ದೇಶದ ಯುವಕರಿಗೆ ಮೋದಿ ನಾಮ ಹಾಕಿದ್ದಾರೆ: ಸಿದ್ದರಾಮಯ್ಯ
ಲೋಕಸಭಾ ಚುನಾವಣೆಯಲ್ಲಿ ದೇಶದ ಎಲ್ಲ ಯುವಕರು ನರೇಂದ್ರ ಮೋದಿಯವರ ಸುಳ್ಳು ಭರವಸೆಗಳನ್ನು ನಂಬಿ ಮತ ಹಾಕಿದ್ದರು, ಆದರೆ ದೇಶದ ಯವಕರಿಗೆ ಮೋದಿ ನಾಮ ಹಾಕಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಬೆಂಗಳೂರು, ಡಿಸೆಂಬರ್, 01: ಲೋಕಸಭಾ ಚುನಾವಣೆಯಲ್ಲಿ ದೇಶದ ಎಲ್ಲ ಯುವಕರು ನರೇಂದ್ರ ಮೋದಿಯವರ ಸುಳ್ಳು ಭರವಸೆಗಳನ್ನು ನಂಬಿ ಮತ ಹಾಕಿದ್ದರು, ಆದರೆ ದೇಶದ ಯುವಕರಿಗೆ ಮೋದಿ ನಾಮ ಹಾಕಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಕೆ.ಆರ್.ಪುರಂ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಗೂ ಮುನ್ನ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂದರು, ಆದರೆ ಅವರು ಏನೂ ಮಾಡಿಲ್ಲ ಎಂದರು.
ಮೋದಿಯವರ ಮೇಲೆ ಭರವಸೆ ಇಟ್ಟು ಯುವಕರು ಮೋದಿ, ಮೋದಿ ಅಂದರು, ಆದರೆ ಅವರು ನಿಮಗೆ ನಾಮ ಹಾಕಿದ್ದಾರೆ, ದೇಶದಲ್ಲಿ ಉದ್ಯೋಗಗಳಿಲ್ಲ, ಪಕೋಡ ಮಾರಿ ಎನ್ನುತ್ತಿದ್ದಾರೆ, ನಿಮಗೆ ಇಂತಹ ಪ್ರಧಾನಿ ಬೇಕಾ? ಎಂದು ಹರಿಹಾಯ್ದರು.

ಶ್ರೀಲಂಕಾ, ಬಾಂಗ್ಲಾದೇಶಗಳಿಗಿಂತಲೂ ದೇಶದ ಆರ್ಥಿಕ ಬೆಳವಣಿಗೆ ದರ ಕುಸಿತ ಕಂಡಿದೆ, ಮೋದಿ ಆರ್ಥಿಕತೆ ಗೆ ಒತ್ತು ಕೊಡುತ್ತಿಲ್ಲ ಎಂದರು. ಭೈರತಿ ಬಸವರಾಜಗೆ ನಾನೇ ಕಾಂಗ್ರೆಸ್ ನಿಂದ ಟಿಕೆಟ್ ಕೊಡಿಸಿದೆ, ನನಗೆ ಮತ್ತು ಪಕ್ಷಕ್ಕೆ ಮೋಸ ಮಾಡಿ ಹೋಗಿದ್ದಾನೆ ಆರೋಪಿಸಿದರು.
15 ಕ್ಷೇತ್ರಗಳಲ್ಲೂ ಅನರ್ಹರು ಸೋಲಲಿದ್ದಾರೆ, ಕೆ.ಆರ್.ಪರಂನಲ್ಲೂ ಭೈರತಿ ಬಸವರಾಜನನ್ನು ಸೋಲಿಸಬೇಕು, ಈ ಮೂಲಕ ಎಲ್ಲ ಅನರ್ಹ ಶಾಸಕರಿಗೆ ಮತ್ತು ಪಕ್ಷಾಂತರಿಗಳಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಮತದಾರರಿಗೆ ಕರೆ ನೀಡಿದರು.
ಬಿ.ಎಸ್.ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ಸುಲ್ತಾನನ್ನು ಹೊಗಳಿದ್ದರು, ಈಗ ಮತಾಂಧ ಎನ್ನುತ್ತಿದ್ದಾರೆ, ಇವರಿಗೆ ನಾಚಿಕೆ ಆಗಬೇಕು ಎಂದರು. ಡಿಸೆಂಬರ್ 09 ರ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಕೊಡಲೇಬೇಕು, ಅವರಿಗೆ ಬಹುಮತ ಸಿಗುವುದಿಲ್ಲ ಎಂದು ಗುಡುಗಿದರು.
ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಡಿಸೆಂಬರ್ 05 ರಂದು ಉಪ ಚುನಾವಣೆ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications