ಬೆಂಗಳೂರು 2ನೇ ಏರ್‌ಪೋರ್ಟ್ ವಿಚಾರದಲ್ಲಿ ಡಿ.ಕೆ.ಶಿವಕುಮಾರ್‌ಗೆ ಬಿಗ್ ಶಾಕ್
ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭರದ ಸಿದ್ಧತೆ ನಡೆದಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ತಂಡವು ಈಗಾಗಲೇ ಸ್ಥಳ ಪರಿಶೀಲನೆಗೆ ಅಖಾಡಕ್ಕಿಳಿದಿದೆ. ಈ ಹೊಸ ಏರ್‌ಪೋರ್ಟ್‌ಗಾಗಿ ಹಲವು ಜಿಲ್ಲೆಗಳಿಂದ ಪ್ರಸ್ತಾವನೆ ಬಂದಿತ್ತು. ತುಮಕೂರು ಭಾಗದಲ್ಲಿ ನಿರ್ಮಾಣ ಮಾಡುವಂತೆಯೂ ಒತ್ತಾಯ ಕೇಳಿಬಂದಿತ್ತು. ಆದರೆ ಅಂತಿಮವಾಗಿ ಕನಕಪುರ ರಸ್ತೆಯಲ್ಲಿ ಎರಡು ಜಾಗ ಹಾಗೂ ಕುಣಿಗಲ್ ಬಳಿ ಒಂದು ಜಾಗವನ್ನು ಗುರುತು ಮಾಡಿ, ಈ ಪೈಕಿ ಒಂದು ಜಾಗ ಫೈನಲ್ ಮಾಡುವಂತೆ ಕೇಂದ್ರಕ್ಕೆ ಕೋರಲಾಗಿತ್ತು. ಆದರೆ ಎರಡನೇ ಏರ್‌ಪೋರ್ಟ್ ವಿಚಾರದಲ್ಲಿ ಮುತುವರ್ಜಿ ವಹಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ದೊಡ್ಡ ಶಾಕ್ ಎದುರಾಗಿದೆ.
ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕಾಗಿ ಕನಕಪುರ ರಸ್ತೆಯಲ್ಲಿ ಎರಡು ಜಾಗಗಳನ್ನು ಫೈನಲ್ ಮಾಡಲಾಗಿದೆ. ಬಹುತೇಕ ಈ ಎರಡರಲ್ಲೇ ಒಂದು ಜಾಗ ಫಿಕ್ಸ್ ಆಗುವುದು ಪಕ್ಕಾ ಎಂದೇ ಹೇಳಲಾಗುತ್ತಿತ್ತು. ಇದರಿಂದ ಡಿಕೆ ಶಿವಕುಮಾರ್ ಅವರು ತವರು ಕ್ಷೇತ್ರವಾದ ಕನಕಪುರ ಹಾಗೂ ರಾಮನಗರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶವಿತ್ತು. ಮುಖ್ಯವಾಗಿ ಬಿಡದಿ ಪ್ರದೇಶಕ್ಕೂ ಇದರಿಂದ ಅನುಕೂಲ ಮಾಡಿಕೊಡುವ ಪ್ಲ್ಯಾನ್ ಇತ್ತು. ಆದರೆ, ಈ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.

ಈ ಹೊಸ ಏರ್‌ಪೋರ್ಟ್ ಅನ್ನು ಬಿಡದಿ ಸಮೀಪವೇ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಯೂ ಇತ್ತು. ಆದರೆ ನಾವು ಬಿಡದಿಯಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುತ್ತಿಲ್ಲ. ಬಿಡದಿ ಬಳಿ ಡಿಕೆ ಶಿವಕುಮಾರ್ ಅವರು ಲೇಔಟ್ ಮಾಡುತ್ತಿದ್ದಾರೆ. ಬಿಡದಿ ಬಳಿ ಗ್ರೇಟರ್ ಬೆಂಗಳೂರು ಮಾಡುತ್ತಿದ್ದಾರೆ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಇದರಿಂದ ಡಿಕೆ ಶಿವಕುಮಾರ್ ಅವರ ಆಸೆಯಂತೆ ಬಿಡದಿ ಬಳಿ ಏರ್‌ಪೋರ್ಟ್ ಕನಸಿಗೆ ಎಳ್ಳುನೀರು ಬಿಟ್ಟಂತಾಗಿದೆ.
ಎರಡನೇ ಏರ್‌ಪೋರ್ಟ್ ನಿರ್ಮಾಣಕ್ಕೆ ಬಿಡದಿ ಸೂಕ್ತವಲ್ಲ ಎಂದು ಈ ಹಿಂದೆಯೇ ಟಿಕ್ನಿಕಲ್ ಟೀಂ ವರದಿ ನೀಡಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಮಾತನಾಡಿರುವ ಎಂಬಿ ಪಾಟೀಲ್ ಅವರು ಕನಕಪುರದ ರಸ್ತೆಯ ಹಾರೋಹಳ್ಳಿ ಬಳಿ ಒಂದು ಜಾಗ ಗುರುತಿಸಲಾಗಿದೆ. ಕುಣಿಗಲ್ ರಸ್ತೆ ಬಳಿ ಮತ್ತೊಂದು ಜಾಗ ನೋಡಿದ್ದೇವೆ. ಇವು ವಿಧಾನಸೌಧಕ್ಕೆ 50 ಕಿ.ಮೀ ದೂರದಲ್ಲಿವೆ. ಬಿಡದಿ ಬಳಿ ಏರ್‌ಪೋರ್ಟ್ ನಿರ್ಮಾಣ ಮಾಡಲ್ಲ ಎಂದಿದ್ದಾರೆ.

