ನಾವು ವಾರ್ನಿಂಗ್ ಕೊಡೋರೆ ಹೊರತು ತಗೊಳರಲ್ಲ!: ಡಿಕೆ ಸುರೇಶ್ ವಾರ್ನಿಂಗ್ ಬಗ್ಗೆ ಸಚಿವ ಎಂಬಿ ಪಾಟೀಲ್ ಹೇಳಿದ್ದಿಷ್ಟು
ಸಿದ್ದರಾಮಯ್ಯ ಅವರೇ ಮುಂದಿನ 5 ವರ್ಷಗಳಿಗೆ ಸಿಎಂ ಎಂದು ಎಂಬಿ ಪಾಟೀಲ್ ಹೇಳಿದ್ದಕ್ಕೆ ಡಿ.ಕೆ. ಸುರೇಶ್ ಎಚ್ಚರಿಕೆ ನೀಡಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ನನಗೆ ಯಾರೂ ವಾರ್ನಿಂಗ್ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಎಂಬಿ ಪಾಟೀಲ್, "ನಾನು ಆಫೀಸ್ ಕಡೆ ಹೋಗುವ ಸಂದರ್ಭದಲ್ಲಿ ಡಿ.ಕೆ. ಸುರೇಶ್ ಪ್ರೀತಿಯಿಂದಲೇ ಪಾಟೀಲರೆ ಎಂದು ಗಟ್ಟಿಯಾಗಿ ಕರೆದರು, ನಾನು ವಾಪಸ್ ಅವರ ಬಳಿ ಬಂದೆ, ಅವರು ಗಟ್ಟಿಯಾಗಿರಿ ಎಂದು ಹೇಳಿದರು, ನಾನು ಈಗ ಆಫೀಸ್‌ಗೆ ಹೋಗುತ್ತಿದ್ದೇನೆ ಆಮೇಲೆ ಮಾತನಾಡುತ್ತೇನೆ ಎಂದು ಹೇಳಿ ಬಂದೆ, ಇದನ್ನು ಬಿಟ್ಟು ನನಗೆ ವಾರ್ನಿಂಗ್ ಕೊಟ್ಟರು ಎನ್ನುವುದು ಸುಳ್ಳು" ಎಂದು ಸ್ಪಷ್ಟನೆ ನೀಡಿದರು.

"ಡಿಕೆ ಸುರೇಶ್ ನನಗೆ ವಾರ್ನಿಂಗ್ ಕೊಟ್ಟಿಲ್ಲ ನಾನು ಕೂಡ ಅವರಿಗೆ ವಾರ್ನಿಂಗ್ ಕೊಟ್ಟಿಲ್ಲ, ನನಗೆ ವಾರ್ನಿಂಗ್ ಕೊಡುವಂತವರೂ ಯಾರೂ ಇಲ್ಲ, ಡಿಕೆ ಶಿವಕುಮಾರ್, ಡಿಕೆ ಸುರೇಶ್ ಅವರಿಗೆ ವಾರ್ನಿಂಗ್ ಕೊಡುವಂತವರೂ ಯಾರೂ ಇಲ್ಲ" ಎಂದು ಹೇಳಿದರು.
