ಬೆಂಗಳೂರಲ್ಲಿ ವಿಳಂಬವಾಗುತ್ತಿದೆ ನಮ್ಮ ಮೆಟ್ರೋ ಕಾಮಗಾರಿ!
ಬೆಂಗಳೂರು, ಮೇ 11: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮತದಾನ ಮುಕ್ತಾಯವಾಗಿದೆ. ಆದರೆ ಇನ್ನೂ 4 ಹಂತಗಳಲ್ಲಿ ವಿವಿಧ ರಾಜ್ಯಗಳಲ್ಲಿ ಮತದಾನ ನಡೆಯಬೇಕಿದೆ. ಇದರಿಂದಾಗಿ ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಕಾಮಗಾರಿ ವಿಳಂಬವಾಗುತ್ತಿದೆ.
ಬಿಎಂಆರ್‌ಸಿಎಲ್‌ನ ನಮ್ಮ ಮೆಟ್ರೋ ಕಾಮಗಾರಿಗಳಲ್ಲಿ ಕೆಲವ ನಿರ್ವಹಣೆ ಮಾಡುವ ವಲಸೆ ಕಾರ್ಮಿಕರು ಮತದಾನಕ್ಕೆ ತವರು ರಾಜ್ಯಕ್ಕೆ ತೆರಳಿದ್ದಾರೆ. ಅವರು ವಾಪಸ್ ಆಗುವ ತನಕ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿಗಳು ವೇಗ ಪಡೆದುಕೊಳ್ಳುವುದಿಲ್ಲ.

ನಮ್ಮ ಮೆಟ್ರೋ ಕೆಲವು ಕಾಮಗಾರಿಗಳಲ್ಲಿ ಕೌಶಲ್ಯ ಪಡೆದ ವಲಸೆ ಕಾರ್ಮಿಕರು ಕೆಲಸ ಮಾಡುತ್ತಾರೆ. ಈ ಕಾರ್ಮಿಕರು ಜಾರ್ಖಂಡ್, ಪಶ್ಚಿಮ ಬಂಗಾಳ, ಓಡಿಶಾ ಮತ್ತು ಉತ್ತರ ಪ್ರದೇಶ ರಾಜ್ಯಕ್ಕೆ ಸೇರಿದವರು. ಏಪ್ರಿಲ್‌ನಲ್ಲಿ ಮತದಾನ ಮಾಡಲು ಊರಿಗೆ ಹೋದ ಕಾರ್ಮಿಕರು ಇನ್ನೂ ಮರಳಿಲ್ಲ.
ಕಾರ್ಮಿಕರ ಕೊರತೆ ಇದೆ: ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಮತದಾನ ಮುಗಿದ ಕೂಡಲೇ ನಮ್ಮ ಮೆಟ್ರೋ ಯೋಜನೆಯ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಆಗ ವಿಮಾನ ನಿಲ್ದಾಣ ಸಂಪರ್ಕಿಸುವ ಯೋಜನೆಯು ಕಾರ್ಮಿಕರ ಕೊರತೆಯ ಕಾರಣ ನಿಧಾನವಾಗುತ್ತಿರುವುದು ತಿಳಿದುಬಂದಿದೆ.
ಕೇವಲ ಈ ಯೋಜನೆ ಮಾತ್ರವಲ್ಲ ನಗರದಲ್ಲಿ ನಡೆಯುತ್ತಿರುವ ವಿವಿಧ ಹಂತದ ಮೆಟ್ರೋ ಯೋಜನೆಗೆ ಕಾರ್ಮಿಕರ ಕೊರತೆ ಎದುರಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ ತವರು ರಾಜ್ಯಕ್ಕೆ ಮರಳಿದ ಕಾರ್ಮಿಕರು ಇನ್ನೂ ವಾಪಸ್ ಬಂದಿಲ್ಲ. ಕೆಲವು ರಾಜ್ಯಗಳಲ್ಲಿ ಇನ್ನೂ ಮತದಾನ ಮುಗಿದಿಲ್ಲ.
ಮತದಾನ ಮುಗಿದ ಸ್ಥಳದ ಕಾರ್ಮಿಕರನ್ನು ಸ್ಥಳೀಯ ರಾಜಕೀಯ ನಾಯಕರು ಒತ್ತಾಯದಿಂದ ಕಾರ್ಯಕರ್ತರಾಗಿ ಕೆಲಸ ಮಾಡುವಂತೆ ಉಳಿಸಿಕೊಂಡಿದ್ದಾರೆ. ವಲಸೆ ಕಾರ್ಮಿಕರು ಒಮ್ಮೆ ಊರಿಗೆ ಹೋದರೆ ಒಂದು, ಎರಡು ತಿಂಗಳು ಮರುಳವುದಿಲ್ಲ ಈಗಲೂ ಸಹ ಅದೇ ಆಗಿದೆ ಎನ್ನುತ್ತಾರೆ ಕಾಮಗಾರಿ ಗುತ್ತಿಗೆ ಪಡೆದ ಕಂಪನಿಯ ಅಧಿಕಾರಿಯೊಬ್ಬರು.