ವಿಮಾನ ನಿಲ್ದಾಣ ಪ್ರಾಧಿಕಾರದ ತಂಡವು ಇನ್ನೆರಡು ದಿನ ಇಲ್ಲೇ ಇದ್ದು ಸ್ಥಳ ಪರಿಶೀಲನೆ ಮಾಡುತ್ತಾರೆ. ನಾವು ತಿಳಿಸಿರುವ ಜಾಗಗಳನ್ನು ವೀಕ್ಷಣೆ ಮಾಡಿ ನಂತರ ದೆಹಲಿಗೆ ತೆರಳುತ್ತಾರೆ. ಬಳಿಕ ಅವರು ಪರಿಶೀಲಿಸಿದ ಜಾಗಗಳ ಬಗ್ಗೆ ವರದಿ ಕೊಡುತ್ತಾರೆ ಎಂದು ಹೇಳಿದ್ದಾರೆ. ನಂತರ ಈ ಬಗ್ಗೆ ದೆಹಲಿಯಿಂದಲೇ ಫೈನಲ್ ಜಾಗದ ಬಗ್ಗೆ ಅಂತಿಮ ವರದಿ ಬರುತ್ತೆ. ಇದಾದ ಮೇಲೆ ನಾವು ಸಮಗ್ರ ಯೋಜನಾ ವರದಿ (DPR) ಮಾಡಬೇಕಾಗುತ್ತೆ. ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಯಾವ ಕಂಪನಿಗಳು ಮುಂದೆ ಬರುತ್ತವೆ ಎಂಬುದನ್ನು ನೋಡಬೇಕಿದೆ. ಈ ಬಗ್ಗೆ ಕ್ಯಾಬಿನೆಟ್‌ನಲ್ಲೂ ಚರ್ಚಿಸಬೇಕು ಅಲ್ಲಿ ಒಪ್ಪಿಗೆ ಪಡೆದ ನಂತರವೇ ಅಂತಿಮ ರೂಪ ಪಡೆಯಲಿದೆ ಎಂದು ಸಚಿವ ಎಂಬಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ನಗರದ ಉದ್ದೇಶಿತ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಗುರುತಿಸಿರುವ ಮೂರು ಸ್ಥಳಗಳ ಪೈಕಿ ಕನಕಪುರ ರಸ್ತೆಯಲ್ಲಿರುವ ಎರಡು ಜಾಗಗಳನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI) ಉನ್ನತ ಮಟ್ಟದ ತಂಡವು ಮಂಗಳವಾರ ಪರಿಶೀಲನೆ ನಡೆಸಿದೆ. ಬಳಿ ಆ ತಂಡದ ಸದಸ್ಯರು ಸಚಿವ ಎಂಬಿ ಪಾಟೀಲ್ ಅವರನ್ನು ಭೇಟಿಯಾಗಿ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಉದ್ದೇಶಿತ ವಿಮಾನ ನಿಲ್ದಾಣದ ಅಗತ್ಯ, ಬೆಂಗಳೂರಿನ ನಾಗರಿಕ ಮತ್ತು ಕೈಗಾರಿಕಾ ಅಗತ್ಯ ಇತ್ಯಾದಿಗಳನ್ನು ತಂಡದ ಸದಸ್ಯರಿಗೆ ವಿವರಿಸಿ, ಪ್ರಾತ್ಯಕ್ಷಿಕೆ ಪ್ರದರ್ಶಿಸಿ, ಪಾರದರ್ಶಕವಾಗಿ ಸ್ಥಳ ಗುರುತಿಸುವ ಕೆಲಸ ಆಗಲಿ ಎಂದು ಸಲಹೆ ಕೂಡ ನೀಡಿದ್ದಾರೆ. ಈ ತಂಡವು ಬುಧವಾರದಂದು ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಬಳಿಕ ಪ್ರಾಧಿಕಾರದ ಅಭಿಪ್ರಾಯ ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಂಬಿ ಪಾಟೀಲ್ ಹೇಳಿದ್ದಾರೆ.












Click it and Unblock the Notifications