ಮೂಲ- ವಲಸಿಗರ ತಿಕ್ಕಾಟ; ಕಾಂಗ್ರೆಸ್ ತೊರೆಯಲು ಸಿದ್ಧರಾದ ಸಿ.ಎಂ ಇಬ್ರಾಹಿಂ
ಬೆಂಗಳೂರು, ಜನವರಿ 27: ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಬಿ.ಕೆ. ಹರಿಪ್ರಸಾದ್ರವರನ್ನು ನೇಮಕ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ಎಂಎಲ್ಸಿ ಸಿ.ಎಂ ಇಬ್ರಾಹಿಂ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ.
ಗುರುವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಹಿಂದ ನಾಯಕ ಸಿದ್ದರಾಮಯ್ಯಗಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಬಿಟ್ಟಿದ್ದೆವು. ಜೈಲಿನಲ್ಲಿದ್ದು ಕಟ್ಟಿದ್ದ ಪಕ್ಷ ಜೆಡಿಎಸ್ ಬಿಟ್ಟಿದ್ದೆವು ಎಂದರು.

ಒಂದೇ ಬಾರಿಗೆ ಎಲ್ಲ ವಿಚಾರಗಳನ್ನು ಹೇಳುವುದಿಲ್ಲ. ಕಂತು ಕಂತಾಗಿ ಎಲ್ಲಾ ವಿಚಾರಗಳನ್ನು ಹೇಳುತ್ತೇನೆ. ಶೀಘ್ರದಲ್ಲೇ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಹೇಳುವ ಮೂಲಕ ಸಿ.ಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಮುನ್ಸೂಚನೆ ನೀಡಿದರು.
ಮಾತು ಮುಂದುವರೆಸಿದ ಅವರು, ಸಿದ್ದರಾಮಯ್ಯಗೆ ನಾವು ಹೊಸ ರಾಜಕೀಯ ಜೀವನ ಕೊಟ್ಟೆವು. ಅದಕ್ಕೀಗ ಸಿದ್ದರಾಮಯ್ಯ ಹೊಸ ಉಡುಗೊರೆ ನೀಡಿದ್ದಾರೆ. ಅವರು ಕೊಟ್ಟ ಉಡುಗೊರೆ ಖುಷಿಯಿಂದ ಸ್ವೀಕರಿಸುವೆ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುತ್ತಿದ್ದರು. ಇದು ತಿಳಿದು ಬಾದಾಮಿಯಲ್ಲಿ ಎಲ್ಲ ನಾಯಕರನ್ನು ಒಪ್ಪಿಸಿ ನಾಮಪತ್ರ ಹಾಕಿಸಿದ್ದೆ. ಬಾದಾಮಿಯಲ್ಲಿ ಗೆದ್ದು ಶಾಸಕರು ಕೂಡ ಆದರು ಅಂತ ಎಂಎಲ್ಸಿ ಸಿಎಂ ಇಬ್ರಾಹಿಂ ಹೇಳಿದರು.
ವಿಧಾನ ಪರಿಷತ್ ಸ್ಥಾನಕ್ಕೆ ಶೀಘ್ರದಲ್ಲೇ ರಾಜೀನಾಮೆ ನೀಡುತ್ತೇನೆ ಎಂದು ಘೋಷಣೆ ಮಾಡಿದ ಸಿಎಂ ಇಬ್ರಾಹಿಂ, ದೇವೇಗೌಡರನ್ನು ಕೇಳಿ ಮುಂದೆ ತೀರ್ಮಾನ ಮಾಡುತ್ತೇನೆ. ನನಗೆ ಸ್ಥಾನ ತಪ್ಪಿಸಿದ ಬಗ್ಗೆ ಸಿದ್ದರಾಮಯ್ಯ ಉತ್ತರಿಸಬೇಕು. ಡಿ.ಕೆ. ಶಿವಕುಮಾರ್‌ಗೂ ನಮಗೂ ಹೊಂದಾಣಿಕೆಯಾಗಲ್ಲ. ಸಿದ್ದರಾಮಯ್ಯಗೂ ನನಗೆ ಚೆನ್ನಾಗಿತ್ತು. ದೆಹಲಿಯಿಂದ ನನಗೆ ಹಲವು ಕರೆಗಳು ಬಂದಿವೆ. ಎಲ್ಲ ಮಾಹಿತಿ ನನ್ನ ಬಳಿ ಇಟ್ಟುಕೊಂಡಿದ್ದೇನೆ ಎಂದರು.
