Hosakote : ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ ಪತ್ನಿ ಕಾರಿನ ಮೇಲೆ ಕಲ್ಲು ತೂರಾಟ: ಕಿಡಿ ಕಾರಿದ ಶರತ್
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶರತ್ ಬಚ್ಚೇಗೌಡ ಅವರ ಪತ್ನಿ ಪ್ರತಿಭಾ ಶರತ್ ಅವರ ಕಾರಿನ ಮೇಲೆ ಕಿಡಿಗೇಡಿಯೊಬ್ಬ ಕಲ್ಲು ತೂರಾಟ ನಡೆಸಿದ್ದಾನೆ. ಬುಧವಾರ ಬೆಳಿಗ್ಗೆ ಹೊಸಕೋಟೆ ನಗರದ ಪಾರ್ವತಿಪುರ ಎನ್ನುವಲ್ಲಿ ಈ ಘಟನೆ ನಡೆದಿದೆ. ಪ್ರತಿಭಾ ಶರತ್ ತಮ್ಮ ಪತಿಯ ಪರವಾಗಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಪ್ರತಿಭಾ ಶರತ್ ಅವರಿಗೆ ಸೇರಿಗೆ ಇನೋವಾ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕಿಟಕಿ ಗಾಜು ಪುಡಿಯಾಗಿದೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವಕನೊಬ್ಬ ಕಾರಿನ ಗಾಜನ್ನು ಒಡೆದು ಪರಾರಿಯಾಗುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ. ಘಟನೆಯಿಂದಾಗಿ ಹೊಸಕೋಟೆ ನಗರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಚುನಾವಣಾ ಅಧಿಕಾರಿಗಳು ಮತ್ತು ಹೊಸಕೋಟೆ ಪೋಲೀಸರು ಪರಿಶೀಲನೆ ನಡೆಸಿದ್ದಾರೆ.

ಅದೃಷ್ಟವಶಾತ್ ಯುವಕ ಕಾರಿನ ಮೇಲೆ ದಾಳಿ ಮಾಡಿದಾಗ ಪ್ರತಿಭಾ ಶರತ್ ಕಾರಿನಲ್ಲಿ ಇರಲಿಲ್ಲ, ಅವರು ತಿಂಡಿಯನ್ನು ತಿನ್ನಲು ಕಾರ್ಯಕರ್ತರ ಜೊತೆ ಹೋಟೆಲ್‌ಗೆ ತೆರಳಿದ್ದಾಗ ಕಾರಿನ ಮೇಲೆ ದಾಳಿ ಮಾಡಲಾಗಿದೆ ಎಂದು ಶರತ್ ಬಚ್ಚೇಗೌಡ ತಿಳಿಸಿದರು. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಅವರು, ಪೊಲೀಸರು ಕ್ರಮ ತೆಗೆದುಕೊಳ್ಳಲು ವಿಳಂಬ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಘಟನೆ ಬಗ್ಗೆ ಮಾತನಾಡಿದ ಅವರು, "ನನ್ನ ಪರವಾಗಿ ಪ್ರಚಾರ ಮಾಡಲು ಬಂದ ಸಂದರ್ಭದಲ್ಲಿ ಈ ಘಟನೆ ನಡೆಸಿದೆ. ಕಾರಿನ ಗಾಜನ್ನು ಒಡೆದಿರುವ ಕಿಡಿಗೇಡಿ, ಪ್ರತಿಭಾ ಅವರಿಗೆ ಸೇರಿದ ಪರ್ಸ್, ಮೊಬೈಲ್ ಅನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಘಟನೆ ನಡೆದು ಒಂದೂವರೆ ಗಂಟೆಗಳ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ತಾಲೂಕಿನಲ್ಲಿ ಯಾವ ರೀತಿಯ ರಾಜಕಾರಣ ನಡೆಯುತ್ತಿದೆ ಎಂದು ನೋಡಿದರೆ ಬೇಸರವಾಗುತ್ತದೆ" ಎಂದು ಹೇಳಿದರು.
"ನನ್ನ ಪತ್ನಿಯ ಮೇಲೆ ದೂರು ಕೊಟ್ಟಿದ್ದಾರೆ, ಬೆಳಿಗ್ಗೆ ಐದು ಗಂಟೆಗೆ ಬಂದು ಪೌರ ಕಾರ್ಮಿಕರಿಗೆ ಕಂಬಳಿ ಕೊಟ್ಟಿದ್ದು ಅವರ ತಪ್ಪಾ?, ಕಸವನ್ನು ಸ್ವಚ್ಛಗೊಳಿಸಿದ್ದು ತಪ್ಪಾ? ಅವರ ಮೇಲೆ ಎಫ್‌ಐಆರ್ ಹಾಕಿದ್ದಾರೆ. ಅವರ ಧೈರ್ಯವನ್ನು ಕಡಿಮೆ ಮಾಡಲು ಇಂದು ಕಾರಿನ ಮೇಲೆ ದಾಳಿ ಮಾಡಿದ್ದಾರೆ. ನನ್ನ ಮೇಲೆ 4 ಎಫ್‌ಐಆರ್ ದಾಖಲಿಸಿದ್ದಾರೆ, ಪತ್ನಿಯ ಮೇಲೆ ಕೂಡ ಎಫ್‌ಐಆರ್ ಹಾಕಿದ್ದಾರೆ. ನನ್ನ ಮಕ್ಕಳ ಮೇಲೂ ಎಫ್‌ಐಆರ್ ಹಾಕಿಸಲಿ" ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೌರ ಕಾರ್ಮಿಕರಿಗೆ ಬೆಡ್ ಶೀಟ್ ನೀಡಿದ್ದಕ್ಕೆ ಪತ್ನಿ ಪ್ರತಿಭಾ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ.












Click it and Unblock the Notifications