ಬಸವನಗುಡಿಯಲ್ಲಿ ಹಿಂದು ಆಧ್ಯಾತ್ಮಿಕ ಮತ್ತು ಸೇವಾ ಮೇಳ
ಬೆಂಗಳೂರು, ಡಿ.02: ಧಾರ್ಮಿಕ ಸೇವಾ ಸಂಸ್ಥೆಗಳು ನಡೆಸುತ್ತಿರುವ ರಚನಾತ್ಮಕ ಸಾಮಾಜಿಕ-ಸೇವಾ ಕಾರ್ಯಗಳನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಹಿಂದೂ ಸ್ಪಿರಿಚ್ಯುವಲ್ ಆಂಡ್ ಸರ್ವೀಸಸ್ ಫೌಂಡೇಷನ್ ಸಂಸ್ಥೆಯು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿಸೆಂಬರ್ 9 ರಿಂದ 13 ರ ವರೆಗೆ 'ಹಿಂದು ಆಧ್ಯಾತ್ಮಿಕ ಮತ್ತು ಸೇವಾ ಮೇಳ'ವನ್ನು ಆಯೋಜಿಸಿದೆ.
ಐದು ದಿನಗಳ ಕಾಲ ನಡೆಯಲಿರುವ ಈ ಮೇಳವನ್ನು ಡಿ. 9 ರಂದು ಸಂಜೆ 5.15 ಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಉದ್ಘಾಟಿಸುವರು. ಸುತ್ತೂರು ಮಠದ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸುವರು. ಖ್ಯಾತ ಚಿಂತಕ, ಲೇಖಕ ಎಸ್. ಗುರುಮೂರ್ತಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಅಂದು ಮಧ್ಯಾಹ್ನ 2 ರಿಂದ 3ರ ವರೆಗೆ ಮಾತೃವಂದನಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ, ಕನಕಗಿರಿ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಕಲಬುರ್ಗಿಯ ಬೌದ್ಧವಿಹಾರದ ಸಂಗಾನಂದ ಬಂತೆ, ಇಸ್ಕಾನ್‌ನ ಅಧ್ಯಕ್ಷ ಮಧುಪಂಡಿತ ದಾಸ, ಗುರುದ್ವಾರದ ಮುಖ್ಯಗ್ರಂಥಿ ಜ್ಞಾನಿ ಬಲದೇವ ಸಿಂಗ್, ಕೆರೂರಿನ ಶಾರದಾ ನಿಕೇತನದ ಯತೀಶ್ವರಿ ನೀಲಕಂಠಪ್ರಿಯ ಅವರು ದಿವ್ಯ ಸಾನ್ನಿಧ್ಯ ವಹಿಸುವರು. ಸಂಜೆ 7 ರಿಂದ 9ರ ವರೆಗೆ ಸ್ನೇಹ ಕಪ್ಪಣ್ಣ ಮತ್ತು ತಂಡದವರಿಂದ ವಿಶೇಷ ಭರತನಾಟ್ಯ ಕಾರ್ಯಕ್ರಮ ಭರತೋತ್ಸವ ನಡೆಯಲಿದೆ.

ಡಿ.10ರ ಕಾರ್ಯಕ್ರಮ ವಿವರ
ಡಿ. 10 ರಂದು ಬೆಳಗ್ಗೆ 11 ರಿಂದ 12.30 ರ ತನಕ ಗುರುವಂದನಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಭವತಾರಿಣೀ ವಿವೇಕಮಯೀ ಮಾತಾಜೀ, ಶಿಕ್ಷಣ ತಜ್ಞ ಡಾ. ಕೆ. ಸಮೀರ ಸಿಂಹ ಭಾಗವಹಿಸಲಿದ್ದಾರೆ. ಸಂಜೆ 7 ರಿಂದ 9 ರ ವರೆಗೆ ಧಾತು ತಂಡದಿಂದ ರಾಜಸೂಯ ಯಾಗ ಕುರಿತ ವಿಶೇಷ ಗೊಂಬೆಯಾಟ ಕಾರ್ಯಕ್ರಮ ನಡೆಯಲಿದೆ.

ಡಿ.11ರ ಕಾರ್ಯಕ್ರಮ ವಿವರ- ಸಂಗೀತ ಕಟ್ಟಿ ಕುಲಕರ್ಣಿ
ಡಿ. 11ರಂದು ಬೆಳಗ್ಗೆ 11 ರಿಂದ 12.30ರ ತನಕ ಗೋ-ಗಂಗಾವಂದನಾ ಕಾರ್ಯಕ್ರಮ ನಡೆಯಲಿದ್ದು, ಚಿತ್ರದುರ್ಗದ ಆದಿಜಾಂಬವ ಮಠದ ಶ್ರೀ ಷಡಕ್ಷರಮುನಿ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಎನ್‌ಡಿಆರ್‌ಐನ ಪ್ರಧಾನ ವಿಜ್ಞಾನಿ ಡಾ. ಕೆ.ಪಿ. ರಮೇಶ್ ಉಪಸ್ಥಿತರಿರುವರು. ಸಂಜೆ 7ಕ್ಕೆ ಸಂಗೀತ ಕಟ್ಟಿ ಕುಲಕರ್ಣಿ ಮತ್ತು ತಂಡದವರಿಂದ ಪರಂಪರಾ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಡಿ.12ರ ಕಾರ್ಯಕ್ರಮ : ನಿರುಪಮಾ-ರಾಜೇಂದ್ರ
ಡಿ.12ರಂದು ಬೆಳಗ್ಗೆ 11 ರಿಂದ 12.30 ರ ತನಕ ಪ್ರಕೃತಿವಂದನಾ ಕಾರ್ಯಕ್ರಮದಲ್ಲಿ ಆಯುರ್ ಆಶ್ರಮದ ಸಂತೋಷ್ ಗುರೂಜೀ, ಸಂಸ್ಕೃತ ವಿದ್ವಾಂಸ ಡಾ. ಟಿ.ಎಸ್. ಸತ್ಯವತಿ, ಪರಿಸರ ತಜ್ಞ ಡಾ. ಯಲ್ಲಪ್ಪ ರೆಡ್ಡಿ ಉಪಸ್ಥಿತರಿದ್ದರು. ಸಂಜೆ 7ಕ್ಕೆ ನಿರುಪಮಾ-ರಾಜೇಂದ್ರ ಅವರಿಂದ ಓಜಸ್ ನೃತ್ಯರೂಪಕ ನಡೆಯಲಿದೆ.

ಡಿ.13ರ ಕಾರ್ಯಕ್ರಮ ವಿವರ ಸೂಲಿಬೆಲೆ ಉಪನ್ಯಾಸ
ಡಿ.13ರಂದು ಬೆಳಗ್ಗೆ 11 ರಿಂದ 12.30ರ ತನಕ ಪರಮವೀರ ವಂದನಾ ಕಾರ್ಯಕ್ರಮ ನಡೆಯಲಿದ್ದು, ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ, ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಉಪಸ್ಥಿತರಿರುವರು. ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಸಂಸ್ಕೃತ ಭಾರತೀಯ ಸಂಘಟನಾ ಕಾರ್ಯದರ್ಶಿ ದಿನೇಶ್ ಕಾಮತ್ ಸಮಾರೋಪ ಭಾಷಣ ಮಾಡಲಿದ್ದಾರೆ. ಸಂಜೆ 7 ರಿಂದ 9 ರವರೆಗ ಮಂಗಳೂರಿನ ಸನಾತನ ನಾಟ್ಯಾಲಯದಿಂದ ರಾಷ್ಟ್ರ ದೇವೋ ಭವ ನೃತ್ಯ ರೂಪಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಪ್ರತಿ ದಿನ ವಿಚಾರ ಸಂಕಿರಣ
ಪ್ರತಿದಿನ ಮಧ್ಯಾಹ್ನ 3 ರಿಂದ 5ರ ವರೆಗೆ ವಿಚಾರ ಸಂಕಿರಣಗಳು ನಡೆಯಲಿದೆ. ಡಿ.9 ರಂದು ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ. ನಾಗರಾಜ್ ಅವರು ಸಾಮಾಜಿಕ ಪರಿವರ್ತನಾ ಕೇಂದ್ರವಾಗಿ ದೇವಸ್ಥಾನಗಳು,
ಡಿ.10:ಸಮರ್ಥನಮ್ ಟ್ರಸ್ಟ್‌ನ ಜಿ.ಕೆ. ಮಹಂತೇಶ ಹಾಗೂ ಸಿಸ್ಕೊ ಸಿಸ್ಟಮ್ ಐಟಿ ಕಂಪೆನಿಯ ನಿರ್ದೇಶಕ ಧರ್ಮೇಂದ್ರ ರಂಗ್ಯನ್ ಕಂಪೆನಿಗಳಿಂದ ಆರ್ಥಿಕ ನೆರವು ಪಡೆಯಲು ಸೇವಾ ಸಂಸ್ಥೆಗಳ ಸಿದ್ಧತೆ,

