Bengaluru: ಮಳೆಗಾಲದ ಸಿದ್ಧತೆ ಬಗ್ಗೆ ಬಿಬಿಎಂಪಿ ಸಭೆ, ಪೂರ್ಣವಾಗದ ಅಂಡರ್‌ಪಾಸ್‌ಗಳಲ್ಲಿನ ಸುರಕ್ಷತಾ ಕೆಲಸ
ಬೆಂಗಳೂರು, ಜೂನ್ 14: ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯ ರಸ್ತೆ ಅಂಡರ್ ಪಾಸ್‌ಗಳಲ್ಲಿ (ಕೆಳಸೇತುವೆ) ಯಾವುದೇ ರೀತಿಯ ಸಮಸ್ಯೆ ಆಗದಂತೆ ಕೂಡಲೇ ಸಿಸಿ ಟಿವಿ, ವಿದ್ಯುತ್ ದೀಪ ಹಾಗೂ ಮಳೆ ನೀರಿನ ಪ್ರಮಾಣ ತಿಳಿಯಲು ಮೀಟರ್ ಗೇಜ್ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ತಿಳಿಸಿದರು.
ಮಳೆಗಾಲದ ಸಿದ್ದತೆ ಕುರಿತು ಹಿರಿಯ ಅಧಿಕಾರಿಗಳ ಜೊತೆ ನಡೆಸಿದ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 53 ಕೆಳಸೇತುವೆಗಳು ಇವೆ. ಈ ಪೈಕಿ 41 ಕೆಳಸೇತುವೆಗಳಲ್ಲಿ ಈಗಾಗಲೇ ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬಾಕಿ 12 ಅಂಡರ್‌ಪಾಸ್‌ಗಳಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ಕೂಡಲೇ ಅಗತ್ಯ ಸುರಕ್ಷತಾ ಕ್ರಮದ ಕೆಲಸ ಆರಂಭಿಸುವಂತೆ ತಿಳಿಸಿದ್ದೇವೆ ಎಂದು ಅವರು ವಿವರಿಸಿದರು.

ಮಳೆಗಾಲ ಆರಂಭವಾಗಿದ್ದು, ಮುಂಗಾರು ಚುರುಕಾಗುವ ಲಕ್ಷಣಗಳ ಇವೆ. ನಗರದಲ್ಲಿ 198 ಪ್ರವಾಹ ಪೀಡಿತ ಸೂಕ್ಷ್ಮ ಪ್ರದೇಶಗಳಿವೆ. ಅದರಲ್ಲಿ 118 ಪ್ರವಾಹ ಪೀಡಿತ ಸೂಕ್ಷ್ಮ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ನೀಡಲಾಗಿದೆ. ಇನ್ನುಳಿದ 80 ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಪರಿಹಾರ ಕಂಡುಕೊಳ್ಳಲಾಗಿದೆ. ಅದರಲ್ಲಿ ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತೊಮ್ಮೆ ಪರಿಶೀಲಿಸಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ಈ ಬಾರಿ ಬಿಬಿಎಂಪಿ ವತಿಯಿಂದ ಪ್ರವಾಹ ಪೀಡಿತ ಪ್ರದೇಶಗಳ ಮೇಲೆ ಹೆಚ್ಚು ನಿಗಾ ವಹಿಸಬೇಕಿದೆ. ಎಂಟು ವಲಯಗಳ ಪೈಕಿ ಆಯಾ ವಲಯ ವ್ಯಾಪ್ತಿಯಲ್ಲಿ ಬರುವ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ನೀರು ನಿಲ್ಲುವಂತಹ ಪ್ರದೇಶದಲ್ಲಿ ಪಂಪ್‌ಗಳ ವ್ಯವಸ್ಥೆ ಮಾಡಿಕೊಳ್ಳಬೇಕು.
ಅಷ್ಟೇ ಅಲ್ಲದೇ ಅರಣ್ಯ ವಿಭಾಗದಿಂದ ಮರಗಳು ಬಿದ್ದಿರುವ ಸ್ಥಳಕ್ಕೆ ತ್ವರಿತವಾಗಿ ಹೋಗಲು ತಂಡಗಳು ಸದಾ ಸನ್ನದ್ಧವಾಗಿರಬೇಕು. ಎಲ್ಲಿಯೂ ಯಾವುದೇ ರೀತಿಯ ತೊಂದರೆಗಳಾಗದಂತೆ ನಾಗರಿಕರಿಂದ ಬಂದಂತಹ ದೂರುಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲು ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ತಾಕೀತು ಮಾಡಿದರು.

ವಿವಿಧ ಇಲಾಖೆಗಳ ಕಾಮಗಾರಿಯಿಂದ ರಸ್ತೆ ಹಾಳು
ಬೆಂಗಳೂರಿನಲ್ಲಿ ಮೆಟ್ರೋ, ಜಲಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್, ಗೇಲ್ ಸೇರಿದಂತೆ ಇನ್ನಿತರೆ ಇಲಾಖೆಗಳು ಕೈಗೆತ್ತಿಕೊಳ್ಳುವ ಕಾಮಗಾರಿಗಳಿಂದ ರಸ್ತೆ ಬದಿಯ ಚರಂಡಿಗಳು, ರಸ್ತೆ ಮೇಲ್ಮೈ ಹಾಳಾಗಿದೆ. ಇದರಿಂದ ಮಳೆಗಾಲದಲ್ಲಿ ರಸ್ತೆಗಳ ಮೂಲಕ ನೀರು ನುಗ್ಗುವುದು, ನೀರು ನಿಲ್ಲುವ ಸಮಸ್ಯೆಯಾಗುತ್ತಿದೆ. ಆದ್ದರಿಂದ ಶೀಘ್ರವಾಗಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಗಳ ಜೊತೆ ಸಮನ್ವಯ ಸಭೆ ನಡೆಸಿ ಇರುವ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಅವರು ಹೇಳಿದರು.
ಆಯಾ ವಲಯ ಹಿರಿಯ ಅಧಿಕಾರಿಗಳು ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೋಳ್ಳಬೇಕು. ಈ ಸಂಬಂಧ ರಾಜಕಾಲುವೆ ಕಾಮಗಾರಿ, ಪ್ರವಾಹ ಪೀಡಿತ ಪ್ರದೇಶಗಳು, ಕೆಳಸೇತುವೆ ಹಾಗೂ ಮೇಲುಸೇತುವೆಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇರುವ ಸ್ಥಳದಲ್ಲಿ ಏನಾದರು ಸಮಸ್ಯೆ ಇದ್ದರೆ ಕೂಡಲೆ ಅದನ್ನು ಬಗೆಹರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಎಲ್ಲಾ ವಲಯ ಆಯುಕ್ತರು, ಎಲ್ಲಾ ವಲಯ ಜಂಟಿ ಆಯುಕ್ತರು, ಉಪ ಅರಣ್ಯ ಸಂರಕ್ಷಣಾಧಿಕಾರಿ, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ಎಲ್ಲಾ ವಲಯ ಮುಖ್ಯ ಅಭಿಯಂತರರು, ರಾಜಕಾಲುವೆ ವಿಭಾಗದ ಮುಖ್ಯ ಅಭಿಯಂತರರು, ಕೆರೆಗಳ ವಿಭಾಗದ ಮುಖ್ಯ ಇಂಜಿನಿಯರ್, ಘನತ್ಯಾಜ್ಯ ವಿಭಾಗದ ಮುಖ್ಯ ಅಭಿಯಂತರರು ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications