Bengaluru Rains: ಚಂಡಮಾರುತ ಪ್ರಸರಣ, ನಗರದಲ್ಲಿ ಮುಂದುವರಿದ ಮಳೆ, ಯೆಲ್ಲೋ ಅಲರ್ಟ್
ಬೆಂಗಳೂರು, ಜೂನ್ 09: ಹವಾಮಾನದಲ್ಲಿ ಉಂಟಾಗಿರುವ ದಿಢೀರ್ ಬದಲಾವಣೆಯಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಮುಂಗಾರು ಮಳೆ ಚುರುಕಾಗಿದೆ. ವಾರದ ಮೊದಲ ದಿನವೇ (ಜೂನ್ 09) ನಗರದ 181 ವಾರ್ಡ್‌ಗಳಲ್ಲಿ (ಸಂಜೆ 4.30ರ ಮಾಹಿತಿ) ಹಗುರದಿಂದ ಸಾಧಾರಣವಾಗಿ ಮಳೆ ಆಗಿದೆ. ಕೆಲವೆಡೆ ಜಿಟಿ ಮಳೆ ಮುಂದುವರಿದಿದೆ. ಎಲ್ಲೆಡೆ ಮಬ್ಬು ವಾತಾವರಣ ತೇವಾಂಶ ಸಹಿತ ಜೋರು ಗಾಳಿ ಬೀಸುತ್ತಿದೆ.
ಬೆಂಗಳೂರಿನ ಪಶ್ಚಿಮ ವಲಯ, ಯಲಹಂಕ, ಮಹಾದೇವಪುರ, ದಾಸರಹಳ್ಳಿ ಹಾಗೂ ರಾಜರಾಜೇಶ್ವರಿ ನಗರ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಸೋಮವಾರ ಮಧ್ಯಾಹ್ನವೇ ಮುಂಗಾರು ಮಳೆ ಸುರಿದಿದೆ. ಹತ್ತಾರು ವಾರ್ಡ್‌ಗಳಲ್ಲಿ ಸುರಿದ ಮಳೆಗೆ ಅಲ್ಲಲ್ಲಿ ಟ್ರಾಫಿಕ್ ಕಂಡು ಬಂತು. ಸಂಜೆ ಬೀದಿ ಬದಿ ವ್ಯಾಪಾರಕ್ಕೆ, ವಾಹನಗಳಿಗೆ, ಸಾರ್ವಜನಿಕರ ಓಡಾಟಕ್ಕೆ ಮುಂಗಾರು ಮಳೆ ಕಿರಿ ಕಿರಿ ಉಂಟು ಮಾಡಿತು.

ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಮತ್ತೆ ಬಿರು ಬಸಿಲಿನ ವಾತಾವರಣ ಉಂಟಾಗಿತ್ತು 28 ಡಿಗ್ರಿ ಸೆಲ್ಸಿಯಸ್‌ನಿಂದ 32 ಡಿಗ್ರಿ ಸೆಲ್ಸಿಯಸ್‌ಗೆ ಗರಿಷ್ಠ ತಾಪಮಾನ ಏರಿಕೆ ಆಗಿತ್ತು. ಇದೀಗ ಎರಡೇ ದಿನದಲ್ಲಿ ವಾತಾವರಣ ಸಂಪೂರ್ಣ ಬದಲಾಗಿದೆ. ಮುಂದಿನ ಒಂದು ವಾರ ಕಾಲ ಬೆಂಗಳೂರಿನಲ್ಲೇ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಭಾರತೀಯ ಹವಾಮಾನ ಇಲಾಖೆಯು ನಗರಕ್ಕೆ ಜೂನ್ 11ರಂದು ಭಾರೀ ಮಳೆ ಬರಲಿದೆ ಎಂದು ಮುನ್ಸೂಚನೆ ನೀಡಿದೆ.
ಈ ಮಳೆ ಮುನ್ಸೂಚನೆ ಪ್ರಕಾರ, ನಗರದಲ್ಲಿ ಗರಿಷ್ಠ 110 ಮಿಲಿಮೀಟರ್‌ನಷ್ಟು ಮಳೆ ಬರುವ ನಿರೀಕ್ಷೆ ಇದೆ. ಜೋರು ಗಾಳಿ ಬೀಸಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ಚಳಿ ಕಂಡು ಬರಲಿದೆ. ಬಿಸಿಲಿನ ದರ್ಶನ ಅಪರೂಪ ಎನ್ನುವ ವಾತಾರಣ ನಿರ್ಮಾಣವಾಗಲಿದೆ. ಬೆಂಗಳೂರು ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲೂ ಇದೇ ರೀತಿ ಉತ್ತಮ ಮಳೆ ಆಗುವ ಸಾಧ್ಯತೆ ಇದೆ.
ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಭಾರೀ ಮಳೆ
ನಗರದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಮಳೆ ಇಂದು ತಡರಾತ್ರಿವರೆಗೂ ಮುಂದುವರಿಯುವ ಲಕ್ಷಣ ಇದೆ. ಕರ್ನಾಟಕದಲ್ಲಿ ಸುಮಾರು 20 ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಾಧಾರಣದಿಂದ ಭಾರೀ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಈ ಕಾರಣದಿಂದ ಜೂನ್ 12ರಿಂದ ಮೂರು ದಿನ ಯೆಲ್ಲೋ ಹಾಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಪ್ರತಿ ಗಂಟೆಗೆ 50-60 kmph ವೇಗದಲ್ಲಿ ಗಾಳಿ ಬೀಸಲಿದೆ ಎಂದು ಐಎಂಡಿ ತಿಳಿಸಿದೆ.
ಚಂಡಮಾರುತ ಪ್ರಸರಣ, ಎಲ್ಲೆಲ್ಲೆ ವೈಪರೀತ್ಯ
ಆಗ್ನೇಯ ಮತ್ತು ಪಕ್ಕದ ಪೂರ್ವ-ಮಧ್ಯ ಬಂಗಾಳ ಕೊಲ್ಲಿಯ ಮೇಲೆ ಮೇಲಿನ ವಾಯು ಚಂಡಮಾರುತದ ಪರಿಚಲನೆ ಮುಂದುವರಿದಿದೆ. ಸರಾಸರಿ ಸಮುದ್ರ ಮಟ್ಟದಿಂದ 5.8 ಮತ್ತು 7.6 ಕಿ.ಮೀ ನಡುವೆ ಕಂಡು ಬಂದಿದೆ. ಇದಲ್ಲದೇ ಉತ್ತರ ತಮಿಳುನಾಡಿನಿಂದ ದಕ್ಷಿಣ ಮಹಾರಾಷ್ಟ್ರ ಕರಾವಳಿಯವರೆಗೆ ಒಳನಾಡಿನ ಕರ್ನಾಟಕದಾದ್ಯಂತ ಸರಾಸರಿ ಸಮುದ್ರ ಮಟ್ಟದಿಂದ 3.1 ಮತ್ತು 4.5 ಕಿ.ಮೀ ನಡುವೆ ಒಂದು ಸ್ಟ್ರಫ್ ಉಂಟಾಗಿದೆ. ಇಲ್ಲಿ ಗಾಳಿ ಬೀಸುವಿಕೆ ವೇಗವಾಗಿದೆ. ಇದೆಲ್ಲದರ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮುನ್ಸೂಚನೆ ನೀಡಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಕರ್ನಾಟಕ ಕೇಂದ್ರ ಖಚಿತಪಡಿಸಿದೆ.












Click it and Unblock the Notifications