ಸಿಗ್ನಲಿಂಗ್ ದೋಷದಿಂದಾಗಿ 40 ನಿಮಿಷ ಒಂದೇ ಕಡೆ ನಿಂತ ಮೆಟ್ರೋ
ಬೆಂಗಳೂರು, ಮೇ 8: ಬೈಯಪ್ಪನಹಳ್ಳಿ ಮೆಟ್ರೋ ರೈಲು ನಿಲ್ದಾಣ ಸಮೀಪ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಸುಮಾರು 40 ನಿಮಿಷಗಳ ಕಾಲ ನಮ್ಮ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಿತ್ತು.
ಸೋಮವಾರ ಬೆಳಗ್ಗೆ 10.18ರ ಸುಮಾರಿಗೆ ಬೈಯಪ್ಪನಹಳ್ಳಿ ಮೆಟ್ರೋ ರೈಲು ನಿಲ್ದಾಣದ ಪ್ರವೇಶದ್ವಾರದಲ್ಲಿ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಸಮಸ್ಯೆ ಕಂಡುಬಂದಿತ್ತು. ಇದರಿಂದಾಗಿ ಬೈಯಪ್ಪನಹಳ್ಳಿ ನಿಲ್ದಾಣದಿಂದ ಹೊರ ಹೋಗುವ ಮತ್ತು ಒಳ ಬರುವ ಮೆಟ್ರೋ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಪರಿಣಾಮ ಮೆಟ್ರೋ ರೈಲಿನ ಆರು ಟ್ರಿಪ್‌ಗಳು ರದ್ದುಗೊಂಡಿದ್ದವು.ಈ ವಿಷಯ ತಿಳಿಯದ ನೂರಾರು ಮೆಟ್ರೋ ಪ್ರಯಾಣಿಕರು ಇಂದಿರಾನಗರ, ಬೈಯಪ್ಪನಹಳ್ಳಿ, ಎಂಜಿ ರಸ್ತೆ ಇತ್ಯಾದಿ ನಿಲ್ದಾಣಗಳಲ್ಲಿ ರೈಲಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ನೂರಾಋಉ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ಜಮಾಗೊಂಡಿದ್ದರಿಂದ ಗೊಂದಲ ನಿರ್ಮಾಣವಾಗಿತ್ತು. ಕೂಡಲೇ ಮೆಟ್ರೋ ಸಿಬ್ಬಂದಿ ತಾಂತ್ರಿಕ ಅವ್ಯವಸ್ಥೆ ಕುರಿತು ಪ್ರಯಾಣಿಕರಿಗೆ ಮನದಟ್ಟು ಮಾಡಿಕೊಟ್ಟರು.
ಮೆಟ್ರೋ ಸೇವೆ ಸ್ಥಗಿತದ ಕಾರಣ ಅನೇಕ ಪ್ರಯಾಣಿಕರು ಆಟೋ, ಟ್ಯಾಕ್ಸಿ, ಬಿಎಂಟಿಸಿ ಬಸ್‌ಗಳ ಮೊರೆ ಹೋದರು.
ಸಿಗ್ನಲಿಂಗ್ ವ್ಯವಸ್ಥೆಯನ್ನು ಯಾಂತ್ರಿಕವಾಗಿ ಸರಿಪಡಿಸಿದ ಬಳಿಕ 10.57ರಿಂದ ರೈಲು ಸಂಚಾರ ಪುನರ್ ಆರಂಭಗೊಂಡಿತ್ತು. ಬೈಯಪ್ಪನಹಳ್ಳಿ ನಿಲ್ದಾಣದ ಸ್ವಲ್ಪ ದೂರ ರೈಲು ಸಂಚಾರ ಸ್ಥಗಿತಗೊಳಿಸಿದ್ದರಿಂದ ಸುಮಾರು 158 ಪ್ರಯಾಣಿಕರನ್ನು ರೈಲು ಸಂಖ್ಯೆ 21ರಿಂದ ಪಾದಚಾರಿ ಮಾರ್ಗದ ಮೂಲಕ ಬೈಯಪ್ಪನಹಳ್ಳಿ ಪ್ಲಾಟ್‌ಫಾರಂಗೆ ಮೆಟ್ರೋ ಸಿಬ್ಬಂದಿ ಸುರಕ್ಷಿತವಾಗಿ ತಲುಪಿಸಿದ್ದಾರೆ.












Click it and Unblock the Notifications