ವಾರ್ನಿಂಗ್ ಕೊಡ್ತೀವಿ ಹೊರತು ತಗೊಳಲ್ಲ
ನಂತರ ಮಾತು ಮುಂದುವರೆಸಿದ ಅವರು, "ವಾರ್ನಿಂಗ್ ಎನ್ನುವುದೆಲ್ಲ ನಮ್ಮ ಡಿಕ್ಷನರಿಯಲ್ಲಿ ಇಲ್ಲ, ನಾವು ವಾರ್ನಿಂಗ್ ಕೊಡುವವರೆ ಹೊರತು ತೆಗೆದುಕೊಳ್ಳುವವರಲ್ಲ, ಸುಮ್ಮನೆ ಅವರ ಹೆಸರನ್ನು ತಪ್ಪಾಗಿ ಬಿಂಬಿಸುವುದು ಬೇಕಾಗಿಲ್ಲ. ನಾನು ಮುಂದೆ ಹೋಗುತ್ತಿದ್ದಾಗ ಡಿಕೆ ಸುರೇಶ್ ಅವರು ಪ್ರೀತಿಯಿಂದ ಎಂಬಿ ಪಾಟೀಲರೇ ಅಂತ ಕರೆದರು, ನಾಣು ವಾಪಸ್ ಬಂದ ನಂತರ ಪ್ರೀತಿಯಿಂದ ಗಟ್ಟಿಯಾಗಿ ಇರಿ ಅಂದ್ರು, ಪ್ರೀತಿಯಿಂದಲೇ ಅವರು ಮಾತನಾಡಿಸಿದರು, ನಾನು ಆಮೇಲೆ ಸಿಗುತ್ತೇನೆ ಎಂದು ಬಂದೆ" ಇಷ್ಟೇ ಆಗಿರುವುದು ಎಂದು ಹೇಳಿದರು.
"ಸುಮ್ಮನೆ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ, ನಾನು ಎಂಬಿ ಪಾಟೀಲ್ ಯಾರಿಂದಲೂ ವಾರ್ನಿಂಗ್ ಮಾಡಿಸಿಕೊಳ್ಳುವಷ್ಟು ದುರ್ಬಲವಾಗಿಲ್ಲ, ಡಿಕೆ ಸುರೇಶ್ ಕೂಡ ವಾರ್ನಿಂಗ್ ಮಾಡಿಸಿಕೊಳ್ಳುವಷ್ಟು ದುರ್ಬಲವಾಗಿಲ್ಲ, ನಮ್ಮ ಸಂಬಂಧ ಚನ್ನಾಗಿದೆ, ಈ ರೀತಿ ತಪ್ಪಾಗಿ ಬಿಂಬಿಸುವ ಕೆಲಸ ಆಗಬಾರದು" ಎಂದು ಸ್ಪಷ್ಟನೆ ನೀಡಿದರು.
"ನಾನು ಬಿಜಾಪುರದವನು ನಾನು ಯಾರಿಗೂ ಹೆದರುವುದಿಲ್ಲ, ನನಗೆ ಯಾರೂ ಬೆದರಿಕೆ ಹಾಕುವುದು, ವಾರ್ನಿಂಗ್ ಮಾಡುವುದಿಲ್ಲ, ನನ್ನ ತಂದೆ ಕೂಡ ನನಗೆ ಬೆರಳು ತೋರಿಸಿಲ್ಲ. ನಮ್ಮ ಮತ್ತು ಡಿಕೆ ಸುರೇಶ್ ಅವರ ಬಾಂಧವ್ಯ ಚನ್ನಾಗಿದೆ. ಅವರು ತಪ್ಪಾಗಿ ನಡೆದುಕೊಂಡಿಲ್ಲ, ಅವರು ಹಂಗೆ ಮಾಡಿದ್ದರೆ ನಾನು ಅದಕ್ಕೆ ಉತ್ತರ ಕೊಡುತ್ತಿದ್ದೆ" ಎಂದು ಹೇಳಿದರು.
ಇನ್ನು ಸಿದ್ದರಾಮಯ್ಯ ಅವರು ಸಿಎಂ ಅವಧಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದಂತೆ ಎಂಬಿ ಪಾಟೀಲ್ ಪದೇ ಪದೇ ಅದನ್ನೇ ಕೇಳಬೇಡಿ, ನಾನು ಈಗಾಗಲೇ ಅದರ ಬಗ್ಗೆ ಸ್ಪಷ್ಟನೆ ಕೊಟ್ಟಾಗಿದೆ. ಮತ್ತೆ ಮತ್ತೆ ಅದೇ ಮಾತನಾಡಲು ಸಾಧ್ಯವಿಲ್ಲ. ಅದನ್ನು ನೀವು ಕೆದಕಲು ಹೋಗಬೇಡಿ.












Click it and Unblock the Notifications