ಗಮನಿಸಿ; ಮುಂದಿನ ಐದು ದಿನಗಳ ಕಾಲ ಬೆಂಗಳೂರಿನಲ್ಲಿ ಸಾಧಾರಣ ಮಳೆ: IMD ಮುನ್ಸೂಚನೆ
ಬೆಂಗಳೂರು, ಜುಲೈ 11: ಜೂನ್‌ನಲ್ಲಿ ಮಳೆ ಕೊರತೆ ಕಂಡು ಬಂದಿದ್ದ ಬೆಂಗಳೂರಿನಲ್ಲಿ ಜುಲೈ ವೇಳೆಗೆ ಮುಂಗಾರು ಚುರುಕುಗೊಂಡಿದೆ. ಸೋಮವಾರ ನಗರದ ಕೆಲವೆಡೆ ತುಂತುರು ಮಳೆ ಸುರಿದರೆ, ಇನ್ನು ಕೆಲವೆಡೆ ಸಾಧಾರಣ ಮಳೆಯಾಗಿದೆ. ಮಂಗಳವಾರವು ಕೂಡ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ವರುಣ ಮಿತ್ರ ಡ್ಯಾಶ್‌ಬೋರ್ಡ್‌ನಿಂದ ಸೋಮವಾರ ಸಂಜೆ 7 ಗಂಟೆಗೆ ದಾಸರಹಳ್ಳಿಯ ಬಾಗಲಕುಂಟೆ ಮತ್ತು ಶೆಟ್ಟಿಹಳ್ಳಿಯಲ್ಲಿ 20 ಮಿಮೀ ಮಳೆ ದಾಖಲಾಗಿದೆ, ನಂತರ ವಿದ್ಯಾರಣ್ಯಪುರದಲ್ಲಿ 17.5 ಮಿಮೀ ಮಳೆಯಾಗಿದೆ.

ಮುಂದಿನ ಎರಡು ದಿನಗಳ ಕಾಲ ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂದು ಬೆಂಗಳೂರು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಮುಂದಿನ ಐದು ದಿನಗಳ ಕಾಲ ನಗರದಲ್ಲಿ ಸಾಧಾರಣ ಮಳೆಯಾಗಲಿದೆ. ಮಾನ್ಸೂನ್ ಮಾರುತಗಳು ಕರ್ನಾಟಕದಲ್ಲಿ ಭಾರೀ ಮಳೆಯನ್ನು ತರುತ್ತಿರುವ ಹಿನ್ನೆಲೆಯಲ್ಲಿ ಭಾರತದ ಐಟಿ ರಾಜಧಾನಿ ಬೆಂಗಳೂರಿನ ನಿವಾಸಿಗಳು ಕಳೆದ ಕೆಲವು ದಿನಗಳಿಂದ ಶೀತದ ಹವಾಮಾನವನ್ನು ಅನುಭವಿಸುತ್ತಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಯ ವಿಜ್ಞಾನಿ ಪ್ರಸಾದ್ ಪ್ರಕಾರ, ನಗರದಲ್ಲಿ ಪ್ರಸ್ತುತ ಶೀತ ಹವಾಮಾನವು ಕರಾವಳಿ ಪ್ರದೇಶ ಮತ್ತು ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆಯ ಕಾರಣವಾಗಿದೆ. ಬೆಂಗಳೂರಿಗೆ ಪಶ್ಚಿಮದಿಂದ ಬಂದ ಗಾಳಿಯ ಉತ್ತಮ ತೇವಾಂಶವನ್ನು ತರುತ್ತದೆ. ಇದರ ಪರಿಣಾಮವಾಗಿ ಶೀತದ ವಾತಾವರಣ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಕರಾವಳಿ ಪ್ರದೇಶದ ಹಲವಾರು ಸ್ಥಳಗಳಲ್ಲಿ ಗಮನಾರ್ಹ ಮಳೆಯಾಗಿದ್ದು, ಉಡುಪಿ ಮತ್ತು ಮೂಲ್ಕಿಯಲ್ಲಿ ಅತಿ ಹೆಚ್ಚು ಅಂದರೆ 18 ಸೆಂ.