ಚುನಾವಣಾ ಪ್ರಚಾರ ಮಾಡಲು ಉತ್ತರಪ್ರದೇಶಕ್ಕೆ ಬರುವಂತೆ ವರಿಷ್ಠರು ಕರೆಯುತ್ತಿದ್ದಾರೆ. ಆದರೆ ನಾವೇನು ಅಷ್ಟು ದೊಡ್ಡ ನಾಯಕರೇನು ಅಲ್ಲ. ನಮ್ಮಿಂದ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಾದರೆ ನಿರ್ಧರಿಸುವೆ. ರಾಜಕೀಯ ವಿದ್ಯಮಾನ ನೋಡಿಕೊಂಡು ತೀರ್ಮಾನಿಸುವೆ. ಎಐಸಿಸಿ ನನಗೆ ಸಂಕ್ರಾಂತಿಗೆ ಶುಭಾಶಯವನ್ನು ನೀಡಿದೆ. ಎಐಸಿಸಿ ಗಿಫ್ಟ್ ನೋಡಿ ನನಗೆ ತುಂಬಾ ಸಂತೋಷವಾಗಿದೆ ಎಂದು ವ್ಯಂಗ್ಯವಾಡಿದರು.
ಮಾಧ್ಯಮ, ನ್ಯಾಯಾಂಗದಲ್ಲಿ ಮಾತ್ರ ವಿಶ್ವಾಸ ಉಳಿದಿದೆ ಎಂದ ಸಿಎಂ ಇಬ್ರಾಹಿಂ, ನನಗೆ ಸ್ವಲ್ಪ ಸಾಲ ಇದೆ ಅದನ್ನು ತೀರಿಸಬೇಕಾಗಿದೆ. ಸಾಲ ತೀರಿದ್ದರೆ ಮೊದಲೇ ತೀರ್ಮಾನ ಮಾಡುತ್ತಿದ್ದೆ. ಸಾಲ ತೀರಿಸಿ 8-10 ದಿನದಲ್ಲಿ ತೀರ್ಮಾನ ಮಾಡುತ್ತೇನೆ. ಎಚ್.ಡಿ. ಕುಮಾರಸ್ವಾಮಿ ಇಂದು ಬೆಳಗ್ಗೆ ಕರೆ ಮಾಡಿ ಮಾತನಾಡಿದ್ದಾರೆ. ಕಾಂಗ್ರೆಸ್‌ನ ಕೆಲವು ನಾಯಕರು ಕರೆ ಮಾಡಿ ಮಾತಾಡಿದ್ದಾರೆ. ಅವರು ಹೆಸರು ಹೇಳಿದರೆ ಅವರಿಗೂ ಸಮಸ್ಯೆಯಾಗುತ್ತದೆ. ಕಾಂಗ್ರೆಸ್‌ನವರಿಗೂ ನಮಗೆ ವಿಶ್ವಾಸವಿರುವುದು ನಿಜ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 120ರಿಂದ 80ಕ್ಕೆ ಬಂದಿದೆ. 80ರಿಂದ ಮತ್ತೆ ಎಲ್ಲಿಗೆ ಬರುತ್ತೆಂದು ನೀವು ನೋಡಿಕೊಳ್ಳಿ ಎಂದು ಮಾರ್ಮಿಕವಾಗಿ ನುಡಿದರು.
