ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಇಟ್ಟ ಮೂವರು ಕಿರಾತಕರು ಸೆರೆ
ಬೆಂಗಳೂರು, ಆ. 13: ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರ ಮನೆ ಅಂಗಳದಲ್ಲಿ ಐಷಾರಾಮಿ ಕಾರುಗಳಿಗೆ ಬೆಂಕಿ ಇಟ್ಟು ಇಟ್ಟಿರುವ ಅರೋಪದ ಮೇಲೆ ಮೂವರು ಆರೋಪಿಗಳನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಎರಡು ದಿನದಲ್ಲಿ ಆರೋಪಿಗಳನ್ನು ಬಂಧಿಸಿದ ಆಗ್ನೇಯ ವಿಭಾಗದ ಪೊಲೀಸರ ಕಾರ್ಯವನ್ನು ಮೆಚ್ಚಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಒಂದು ಲಕ್ಷ ರೂ. ನಗದು ಬಹುಮಾನ ಘೋಷಣೆ ಮಾಡಿದ್ದಾರೆ.
''ಶಾಸಕ ಸತೀಶ್ ರೆಡ್ಡಿ ಅವರ ಮನೆಯಂಗಳದಲ್ಲಿ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದಿದ್ದೇವೆ. ಕೆಲಸದ ವಿಚಾರವಾಗಿ ಬಂಧಿತ ಆರೋಪಿ ಸತೀಶ್ ರೆಡ್ಡಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದ. ಅದಕ್ಕೆ ಆಸ್ಪದ ಕೊಡದ ಹಿನ್ನೆಲೆಯಲ್ಲಿ ಸಂಚು ರೂಪಿಸಿ ಬೆಂಕಿ ಇಟ್ಟಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ,'' ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಶುಕ್ರವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರ ವಿವರ: ಆ. 11 ರಂದು ರಾತ್ರಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಮೂವರು ಆರೋಪಿಗಳ ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದರೆ ಯಾವುದೇ ಮಹತ್ವದ ಸುಳಿವು ಸಿಕ್ಕಿರಲಿಲ್ಲ. ಕಾರಿಗೆ ಬೆಂಕಿ ಹಚ್ಚುವ ಮುನ್ನ ಬೈಕ್ ಕದ್ದಿದ್ದ ಆರೋಪಿಗಳು ಅದರಿಂದಲೇ ಓಡಾಡಿದ್ದರು. ಇದರ ಜಾಡು ಹಿಡಿದು ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು. ಮಡಿವಾಳ ಎಸಿಪಿ ಸುಧೀರ್ ಹೆಗಡೆ ಮತ್ತು ತಾಂತ್ರಿಕ ಸಿಬ್ಬಂದಿ ನೀಡಿದ ಸುಳಿವಿನ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಸಿಟಿವಿ ಹಾಗೂ ಕೃತ್ಯ ನಡೆದ ಸ್ಥಳದಲ್ಲಿ ಟವರ್ ಡಂಪ್ ಮಾಡಿ ತಾಂತ್ರಿಕ ಸಾಕ್ಷ್ಯಾಧಾರ ಸಂಗ್ರಹಿಸಿದ್ದ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆತ ನೀಡಿದ ಮಾಹಿತಿ ಮೇರೆಗೆ ಗಾರ್ವೆಭಾವಿ ಪಾಳ್ಯದಲ್ಲಿದ್ದ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಗಾರ್ವೆಭಾವಿ ಪಾಳ್ಯದ ಸಾಗರ್ (19), ಬೇಗೂರು ನಿವಾಸಿ ಶ್ರೀಧರ್ (20), ಬಂಡೆಪಾಳ್ಯದ ನಿವಾಸಿ ನವೀನ್ ( 22) ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ. ಬಂಧಿತರಲ್ಲಿ ಓರ್ವ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವಾಗ ಕಾಲಿಗೆ ಗಾಯ ಮಾಡಿಕೊಂಡಿದ್ದಾನೆ. ಕುಂಟುತ್ತಾ ಓಡಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಜಾಡು ಆಧರಿಸಿ ಐದು ಪೊಲೀಸ್ ತಂಡ ಶೋಧ ನಡೆಸಿದಾಗ ಕದ್ದ ಪ್ಲಾಟೀನ್ ಬೈಕ್ ನ ಸುಳಿವು ಸಿಕ್ಕಿದೆ.
ಬಂಧಿತ ಸಾಗರ್ ಹತ್ತನೇ ತರಗತಿ ಫೇಲ್ ಆಗಿದ್ದ. ಕೆಲಸ ಕೇಳಿಕೊಂಡು ಎರಡು ಬಾರಿ ಸತೀಶ್ ರೆಡ್ಡಿಯನ್ನು ಭೇಟಿ ಮಾಡಲು ಪ್ರಯತ್ನಿಸಿದ್ದನಂತೆ. ಅದಕ್ಕೆ ಆಸ್ಪದ ಸಿಗದೇ ಹತಾಶನಾಗಿದ್ದ. ಹೀಗಾಗಿ ಸಾಗರ್ ಮತ್ತು ತನ್ನ ಸ್ನೇಹಿತರ ಜತೆ ಸೇರಿ ಕದ್ದ ಬೈಕ್‌ನಲ್ಲಿದ್ದ ಪೆಟ್ರೋಲ್ ನಿಂದಲೇ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮೂವರು ಬೇರ್ಪಟ್ಟು ತಲೆ ಮರೆಸಿಕೊಂಡಿದ್ದರು. ಪೊಲೀಸರಿಗೆ ಗುರುತು ಸಿಗಬಾರದು ಎಂಬ ಕಾರಣಕ್ಕೆ ಬಟ್ಟೆ ಕೂಡ ಬದಲಿಸಿದ್ದರು. ಆದರೆ ತಾಂತ್ರಿಕ ಸಾಕ್ಷ್ಯಾಧಾರ, ಸಿಸಿಟಿವಿ ಹಾಗೂ ಕದ್ದ ಬೈಕ್ ನೀಡಿದ ಸುಳಿವಿನಿಂದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಂತೂ ತಲೆನೋವಾಗಿದ್ದ ಕಾರು ಸುಟ್ಟ ಪ್ರಕರಣವನ್ನು ಬೆಂಗಳೂರು ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ಮಾರ್ಗದರ್ಶನದಲ್ಲಿ ಪ್ರಕರಣ ಪತ್ತೆ ಮಾಡಿದ ಪೊಲೀಸರ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ಸತೀಶ್ ರೆಡ್ಡಿ ಪ್ರತಿಕ್ರಿಯೆ: ಇನ್ನು ಮೂವರು ಬಂಧನವಾಗುತ್ತಿದ್ದಂತೆ ಶಾಸಕ ಸತೀಶ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಹಲವು ದಿನಗಳಿಂದ ಪ್ಲಾನ್ ರೂಪಿಸಿ ಕೃತ್ಯ ಎಸಗಿದ್ದಾರೆ. ಮಾನಸಿಕವಾಗಿ ಬೇರೆ ಆಲೋಚನೆ ಇಟ್ಟುಕೊಂಡಿರುವರೇ ಈ ಕೃತ್ಯ ಎಸಗಿದ್ದಾರೆ. ಅಸಲಿ ಸತ್ಯಾಂಶ ಶೀಘ್ರದಲ್ಲಿಯೇ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.












Click it and Unblock the Notifications