KSRTC ಸಿಬ್ಬಂದಿ ವೇತನ ಹೆಚ್ಚಳ ಕುರಿತು ಚರ್ಚಿಸಲು ನಡೆದ ಸಭೆ ವಿಫಲ- ಮತ್ತೆ ಶುರುವಾಗಲಿದೆ ಅನಿರ್ದಿಷ್ಟಾವಧಿ ಮುಷ್ಕರ
ಸಾರಿಗೆ ನೌಕರರ ವೇತನ ಹೆಚ್ಚಳ ಕುರಿತು ಚರ್ಚಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿವಿಧ ಒಕ್ಕೂಟಗಳೊಂದಿಗೆ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಕರೆದಿದ್ದ ಸಭೆ ವಿಫಲವಾಗಿದೆ. ಮತ್ತೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಬೆಂಗಳೂರು, ಮಾರ್ಚ್ 09: ಸಾರಿಗೆ ನೌಕರರ ವೇತನ ಹೆಚ್ಚಳ ಕುರಿತು ಚರ್ಚಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿವಿಧ ಒಕ್ಕೂಟಗಳೊಂದಿಗೆ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಕರೆದಿದ್ದ ಸಭೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಅಡಿಯಲ್ಲಿ ಬರುವ ಸಾರಿಗೆ ನೌಕರರ ಸಂಘದ ಒಂದು ವಿಭಾಗವು ಕಾರ್ಮಿಕ ಇಲಾಖೆಗೆ ಮುಷ್ಕರ ನೋಟಿಸ್ ನೀಡಿದೆ. ಮಾರ್ಚ್ 24 ರಿಂದ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ತಿಳಿಸಿದೆ.
ಈ ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್, ಎಐಟಿಯುಸಿ-ಸಂಯೋಜಿತ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಫೆಡರೇಶನ್, ಕರ್ನಾಟಕ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದರು.

ಸಿಎಂ ಬಸವರಾಜ ಬೊಮ್ಮಾಯಿ ಭೇಟಿ?
'ಸಾರಿಗೆ ಸಚಿವರು ಮೂಲ ವೇತನವನ್ನು ಶೇಕಡಾ 8 ರಷ್ಟು ಹೆಚ್ಚಿಸಲು ಮುಂದಾದರು. ನಾವು ಒಗ್ಗಟ್ಟಿನಿಂದ ಈಗಿನಿಂದಲೇ ಪ್ರಸ್ತಾಪವನ್ನು ತಿರಸ್ಕರಿಸಿದ್ದೇವೆ' ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಶನ್ ಅಧ್ಯಕ್ಷ, ಸಾರಿಗೆ ಕಾರ್ಯಕರ್ತ ಎಚ್ ವಿ ಅನಂತ ಸುಬ್ಬರಾವ್ ಹೇಳಿದ್ದಾರೆ.
ಮೂಲ ವೇತನವನ್ನು ಶೇಕಡಾ 25 ರಷ್ಟು ಹೆಚ್ಚಿಸಬೇಕೆಂದು ನಾವು ಒತ್ತಾಯಿಸಿದ್ದೇವೆ. ಇದಕ್ಕೆ ಸಾರಿಗೆ ನಿಗಮವು ಭಾರಿ ನಷ್ಟದಲ್ಲಿ ನಡೆಯುತ್ತಿದೆ ಎಂಬ ಉತ್ತರ ಬಂದಿದೆ. ಇದು ನಷ್ಟವನ್ನು ಎದುರಿಸುತ್ತಿರುವುದು ನಿಜ. ಆದರೆ, ನಷ್ಟವು ಉದ್ಯೋಗಿಗಳಿಂದ ಸಂಭವಿಸಿಲ್ಲ. ಕಳೆದ ವರ್ಷಗಳಲ್ಲಿ ಅಧಿಕಾರಿಗಳು ಹಾಗೂ ಸರ್ಕಾರ ತೆಗೆದುಕೊಂಡ ತಪ್ಪು ನಿರ್ಧಾರಗಳಿಂದಾಗಿ ನಷ್ಟ ಸಂಭವಿಸಿದೆ' ಎಂದು ಸುಬ್ಬರಾವ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಶ್ರೀರಾಮುಲು ಸಭೆ ನಡೆಸಿ ವೇತನ ಹೆಚ್ಚಳದ ಬಗ್ಗೆ ತೀರ್ಮಾನಿಸಲಿದ್ದಾರೆ ಎನ್ನಲಾಗಿದೆ.
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ಕರ್ನಾಟಕ ರಸ್ತೆ ಸಾರಿಗೆ ನೌಕರರು ಮಾರ್ಚ್ 24 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುವ ಸಾಧ್ಯತೆ ಇದೆ.
BMTC, KSRTC, NWKRTC, KKRTC ಸೇವೆಗಳ ಮೇಲೆ ಪರಿಣಾಮ ಬೀರಲಿದೆ. ತಮ್ಮ ವೇತನ ಹೆಚ್ಚಳದ ಬೇಡಿಕೆಗೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಒಂದು ವಿಭಾಗವು ಮುಷ್ಕರಕ್ಕೆ ಕರೆ ನೀಡಿದೆ.

ಕರ್ನಾಟಕ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಆರ್.ಚಂದ್ರಶೇಖರ್, 'ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ನಾವು ಎಲ್ಲವನ್ನು ಮಾಡಿದ್ದೇವೆ. 2016ರಿಂದ ನಮ್ಮ ನೌಕರರಿಗೆ ವೇತನ ಹೆಚ್ಚಳವಾಗಿಲ್ಲ, 2021ರಲ್ಲಿ ನಡೆದ ಮುಷ್ಕರದ ವೇಳೆ ಅಂದಿನ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ವೇತನ ಪರಿಷ್ಕರಣೆ ಮಾಡುವುದಾಗಿ ಲಿಖಿತ ಭರವಸೆ ನೀಡಿದ್ದರು. ನಮ್ಮ ಇತರೆ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದರು. ಆದರೆ ಎಲ್ಲಾ ಭರವಸೆಗಳು ಕಾಗದದಲ್ಲಿಯೇ ಉಳಿದಿವೆ ಮತ್ತು ನಮ್ಮ ನೌಕರರು ತೊಂದರೆ ಅನುಭವಿಸುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 1 ರಂದು ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭೆಗೆ ಕರೆದಿದ್ದು, ಮುಷ್ಕರಕ್ಕೆ ಕರೆ ನೀಡುವುದಾಗಿ ತಿಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಚಂದ್ರಶೇಖರ್ ಹೇಳಿದ್ದಾರೆ.
ನಾವು ಸೋಮವಾರ ಕಾರ್ಮಿಕ ಆಯುಕ್ತರಿಗೆ 14 ದಿನಗಳ ಮುಷ್ಕರ ನೋಟಿಸ್ ನೀಡುತ್ತೇವೆ. ಮಾರ್ಚ್ 24 ರಿಂದ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ನಮ್ಮ ವೇತನ ಹೆಚ್ಚಳ ಮತ್ತು 2021 ರ ಪ್ರತಿಭಟನೆಯಲ್ಲಿ ಭಾಗವಹಿಸಿ ವಜಾಗೊಂಡ ನೌಕರರನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದು, ನೌಕರರು ಮತ್ತು ಇತರರ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ಗಳನ್ನು ಹಿಂಪಡೆಯುವುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವವರೆಗೆ ನಾವು ಕದಲುವುದಿಲ್ಲ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.












Click it and Unblock the Notifications