ನಿರ್ಧಾರ ತೆಗೆದುಕೊಳ್ಳಲು ನಾನು ಸ್ವತಂತ್ರನಾಗಿದ್ದೇನೆ
ಸೋನಿಯಾ ಗಾಂಧಿ ನಮ್ಮ ಮೇಲಿದ್ದ ಭಾರ ಕಡಿಮೆ ಮಾಡಿದ್ದಾರೆ. ಈಗ ನಿರ್ಧಾರ ತೆಗೆದುಕೊಳ್ಳಲು ನಾನು ಸ್ವತಂತ್ರನಾಗಿದ್ದೇನೆ. ಸಿದ್ದರಾಮಯ್ಯರಿಂದಲೇ ನಾನು ಕಾಂಗ್ರೆಸ್‌ಗೆ ಬಂದೆ. ಸಿದ್ದರಾಮಯ್ಯ ಸಲುವಾಗಿ ದೇವೇಗೌಡರನ್ನು ಬಿಟ್ಟು ಬಂದೆ. 1996ರಲ್ಲಿ ರಾಜ್ಯಸಭೆ ಟಿಕೆಟ್ ಘೋಷಿಸಿ ಕ್ಯಾನ್ಸಲ್ ಮಾಡಿದರು. ಆಗ ಕಾಂಗ್ರೆಸ್ ಪಕ್ಷ ಬಿಟ್ಟೆ, ಆಗ ಕಾಂಗ್ರೆಸ್ ಎಲ್ಲಿ ಹೋಯ್ತು? 20 ವರ್ಷದ ಬಳಿಕ ಕಾಂಗ್ರೆಸ್ ಅದೇ ರೀತಿ ಮಾಡಿದೆ ಎಂದು ಬೆಂಗಳೂರಿನಲ್ಲಿ ಸಿಎಂ ಇಬ್ರಾಹಿಂ ಪಕ್ಷ ತೊರೆಯುವ ಹೇಳಿಕೆ ನೀಡಿದ್ದಾರೆ.
ಮೂಲ- ವಲಸಿಗರ ನಡುವೆ ಒಳಬೇಗುದಿ
ವಿಧಾನ ಪರಿಷತ್ ಸದಸ್ಯತ್ವದಿಂದ ಎಸ್.ಆರ್. ಪಾಟೀಲ್ ನಿವೃತ್ತಿಯಾದ ನಂತರ ತೆರವಾಗಿದ್ದ ವಿಧಾನ ಪರಿಷತ್ ವಿಪಕ್ಷ ನಾಯಕನ ಹುದ್ದೆಗೆ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಎಐಸಿಸಿ ನೇಮಿಸಿದೆ.
ಇತ್ತೀಚೆಗೆಯಷ್ಟೇ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಎಂ.ಬಿ. ಪಾಟೀಲರನ್ನು ಎಐಸಿಸಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಈಗ ಮೂಲ ಕಾಂಗ್ರೆಸ್ ನಾಯಕ ಹರಿಪ್ರಸಾದ್ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದೆ.
ವಿಪಕ್ಷ ಉಪ ನಾಯಕರಾಗಿ ಕೆ. ಗೋವಿಂದರಾಜ್ ಆಯ್ಕೆ ಆಗಿದ್ದಾರೆ. ಚೀಫ್ ವಿಪ್ ಆಗಿ ಪ್ರಕಾಶ್ ರಾಥೋಡ್ ನೇಮಕವಾಗಿದ್ದಾರೆ. ಬಿ.ಕೆ. ಹರಿಪ್ರಸಾದ್ ನೇಮಕ ಮಾಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯಗೆ ಮೂಲ ಕಾಂಗ್ರೆಸ್ಸಿಗರು ಟಕ್ಕರ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಪರಿಷತ್ ವಿಪಕ್ಷ ನಾಯಕನ ಹುದ್ದೆಗೆ ಎಂಎಲ್‌ಸಿ ಸಿಎಂ ಇಬ್ರಾಹಿಂ ಪರ ಸಿದ್ದರಾಮಯ್ಯ ಲಾಬಿ ಮಾಡಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಹಿರಿಯ ನಾಯಕರು ಬಿ.ಕೆ. ಹರಿಪ್ರಸಾದ್ ಪರವಾಗಿ ಲಾಬಿ ಮಾಡಿದ್ದರು.
Recommended Video
ಎಂ.ಬಿ ಪಾಟೀಲ್‍ರನ್ನು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿಸಿ ಮೂಲ ಡಿ.ಕೆ. ಶಿವಕುಮಾರ್‌ಗೆ ಟಕ್ಕರ್ ನೀಡಿದ್ದ ಸಿದ್ದರಾಮಯ್ಯಗೆ ಈಗ ಮೂಲ ಕಾಂಗ್ರೆಸ್ಸಿಗರು ಟಕ್ಕರ್ ನೀಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ.












Click it and Unblock the Notifications