Manipur Video: ಮಣಿಪುರದ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ- ಚೆನ್ನೈನಲ್ಲಿ ರೈಲು ತಡೆ
ಬೆಂಗಳೂರು, ಜುಲೈ 21: ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲಾಗಿಸಿ ಮೆರವಣಿಗೆ ನಡೆಸಿದ ಪ್ರಕರಣ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಮಣಿಪುರ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ದೇಶದ ಹಲವು ನಗರಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಶುಕ್ರವಾರ ಬೆಂಗಳೂರಿನ ಟೌನ್‌ಹಾಲ್ ಎದುರು ಧರಣಿ ನಡೆಸಲಾಯಿತು. ಮಣಿಪುರದಲ್ಲಿ ಶಾಂತಿ ನೆಲಸಬೇಕೆಂದು ಒತ್ತಾಯಿಸಲಾಯಿತು.
ಶುಕ್ರವಾರ ಸಂಜೆ ನಡೆಸಲಾದ ಧರಣಿಯಲ್ಲಿ ನಗರದ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕೇಂದ್ರ ಹಾಗೂ ಮಣಿಪುರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ದೇಶದಲ್ಲಿ ಮಹಿಳೆಯರು, ದಲಿತರು, ಬಡವರಿಗೆ ರಕ್ಷಣೆ ಇಲ್ಲವೆಂದು ಆರೋಪಿಸಲಾಯಿತು.

ಮಣಿಪುರ ವಿಚಾರವಾಗಿ ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಚರ್ಚೆ ನಡೆಸಬೇಕೆಂದು ಒತ್ತಾಯಿಸಲಾಯಿತು. ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ರಾಜೀನಾಮೆ ಸಲ್ಲಿಸಬೇಕೆಂದು ಘೋಷಣೆ ಕೂಗಲಾಯಿತು.
ಚೆನ್ನೈನಲ್ಲಿ ಪ್ರತಿಭಟನೆ
ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಚೆನ್ನೈನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಚೆನ್ನೈ ಪೊಲೀಸರು ಮರೀನಾ ಬೀಚ್ ಸುತ್ತಲೂ ಭದ್ರತೆಯನ್ನು ಹೆಚ್ಚಿಸುತ್ತಿದ್ದಾರೆ. ಇಲ್ಲಿ ಪರಿಸ್ಥಿತಿಯ ಕೂಲಂಕಷ ಅವಲೋಕನ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಚೆನ್ನೈನಲ್ಲಿ ರೈಲುಗಳನ್ನು ಸ್ಥಗಿತಗೊಳಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.
ಕೇಂದ್ರಕ್ಕೆ ಎಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್
ಮಹಿಳೆಯರ ಮೇಲೆ ಸಾರ್ವಜನಿಕವಾಗಿ ಲೈಂಗಿಕ ದೌರ್ಜನ್ಯ ನಡೆಸಿರುವ ವಿಡಿಯೊ ಕುರಿತು ಸುಪ್ರೀಂ ಕೊರ್ಟ್ ಪ್ರತಿಕ್ರಿಯಿಸಿದೆ. ಈ ಘಟನೆಯು ಸಾಂವಿಧಾನಿಕ ಹಕ್ಕುಗಳ ತೀವ್ರ ಉಲ್ಲಂಘನೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ಪ್ರಕರಣದ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿವರಣೆಯನ್ನು ಕೇಳಿದೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ನಿರ್ದೇಶನ ನೀಡಲಾಗಿದೆ. ಒಂದು ವೇಳೆ, ಸರ್ಕಾರಗಳು ಕ್ರಮ ಕೈಗೊಳ್ಳದಿದ್ದಲ್ಲಿ, ತಾನೇ ಅಖಾಡಕ್ಕೆ ದುಮುಕುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ನಾಲ್ವರ ಬಂಧನ
ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಇಂಫಾಲ್‌ನ ಅಧಿಕೃತ ಮೂಲಗಳು ಗುರುವಾರ ರಾತ್ರಿ ತಿಳಿಸಿವೆ.

ಮೇ 3 ರಿಂದ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಈ ವರೆಗೆ 165 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಣಿಪುರದ ಜನಸಂಖ್ಯೆಯ ಸುಮಾರು 53 ಪ್ರತಿಶತದಷ್ಟಿರುವ ಮೈತೈಗಳು ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ನಾಗಾಗಳು ಮತ್ತು ಕುಕಿಗಳನ್ನು ಒಳಗೊಂಡಿರುವ ಬುಡಕಟ್ಟು ಜನಾಂಗದವರು ಶೇಕಡಾ 40 ರಷ್ಟಿದ್ದಾರೆ. ಅವರು ಹೆಚ್ಚಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಈ ಎರಡೂ ಸಮುದಾಯಗಳ ನಡುವೆ ಘರ್ಷಣೆ ಏರ್ಪಟ್ಟಿದೆ.












Click it and Unblock the Notifications