ವೈರಲ್ ವಿಡಿಯೋ; ಪೊಲೀಸ್ ಅಲ್ಲ ಚಾಲಕನ ವಿರುದ್ಧ ಎಫ್‌ಐಆರ್
ಬೆಂಗಳೂರು, ಸೆಪ್ಟೆಂಬರ್ 22 : ಬೆಂಗಳೂರು ಸಂಚಾರಿ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಮಿನಿ ಟ್ರಕ್ ಚಾಲಕನ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆಗಿತ್ತು. ಈಗ ಪೊಲೀಸರು ಚಾಲನಕ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ.
ಹೆಡ್ ಕಾನ್‌ಸ್ಟೇಬಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಕೇಳಿ ಬಂದಿದೆ. ಆದರೆ, ಎಸ್. ಜೆ. ಪಾರ್ಕ್ ಠಾಣೆ ಪೊಲೀಸರು ಶನಿವಾರ ಮಿನಿ ಟ್ರಕ್ ಚಾಲಕನ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ. ಹೆಡ್ ಕಾನ್‌ಸ್ಟೇಬಲ್ ವಿರುದ್ಧ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.
ಹೆಡ್ ಕಾನ್‌ಸ್ಟೇಬಲ್ ಮಹಾಸ್ವಾಮಿ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿದೆ. ತಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಚಾಲಕ ವಾಹನವನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ದೂರು ನೀಡಲಾಗಿದೆ.

ಮಿನಿ ಟ್ರಕ್ ಚಾಲಕನ ಮೇಲೆ ಹೆಡ್ ಕಾನ್‌ಸ್ಟೇಬಲ್ ಮಹಾಸ್ವಾಮಿ ಹಲ್ಲೆ ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಅವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಎಷ್ಟು ದಿನದ ಸಮಯ ಬೇಕು? ಎಂಬುದನ್ನು ಅವರೇ ಹೇಳಬೇಕು.
ಹೆಡ್ ಕಾನ್‌ಸ್ಟೇಬಲ್ ಮಹಾಸ್ವಾಮಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಹಲವು ಕಡೆ ವಿಡಿಯೋ ವೈರಲ್ ಆಗಿದೆ. ಆದರೆ, ಪೊಲೀಸರು ಮಾತ್ರ ಮಹಾಸ್ವಾಮಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ಆಗಿದ್ದೇನು?: ನಗರದ ಟೌನ್ ಹಾಲ್ ಮುಂದೆ ಮಿನಿ ಟ್ರಕ್ ತಡೆದಿದ್ದ ಸಂಚಾರಿ ಪೊಲೀಸರು ತಪಾಸಣೆ ನಡೆಸಿದ್ದರು. ಮಹಾಸ್ವಾಮಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಟ್ರಕ್ ಚಾಲಕನನ್ನು ಠಾಣೆಗೆ ಕರೆದೊಯ್ಯುತ್ತಿದ್ದರು. ಮಾರ್ಗ ಮಧ್ಯೆ ಚಾಲಕನ ಮೇಲೆ ಅವರು ಹಲ್ಲೆ ಮಾಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದೆಲ್ಲವನ್ನೂ ಚಾಲಕ ವಿಡಿಯೋ ಮಾಡಿದ್ದ.












Click it and Unblock the Notifications