ಸೇವಾ ಮೇಳ, ಬೃಹತ್ ವಾಕಥಾನ್
ಡಿ.11: ಐಐಎಮ್‌ಬಿಯ ಪ್ರಾಧ್ಯಾಪಕ ಡಾ. ಬಿ. ಮಹದೇವನ್ ಭಗವದ್ಗೀತೆಯಲ್ಲಿ ಪ್ರೇರಣಾದಾಯಿ ನೇತೃತ್ವ,
ಡಿ.12: ಖ್ಯಾತ ಚಿಂತಕ, ಲೇಖಕ ಎಸ್. ಗುರುಮೂರ್ತಿ ಹಾಗೂ ವಿಹಿಂಪನ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಗೋಪಾಲ ಅವರಿಂದ ಸೇವೆ ಮತ್ತು ಸಾಮರಸ್ಯ - ವಿಷಯಗಳ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಲಿದ್ದಾರೆ.
ಸೇವಾ ಮೇಳದ ಪ್ರಯುಕ್ತ ಡಿ. 8 ರಂದು ಸೇವೆಗಾಗಿ ನಡಿಗೆ ಎಂಬ ಬೃಹತ್ ವಾಕಥಾನ್ ನಡೆಯಲಿದೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಆನ್‌ಲೈನ್ ಮೂಲಕ 'ಧರ್ಮ ಕ್ವಿಜ್', ಪೋಸ್ಟರ್ ತಯಾರಿಕೆ, ಪ್ರಬಂಧ-ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ
ಪ್ರತಿದಿನ ಸಂಜೆ 4 ರಿಂದ 6 ರ ತನಕ ವಿದ್ಯಾರ್ಥಿಗಳಿಂದ ಯಕ್ಷಗಾನ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ವಿಶೇಷ ಸೇವಾ-ಸಂಸ್ಕೃತಿ ಪ್ರದರ್ಶಿನಿ, ಪುಸ್ತಕ ಮಳಿಗೆಗಳು, ಫುಡ್ ಕೋರ್ಟ್, ಸನಾತನ ಧರ್ಮವೃಕ್ಷ ಮುಂತಾದವುಗಳು ಮೇಳದ ವಿಶೇಷ ಆಕರ್ಷಣೆಗಳಾಗಲಿವೆ. ೨೦೦ ಸಂಘಸಂಸ್ಥೆಗಳು ಹಾಗೂ ೨೫೦ಕ್ಕೂ ಅಧಿಕ ಶಾಲೆಗಳು ಈ ಕಾರ್ಯಕ್ರಮದಲ್ಲಿ ಸಹಭಾಗಿಗಳಾಗಿದ್ದಾರೆ.

ಸಮಾರೋಪಕ್ಕೆ ದಿವ್ಯ ಸಾನಿಧ್ಯ
ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ, ಬೆಳಗಾವಿ ನಾಗನೂರಿನ ರುದ್ರಾಕ್ಷಿ ಮಠದ ಶ್ರೀ ಸಿದ್ಧರಾಮ ಸ್ವಾಮೀಜಿ, ರಾಮಕೃಷ್ಣ ಮಠದ ಶ್ರೀ ಮಂಗಳನಾಥಾನಂದ ಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.












Click it and Unblock the Notifications