ಮೀ ಮಳೆ ದಾಖಲಾಗಿದೆ. ನೈಋತ್ಯ ಮಾನ್ಸೂನ್ ಈಗ ರಾಜ್ಯದಲ್ಲಿ ಸಕ್ರಿಯವಾಗಿದ್ದು, ಕರಾವಳಿ ಪ್ರದೇಶಗಳಲ್ಲಿ ಮಳೆಯ ಕೊರತೆ 15% ಕ್ಕಿಂತ ಕಡಿಮೆಯಾಗಿದೆ. ರಾಜ್ಯದಲ್ಲಿ ಒಟ್ಟಾರೆ ಮಳೆ ಕೊರತೆಯೂ ಶೇ.70ರಿಂದ ಶೇ.27ಕ್ಕೆ ಇಳಿಕೆಯಾಗಿದೆ. ದಕ್ಷಿಣ ಒಳನಾಡಿನ ಕರ್ನಾಟಕದ ಭಾಗಮಂಡಲದಲ್ಲಿ ಅತಿ ಹೆಚ್ಚು ಅಂದರೆ 23 ಸೆಂ.ಮೀ ಮಳೆಯಾಗಿದೆ, ನಂತರದ ಸ್ಥಾನದಲ್ಲಿ ವಿರಾಜಪೇಟೆಯಲ್ಲಿ 12 ಸೆಂ.ಮೀ ಮತ್ತು ಕೊಟ್ಟಿಗೆಹಾರ ಶೃಂಗೇರಿಯಲ್ಲಿ 7 ಸೆಂ.ಮೀ. ಮಳೆಯಾಗಿದೆ.
ಮುಂದಿನ ಐದು ದಿನಗಳಲ್ಲಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರುತ್ತದೆ. ಜುಲೈ 11 ಮತ್ತು 12 ರಂದು ಮಳೆ ಅಥವಾ ಗುಡುಗು ಸಹಿತ ಭಾಗಶಃ ಮೋಡ ಕವಿದ ಆಕಾಶವಿರುತ್ತದೆ ಎಂದು IMD ಮುನ್ಸೂಚನೆ ನೀಡಿದೆ. ಜೂನ್‌ನಲ್ಲಿ ಕರ್ನಾಟಕದಲ್ಲಿ ಕೊರತೆಯಾಗಿದ್ದ ಮಳೆ ಈಗಾಗಲೇ ಬರುತ್ತಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಜುಲೈನಲ್ಲಿ ಸಾಮಾನ್ಯ ಅಥವಾ ಸ್ವಲ್ಪ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದರೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳ ಆಗ್ನೇಯ ಜಿಲ್ಲೆಗಳು ಜುಲೈನಲ್ಲಿ ವಾಡಿಕೆಗಿಂತ ಸ್ವಲ್ಪ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಶನಿವಾರ ಮತ್ತು ಭಾನುವಾರ ಕೂಡ ರಾಜ್ಯದ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ರಾಜ್ಯದ ಮಲೆನಾಡು ಭಾಗದಲ್ಲಿ ಕೂಡ ವ್ಯಾಪಕ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾರಿ ಮಳೆಯಾಗುತ್ತಿರುವ ಕಾರಣ ಈ ಜಿಲ್ಲೆಗಳ ನದಿಗಳು ತುಂಬಿ ಹರಿಯುತ್ತಿದ್ದು, ಹಲವು ಕಡೆಗಳಲ್ಲಿ ಪ್ರವಾಹದ ಪರಿಸ್ಥಿತಿ ಸೃಷ್ಠಿಯಾಗಿದೆ.












Click it and Unblock the Notifications