ಬೆಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಕಳ್ಳರ ಹಾವಳಿ: ಶ್ರೀಗಂಧದ ಮರಗಳೇ ಖದೀಮರ ಟಾರ್ಗೆಟ್
ಬೆಂಗಳೂರು, ಆಗಸ್ಟ್ 17: ಸಾವಿರಾರು ಎಕರೆ ಭೂ ಪ್ರದೇಶದಲ್ಲಿ ವಿಶಾಲವಾಗಿರುವ ಕ್ಯಾಂಪಸ್ ಹೊಂದಿರುವ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅಲ್ಲಿಯ ಪರಿಸರವೇ ಒಂದು ರೀತಿಯ ಕಿರೀಟ. ಇಡೀ ಭೂ ಪ್ರದೇಶದಲ್ಲಿ ಅಲ್ಲಲ್ಲಿ ವಿವಿ ಕಟ್ಟಡಗಳಿದ್ದರೆ, ಉಳಿದೆಡೆ ಹಚ್ಚಹಸಿರಿನ ವನಸಿರಿ ತುಂಬಿ ತುಳುಕುತ್ತಿದೆ.
ಆದರೆ ಕಳೆದ ಕೆಲ ದಿನಗಳಿಂದ ಈ ವನ ವೈಭವವು ಕಳ್ಳಕಾಕರ ಪಾಲಾಗುತ್ತಿದೆ. ಹೀಗಿದ್ದರೂ ಇದಕ್ಕೆ ಬ್ರೇಕ್ ಹಾಕುವ ಕೆಲಸಕ್ಕೆ ಮಾತ್ರ ವಿಶ್ವವಿದ್ಯಾಲದ ಅಧಿಕಾರಿಗಳು ಮುಂದಾಗುತ್ತಿಲ್ಲ. ವಿಶ್ವವಿದ್ಯಾಲದಲ್ಲಿ ಆಗುತ್ತಿರುವ ಪ್ರಕೃತಿ ನಾಶ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣ ಆಗಿದೆ.

ದಿನಕ್ಕೊಂದು ಎನ್ನುವಂತೆ ಮರಗಳ ಕಳ್ಳತನ ಆಗುತ್ತಿರುವುದು ವಿಶ್ವವಿದ್ಯಾಲದ ವ್ಯಾಪ್ತಿಯ ನಿರ್ಲಕ್ಷ್ಯತನಕ್ಕೆ ಹಿಡಿದ ಕೈ ಗನ್ನಡಿಯಾಗಿದೆ. ಅದರಲ್ಲೂ ಕಳ್ಳತನ ಆಗುತ್ತಿರುವುದು ಅಂತಿಂತಹ ಮರ ಅಲ್ಲ ಶ್ರೀ ಗಂಧದ ಮರ. ವಿಶ್ವವಿದ್ಯಾಲದ ಕ್ಯಾಂಪಸ್‌ನಲ್ಲಿದ್ದ ನೂರಾರು ಗಂಧದ ಮರಗಳೇ ಖದೀಮರ ಪಾಲಾಗಿವೆ.
ಬೆಂಗಳೂರು ವಿಶ್ವವಿದ್ಯಾಲದಲ್ಲಿ ಕಳ್ಳಕಾಕರ ಕಾಟ ಅತಿಯಾಗಿದೆ. ಅದರಲ್ಲೂ ಇತ್ತೀಚಿಗೆ ಮರಗಳ್ಳರ ಹಾವಳಿ ಹೆಚ್ಚಾಗಿದೆ. ವಿವಿ ಕ್ಯಾಂಪಸ್ ನಲ್ಲಿರುವ ಮರಗಳನ್ನು ಯಾರಿಗೂ ಗೊತ್ತಿಲ್ಲದ ಹಾಗೇ ಕದ್ದು ಕೊಂಡೊಯ್ಯುತ್ತಿದ್ದಾರೆ. ಇದು ಕಳೆದೊಂದು ವರ್ಷಗಳಿಂದ ಹೆಚ್ಚಾಗಿದ್ದು, ಬೆಲೆ ಬಾಳುವ ಗಂಧದ ಮರಗಳೇ ಈ ಕಳ್ಳಕಾಕರ ಟಾರ್ಗೆಟ್ ಆಗುತ್ತಿದೆ.

ಸುಮಾರು ಎರಡೂವರೆ ಸಾವಿರ ಎಕರೆ ವಿಶಾಲ ಭೂ ಪ್ರದೇಶದಲ್ಲಿರುವ ವಿವಿ ಆವರಣದಲ್ಲಿ ಕಳೆದೊಂದು ವರ್ಷಗಳಿಂದ ಗಂಧದ ಮರಗಳ ಕಣ್ಮರೆ ಹೆಚ್ಚಾಗಿದೆ. ಕಳೆದೊಂದು ವರ್ಷದಲ್ಲೇ ಸುಮಾರು 300ಕ್ಕೂ ಹೆಚ್ಚು ಗಂಧದ ಮರಗಳು ಕಣ್ಮರೆಯಾಗಿದೆಯಂತೆ. ವಿವಿ ಕ್ಯಾಂಪಸ್‌ನಲ್ಲಿಯೇ ಬೆಳೆದಿರುವ ಸಾವಿರಾರು ಗಂಧದ ಮರಗಳ ಪೈಕಿ ಈಗಾಗಲೇ ನೂರಾರು ಮರಗಳನ್ನ ಖದೀಮರು ಕತ್ತರಿಸಿ ಕೊಂಡೊಯ್ದಿದ್ದಾರೆ.
ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ಕೂಡ ವಿಶ್ವವಿದ್ಯಾಲದ ಅಧಿಕಾರಿಗಳಾಗಲಿ, ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳಾಗಲಿ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ವಿದ್ಯಾರ್ಥಿಗಳೇ ವಿವಿ ಅಧಿಕಾರಿಗಳ ಗಮನಕ್ಕೆ ತಂದರೂ, ಗಂಧದ ಮರಗಳ ಕಳ್ಳತನಕ್ಕೆ ಮಾತ್ರ ಬ್ರೇಕ್ ಬೀಳುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇನ್ನೂ ವಿಶ್ವವಿದ್ಯಾಲದ ಒಳಭಾಗದಲ್ಲಿ ನಿತ್ಯ ಶಿಫ್ಟ್ ಲೆಕ್ಕದಲ್ಲಿ 300 ಜನ ಹೋಂ ಗಾರ್ಡ್‌ಗಳು ಸಂಪೂರ್ಣ ಭೂ ಪ್ರದೇಶವನ್ನು ಬೀಟ್ ಹಾಕುತ್ತಿರುತ್ತಾರೆ. ಜೊತೆಗೆ ಒಳಭಾಗದಲ್ಲೇ ಪೊಲೀಸ್ ಸ್ಟೇಷನ್ ಕೂಡ ಇದೆ. ಇಷ್ಟಿದ್ದರೂ ಕೂಡ ಅವರೆಲ್ಲರ ಕಣ್ಣು ತಪ್ಪಿಸಿ ಗಂಧದ ಮರ ಕಳವು ಮಾಡ್ತಿರೋದು ಹೇಗೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.
ಇದರ ಜೊತೆಗೆ ಕಳೆದ ಹಲವು ದಿನಗಳಿಂದ ಕಳ್ಳತನ ಮುಂದುವರೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ. ಪೊಲೀಸರಾಗಲಿ ಈ ವಿಚಾರವನ್ನ ಭೇದಿಸಿಲ್ಲ. ಆದರೆ ಕಳ್ಳತನ ಪ್ರಕರಣಗಳು ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ನೂರಾರು ಪ್ರಬೇಧದ ವಿವಿಧ ವೈಶಿಷ್ಟ್ಯದ ಮರಗಳನ್ನು ಹೊಂದಿರುವ ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಖದೀಮರ ಕಾಟಕ್ಕೆ ಬ್ರೇಕ್ ಬೀಳದಿದ್ದರೆ, ಮುಂದೊಂದು ದಿನ ಇಡೀ ವಿವಿ ಕ್ಯಾಂಪಸ್ ಮರಗಳು ಕಳ್ಳಕಾಕರ ಪಾಲಾಗುವುದರಲ್ಲಿ ಎರಡು ಮಾತಿಲ್ಲ ಎನ್ನುವುದು ವಿದ್ಯಾರ್ಥಿಗಳ, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications