್ಳು ಕೇಸು ದಾಖಲಿಸಲು ಸಂತ್ರಸ್ತ ಬಾಲಕಿಗೆ ಅಥಣಿ ತಾಲೂಕಿನ ಜುಂಜರವಾಡ ಗ್ರಾಮದ ನಿವಾಸಿಯಾದ ಮಠದ ಶಾಲಾ ಶಿಕ್ಷಕ ಬಸವರಾಜೇಂದ್ರ ಮತ್ತು ಗಾಯತ್ರಿ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಆಡಿಯೋ ವೈರಲ್ ಆಗಿತ್ತು. ಈ ಸಂಬಂಧ ಬಸವರಾಜೇಂದ್ರ ಅವರನ್ನು ಪೊಲೀಸರು ಕಳೆದ ನವೆಂಬರ್ 10ರಂದು ಬಂಧಿಸಿದ್ದರು.
ಇದೇ ಪ್ರಕರಣದಲ್ಲಿ ಶರಣರ ವಿರುದ್ಧ ಪಿತೂರಿ ನಡೆಸಿ ಸಂಚು ಹೆಣೆದ ಆರೋಪದಡಿ ಮಾಜಿ ಶಾಸಕರೂ ಆದ ಬಸವರಾಜನ್ ಮತ್ತು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆಯೂ ಆದ ಅವರ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನೂ ಪೊಲೀಸರು ಬಂಧಿಸಿದ್ದರು. ನಂತರ ಇಬ್ಬರೂ ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು.












Click it and Unblock the Notifications