ಮಂಗಳಯಾನ ಶೇ 100 ರಷ್ಟು ಸುರಕ್ಷಿತ : ಇಸ್ರೋ
ಬೆಂಗಳೂರು, ನ.11: ಕೆಂಪುಗ್ರಹ ಮಂಗಳನತ್ತ ಸಾಗಲು ಭಾರತ ಆರಂಭಿಸಿದ ಮಂಗಳಯಾನಕ್ಕೆ ಪ್ರಥಮ ಬಾರಿಗೆ ತೊಡಕು ಉಂಟಾಗಿದೆ.ಕಳೆದ ರಾತ್ರಿ ನಿಗದಿತ ಪಥವನ್ನು ಉಪಗ್ರಹ ಕಂಡುಕೊಳ್ಳುವಲ್ಲಿ ವಿಫಲವಾಗಿರುವುದು ಕಂಡು ಬಂದಿದೆ. ಆದರೆ, ಉಪಗ್ರಹ ನೂರಕ್ಕೆ ನೂರರಷ್ಟು ಸುರಕ್ಷಿತವಾಗಿದೆ ಎಂದು ಇಸ್ರ್ಫ್ ಸಂಸ್ಥೆ ವಕ್ತಾರರು ಹೇಳಿದ್ದಾರೆ.
'ನಿಗದಿತ 1 ಲಕ್ಷ ಕಿ.ಮೀ ಪಥದಲ್ಲಿ ಉಪಗ್ರಹ ಕಾಣಿಸಿಕೊಂಡಿರಲಿಲ್ಲ ಹೀಗಾಗಿ ವಿಜ್ಞಾನಿಗಳು ಆತಂಕದ ಕ್ಷಣ ಎದುರಿಸಿದ್ದರು' ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ(ಇಸ್ರೋ) ಅಲ್ಲಗೆಳೆದಿದೆ. ಮತ್ತೆ ಉಪಗ್ರಹವನ್ನು ನಿಗದಿತ ಪಥಕ್ಕೆ ತಳ್ಳಲು ಯತ್ನಿಸಲಾಗುತ್ತಿದೆ. ಯೋಜಿತ ದಾರಿಯಲ್ಳೇ ಉಪಗ್ರಹ ಸಾಗುತ್ತಿದೆ ಎಂದು ಇಸ್ರೋ ಸಂಸ್ಥೆ ವಕ್ತಾರರು ಹೇಳಿದ್ದಾರೆ.
71,623 ಕಿ.ಮೀ ನಿಂದ 1 ಲಕ್ಷ ಕಿ,ಮೀಗೆ ಸಾಗುವ ಯತ್ನದಲ್ಲಿ 78,276 ಕಿ.ಮೀ ದೂರ ಕ್ರಮಿಸಿದ್ದು ವೇಗೋತ್ಕರ್ಷ ಪಡೆಯದೆ 130 ಮೀ/ಸೆಂ ಬದಲಿಗೆ 35 ಮೀ/ಸೆಂಕೆಂಡು ವೇಗ ಪಡೆದುಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.
ಭೂಮಿಯ ಗುರುತ್ವಾಕರ್ಷಣ ಶಕ್ತಿಯಿಂದ ಮುಕ್ತವಾಗಲು ಬೇಖಾದ ಅವಶ್ಯಕ ವೇಗ ಪಡೆದುಕೊಳ್ಳಲು ಸುಮಾರು 1 ತಿಂಗಳುಗಳ ಕಾಲದ ಸಮಯ ಬೇಕಾಗುತ್ತದೆ. ಈ ಕಾಲದಲ್ಲಿ ಭೂಮಿಯ್ ಸುತ್ತ ಉಪಗ್ರಹ ಸುತ್ತಲಿದೆ ಎಂದು ಇಸ್ರೋ ಹೇಳಿದೆ.

ಸುಮಾರು 450 ಕೋಟಿ ರು ವೆಚ್ಚದ ಮಂಗಳಯಾನ ಭಾರತದ ಪ್ರಥಮ ಯತ್ನಕ್ಕೆ ವಿಶ್ವದೆಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ ಕೇಳಿ ಬಂದಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನ.5ರಂದು 350 ಟನ್ ಗಳ ಉಡಾವಣಾ ವಾಹನ ಉಪಗ್ರಹವನ್ನು ಯಶಸ್ವಿಯಾಗಿ ನಭಕ್ಕೆ ಸೇರಿಸಿತ್ತು.
ಡಿ.1ರಂದು ಮಂಗಳನತ್ತ 9 ತಿಂಗಳ ಸುದೀರ್ಘ ಪ್ರಯಾಣ ಆರಂಭಿಸಲಿದೆ. 2014ರ ಸೆ.24ರಂದು ಮಂಗಳನ ಕಕ್ಷೆ ತಲುಪುವ ನಿರೀಕ್ಷೆ ಇದೆ. ಆ ನಂತರ 160 ದಿನಗಳ ಕಾಲ ಉಪಗ್ರಹ ಮಂಗಳನ ಸುತ್ತ ಸುತ್ತಲಿದೆ.
ಮೀಥೇನ್ ಇರುವಿಕೆ ಪತ್ತೆಗೆ ಎಂಎಸ್‌ಎಂ ಹೆಸರಿನ ವೈಜ್ಞಾನಿಕ ಉಪಕರಣವನ್ನು ಉಪಗ್ರಹದಲ್ಲಿದೆ. ಮಂಗಳದ ಮೇಲ್ಮೈ ರಚನೆ ಸೆರೆ ಹಿಡಿಯಲು ಕ್ಯಾಮೆರಾ(ಎಂಸಿಸಿ), ಟಿಐಎಸ್, ಎಲ್ ಎಪಿ ಹಾಗೂ ಎಂಇಎನ್ ಸಿಎ ಉಪಕರಣವಿದೆ. ಉಪಗ್ರಹದ ತೂಕ 1,340 ಕೆ.ಜಿ. ಇದು ಮಂಗಳನ ಕಕ್ಷೆಗೆ ಸೇರಿದಾಗ 582 ಕೆ.ಜಿ.ಗೆ ಕುಗ್ಗಲಿದೆ.
ಉಪಗ್ರಹದ ಮೇಲೆ ಬೆಂಗಳೂರಿನ ಬ್ಯಾಲಾಳು, ಅಂಡಮಾನ್-ನಿಕೋಬಾರ್ ದ್ವೀಪದ ರಾಜಧಾನಿ ಪೋರ್ಟ್ ಬ್ಲೇರ್ , ಮಲೇಷ್ಯಾ ಸಮೀಪದ ಬ್ರೂನೈನಲ್ಲಿರುವ ಇಸ್ರೋ ಕೇಂದ್ರಗಳು ಸಜ್ಜಾಗಿವೆ. ಅಲ್ಲದೆ, ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಭಾರತದ ಎರಡು ಹಡಗುಗಳು ಯಮುನಾ ಹಾಗೂ ನಳಂದ ನಿಗಾ ಇಡಲಿವೆ.
ಸಂವಹನ ವಿಳಂಬ ಕೊರತೆ ಸಂದರ್ಭದಲ್ಲಿ ಉಪಗ್ರಹದ ವ್ಯವಸ್ಥೆ ತನ್ನಷ್ಟಕ್ಕೇ ತಾನೇ ನಿರ್ಧಾರ ಕೈಗೊಳ್ಳುವಂತೆ ಮಾಡಲಾಗಿದೆ. ಹೀಗಾಗಿ ತೊಂದರೆ ಉಂಟಾದರೆ ಪರಿಹರಿಸಲು ಸಾಧ್ಯವಿದೆ ಎಂದು ಇಸ್ರೋ ಹೇಳಿದೆ.












Click it and Unblock the Notifications