ಸುಮಾರು 700 ಕಾರ್ಮಿಕರು ಕೆಲಸ ಮಾಡಬೇಕಾದ ನಮ್ಮ ಮೆಟ್ರೋ ಕಾಮಗಾರಿಯೊಂದರಲ್ಲಿ ಈಗ ಶೇ 40ರಷ್ಟು ಕಾರ್ಮಿಕರ ಕೊರತೆ ಕಾಡುತ್ತಿದೆ. ಕಾರ್ಮಿಕರು ವಾಪಸ್ ಬರಲು ಕಂಪನಿಗಳು ರೈಲ್ವೆ ಟಿಕೆಟ್ ಬುಕ್ ಮಾಡಿಕೊಡುತ್ತಿವೆ. ಕೆಲವು ಅತ್ಯಗತ್ಯ ಕಾರ್ಮಿಕರನ್ನು ವಿಮಾನದ ಮೂಲಕವೂ ಕರೆಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ 4 ಮತ್ತು 5ನೇ ಹಂತದ ಮತದಾನ ಮುಗಿದ ಬಳಿಕ ಕಾರ್ಮಿಕರು ವಾಪಸ್ ಆಗಲಿದ್ದಾರೆ. ಮೇ ಅಂತ್ಯದ ವೇಳೆಗೆ ಪರಿಸ್ಥಿತಿ ಸುಧಾರಣೆಯಾಗಿ, ಕಾಮಗಾರಿಗಳು ವೇಗ ಪಡೆದುಕೊಳ್ಳುವ ಭರವಸೆಯಲ್ಲಿ ಅಧಿಕಾರಿಗಳು ಇದ್ದಾರೆ. ಡಿಸೆಂಬರ್‌ನಲ್ಲಿ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸುವ ಗುರಿಯಲ್ಲಿರುವ ಬಿಎಂಆರ್‌ಸಿಎಲ್ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಿದೆ.
ನಮ್ಮ ಯೋಜನೆಯಲ್ಲಿ ಕೆಲಸ ಮಾಡುವ 300 ಕಾರ್ಮಿಕರು ಏಪ್ರಿಲ್ ಮೊದಲ ವಾರದಲ್ಲಿ ತವರು ರಾಜ್ಯಕ್ಕೆ ತೆರಳಿದ್ದಾರೆ. ಒಬ್ಬರೂ ಸಹ ಇನ್ನೂ ವಾಪಸ್ ಬಂದಿಲ್ಲ. ರೈಲ್ವೆ ಟಿಕೆಟ್ ಬುಕ್ ಮಾಡಿಕೊಟ್ಟರೂ ಸಹ ಮರಳುತ್ತಿಲ್ಲ ಎಂದು ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ಅವರ ಮನೆಯಿರುವ ಪ್ರದೇಶದಲ್ಲಿ ಮತದಾನ ಮುಗಿದಿದೆ. ಆದರೆ ಕಾರ್ಯಕರ್ತರಾಗಿ ರಾಜ್ಯ ಬೇರೆ-ಬೇರೆ ಕಡೆ ಅವರು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕೋವಿಡ್ ಪರಿಸ್ಥಿತಿಯಲ್ಲಿಯೂ ಹೀಗೆ ವಲಸೆ ಕಾರ್ಮಿಕರು ತವರಿಗೆ ಮರಳಿದ ಪರಿಣಾಮ ನಮ್ಮ ಮೆಟ್ರೋ ಕಾಮಗಾರಿಗಳಿಗೆ ಹಿನ್ನಡೆ ಉಂಟಾಗಿತ್ತು. ಈಗ ಸಹ ಮತದಾನದ ಕಾರಣ ಸುಮಾರು 3 ತಿಂಗಳ ಕಾಲ ಕಾರ್ಮಿಕರು ಊರಿಗೆ ತೆರಳಿದ್ದು, ಇರುವ ಕಾರ್ಮಿಕರ ಸಹಾಯದಿಂದಲೇ ಕಾಮಗಾರಿ ನಡೆಸಲಾಗುತ್ತಿದೆ. ಮೇ ಅಂತ್ಯಕ್ಕೆ ಕಾರ್ಮಿಕರು ವಾಪಸ್ ಬರುವ ನಿರೀಕ್ಷೆ ಇದೆ ಎಂದು ಗುತ್ತಿಗೆ ಪಡೆದ ಕಂಪನಿ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.












Click it and Unblock the Notifications